Anantha Foundation: ಜಿಲ್ಲಾಧಿಕಾರಿ ಕಚೇರಿ ಮುಂದೆ ಅಣಕು ಶವಯಾತ್ರೆ ಮಾಡಿ ಪ್ರತಿಭಟನೆ, ಎಲ್ಲಿ? ಯಾಕೆ?
ಈಗಾಗಲೆ ಗ್ರಾಮದಲ್ಲಿ ಸ್ಮಶಾನ ಸೇರಿದಂತೆ ಸರ್ಕಾರಿ ಕಟ್ಟಡಗಳು ಮತ್ತು ಬಡ ಕುಟುಂಬಗಳಿಗೆ ನಿವೇಶನಗಳಿಲ್ಲದೆ ಪರದಾಡುತ್ತಿದ್ದರೂ ನಿವೇಶನವನ್ನು ನೀಡದೆ ಖಾಸಗಿ ಪ್ರತಿಷ್ಠಾನಕ್ಕೆ ಯಾಕೆ ನಮ್ಮ ಭೂಮಿ ಕೊಡಬೇಕು ಅಂತ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಗ್ರಾಮದಲ್ಲಿ ಸ್ಮಶಾನ ಮತ್ತು ಸಾರ್ವಜನಿಕರ ಬಳಕೆಗೆ ಮೀಸಲಿಟ್ಟಿದ್ದ ಜಮೀನನ್ನ ರಾಜಕೀಯ ಒತ್ತಡಕ್ಕೆ ಮಣಿದು ಸರ್ಕಾರ ಅನಂತ ಪ್ರತಿಷ್ಠಾನಕ್ಕೆ ಮಂಜೂರು ಮಾಡಲು ಹೊರಟಿದೆ ಎಂದು ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ (Bangalore rural deputy commissioner) ಅಣಕು ಶವಯಾತ್ರೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ ಗ್ರಾಮದಲ್ಲಿ (Hegganahalli Villagers) ಮೂರು ಎಕರೆ ಜಮೀನನ್ನ ಇತ್ತೀಚೆಗೆ ಸರ್ಕಾರ ದಿವಂಗತ ಕೇಂದ್ರ ಸಚಿವ ಅನಂತ ಕುಮಾರ್ ಪತ್ನಿ ನೇತೃತ್ವದ ಅನಂತ ಪ್ರತಿಷ್ಠಾನಕ್ಕೆ (Anantha Foundation) ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಲಾಗಿದೆ. ಹೀಗಾಗಿ ಸರ್ಕಾರದ ಅನುಮೋದನೆಯ ಕ್ರಮವನ್ನ ಖಂಡಿಸಿ ಹೆಗ್ಗನಹಳ್ಳಿ ಗ್ರಾಮಸ್ಥರು ಅಣಕು ಶವಯಾತ್ರೆ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಜತೆಗೆ ಗ್ರಾಮದ ಜಮೀನಿನಿಂದ ಡಿಸಿ ಕಚೇರಿವರೆಗೂ ಅಣಕು ಶವಯಾತ್ರೆ ಮೂಲಕ 15 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡಿದ ಗ್ರಾಮಸ್ಥರು ಡಿಸಿ ಕಚೇರಿ ಮುಂದೆ ಕುಳಿತು ಸರ್ಕಾರ ಮತ್ತು ಅನಂತ ಪ್ರತಿಷ್ಠಾನದ ವಿರುದ್ದ ತೀವ್ರ ಆಕ್ರೋಶ ಹೊರ ಹಾಕಿದರು. ಈಗಾಗಲೆ ಗ್ರಾಮದಲ್ಲಿ ಸ್ಮಶಾನ ಸೇರಿದಂತೆ ಸರ್ಕಾರಿ ಕಟ್ಟಡಗಳು ಮತ್ತು ಬಡ ಕುಟುಂಬಗಳಿಗೆ ನಿವೇಶನಗಳಿಲ್ಲದೆ ಪರದಾಡುತ್ತಿದ್ದರೂ ನಿವೇಶನವನ್ನು ನೀಡದೆ ಖಾಸಗಿ ಪ್ರತಿಷ್ಠಾನಕ್ಕೆ ಯಾಕೆ ನಮ್ಮ ಭೂಮಿ ಕೊಡಬೇಕು ಅಂತ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಮಳೆಯ ನಡುವೆಯೂ ಡಿಸಿ ಕಚೇರಿ ಮುಂದೆ ಧರಣಿ:
ಗ್ರಾಮದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನಕ್ಕೆ ಶವಯಾತ್ರೆ ಮಾಡುತ್ತಾ ಪಾದಯಾತ್ರೆ ಮೂಲಕ ಆಗಮಿಸಿದ ಗ್ರಾಮಸ್ಥರು ನಂತರ ಡಿಸಿ ಕಛೇರಿ ಮುಂಭಾಗ ಕುಳಿತು ಧರಣಿ ನಡೆಸಿದರು. ಈ ವೇಳೆ ಮಳೆ ಆರಂಭವಾದರೂ ಪಟ್ಟುಬಿಡದ ಪ್ರತಿಭಟನಾಕಾರರು ಮಳೆ ನಡುವೆಯೂ ಪ್ರತಿಭಟನೆ ನಡೆಸಿ ಗ್ರಾಮದ ಭೂಮಿಯನ್ನ ಗ್ರಾಮಸ್ಥರಿಗೆ ನೀಡುವಂತೆ ಒತ್ತಾಯಿಸಿದರು. ಅಲ್ಲದೆ ಇದೇ ಭೂಮಿಯನ್ನ ಅನಂತ ಪ್ರತಿಷ್ಠಾನಕ್ಕೆ ನೀಡಲು ಮುಂದಾದರೆ ಮುಂದೆ ವಿಧಾನಸೌಧವರೆಗೂ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.