ಹೊಸಕೋಟೆ: ಸಿಲಿಕಾನ್ ಸಿಟಿ ಸಮೀಪದಲ್ಲೆ ದುರಂತಕ್ಕೆ ಕಾದಿದೆ ಸರ್ಕಾರಿ ಶಾಲೆಯ ಕಟ್ಟಡ, ಬಡ ಮಕ್ಕಳು ಅಲ್ಲಿಯೇ ಕಲಿಯುತ್ತಿದ್ದಾರೆ

ಸಿಲಿಕಾನ್ ಸಿಟಿ ಸಮೀಪದಲ್ಲೆ ದುರಂತಕ್ಕೆ ಕಾದಿದೆ ಸರ್ಕಾರಿ ಶಾಲೆಯ ಕಟ್ಟಡ. ನಿತ್ಯ ಮೇಲ್ಚಾವಣಿ ಹಾಗೂ ಗೋಡೆಗಳಿಂದ ಸಿಮೆಂಟ್ ತಗಡು ಮುರಿದು ಬೀಳ್ತಿದ್ದು ಯಾವಾಗ ಶಾಲೆ ಕುಸಿಯುವುದೋ ಅನ್ನೂ ಆತಂಕವಿದೆ. ಪರಿಸ್ಥಿತಿ ಹೀಗಿರುವಾಗ ಶಾಲೆ ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹೊಸಕೋಟೆ: ಸಿಲಿಕಾನ್ ಸಿಟಿ ಸಮೀಪದಲ್ಲೆ ದುರಂತಕ್ಕೆ ಕಾದಿದೆ ಸರ್ಕಾರಿ ಶಾಲೆಯ ಕಟ್ಟಡ, ಬಡ ಮಕ್ಕಳು ಅಲ್ಲಿಯೇ ಕಲಿಯುತ್ತಿದ್ದಾರೆ
ಸಿಲಿಕಾನ್ ಸಿಟಿ ಸಮೀಪದಲ್ಲೆ ದುರಂತಕ್ಕೆ ಕಾದಿದೆ ಸರ್ಕಾರಿ ಶಾಲೆಯ ಕಟ್ಟಡ
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on: Dec 16, 2023 | 3:05 PM

ಇತ್ತೀಚೆಗಷ್ಟೆ ಸಿಲಿಕಾನ್ ಸಿಟಿಯ ( Silicon City) ಶಿವಾಜಿ ನಗರದಲ್ಲಿ ಸರ್ಕಾರಿ ಶಾಲೆ ರಾತ್ರೋ ರಾತ್ರಿ ಕುಸಿದು ಬಿದ್ದ ಪರಿಣಾಮ ದೊಡ್ಡ ದುರಂತವೊಂದು ಕೂದಲಳತೆ ಅಂತರದಲ್ಲಿ ತಪ್ಪಿತ್ತು. ಆದ್ರೆ ದುರಂತ ತಪ್ಪಿದರೂ ಶಿಕ್ಷಣ ಇಲಾಖೆ (Education) ಮಾತ್ರ ಎಚ್ಚೆತ್ತುಕೊಳ್ಳದೆ ಇನ್ನೂ ಜಾಣ ಕುರುಡುತನ ಪ್ರದರ್ಶನ ಮಾಡ್ತಿದೆ. ಕುಸಿದು ಬೀಳುವ ಸ್ಥಿತಿಯಲ್ಲಿರುವ ಮತ್ತೊಂದು ಸರ್ಕಾರಿ ಶಾಲೆಯೊಂದರಲ್ಲಿ (government school) ಮಕ್ಕಳು ಜೀವವನ್ನ ಕೈಯಲ್ಲಿ ಹಿಡಿದು ಪಾಠ ಕೇಳುವ ದುಃಸ್ಥಿತಿ ಎದುರಾಗಿದೆ. ಅದು ಎಲ್ಲಿ, ಹೇಗಿದೆ ಅನ್ನೂದರ ವಿವರ ಇಲ್ಲಿದೆ.

ಯಾವ ಮೂಲೆ ಯಾವ ಭಾಗದಿಂದ ನೋಡಿದರೂ ಅದು ಶಾಲೆಗೆ ಯೋಗ್ಯವಾದ ಕಟ್ಟಡ ಅಂತ ಅನ್ನಿಸುವುದೇ ಇಲ್ಲ, ಮೇಲೆ ಗಿಡಗಂಟಿಗಳು ಬೆಳೆದಿದ್ದರೆ ತಡೆಗೋಡೆಯಿಂದ ಸಿಮೆಂಟ್ ತಗಡುಗಳು ಮುರಿದು ಬೀಳ್ತಿವಿ. ಒಳಗಡೆ ಹೋದ್ರೆ ಕೂರೋಕ್ಕೆ ನೆಲ ಸಹ ಸರಿಯಾಗಿಲ್ಲ, ಅಷ್ಟೊಂದು ಕಟ್ಟಡ ಹಾನಿಯಾಗಿದೆ. ಆದರೂ ವಿಧಿಯಿಲ್ಲದೆ ಶಿಕ್ಷಕ ಶಾಲೆಯ ಹೊರಗಡೆ ನಿಂತು ಪಾಠ ಕೇಳ್ತಿದ್ರೆ ಮಕ್ಕಳು ಆತಂಕದ ನಡುವೆ ಕಲಿಯುತ್ತಿದ್ದಾರೆ.

ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ (Hoskote) ಎತ್ತಿನೊಡೆಯಪುರ ಅನ್ನೂ ಈ ಗ್ರಾಮದಲ್ಲಿ ಈ ಹಿಂದೆ ಸಾಕಷ್ಟು ಜನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ರು. ಆದ್ರೆ ಸರ್ಕಾರಿ ಶಾಲೆಯು ದಿನಗಳು ಕಳೆದಂತೆ ಪಾಳು ಬಿದ್ದ ಭೂತ ಬಂಗಲೆಯಂತಾಗಿದ್ದು ಜಾನುವಾರುಗಳ ಸಾಕಾಣಿಕೆಗೂ ಯೋಗ್ಯವಿಲ್ಲದಂತಾಗಿದೆ.

ಜೊತೆಗೆ ನಿತ್ಯ ಮೇಲ್ಚಾವಣಿ ಹಾಗೂ ಗೋಡೆಗಳಿಂದ ಸಿಮೆಂಟ್ ತಗಡು ಮುರಿದು ಬೀಳ್ತಿದ್ದು ಯಾವಾಗ ಶಾಲೆ ಕುಸಿದು ಬೀಳುತ್ತೋ ಅನ್ನೂ ಆತಂಕವಿದೆ. ಪರಿಸ್ಥಿತಿ ಹೀಗಿರುವಾಗ ಶಾಲೆ ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಶಿಕ್ಷಕರು ಮಕ್ಕಳನ್ನ ಶಾಲೆಯ ಹೊರಗಡೆ ಕೂರಿಸಿಕೊಂಡು ವಿಧಿಯಿಲ್ಲದೆ ಪಾಠ ಪ್ರವಚನ ಮಾಡ್ತಿದ್ದಾರೆ. ಇನ್ನೂ ಶಾಲೆಯ ದುಃಸ್ಥಿತಿಯನ್ನ ಕಂಡು ಮಕ್ಕಳನ್ನ ಶಾಲೆಗೆ ಕಳಿhಇಸುವುದಕ್ಕೂ ಪೋಷಕರು ಅಂಜುತ್ತಿದ್ದಾರೆ. ಹಣವಂತರು ಖಾಸಗಿ ಶಾಲೆಗೆ ಕಳಿಸಿದ್ರೆ ಬಡವರು ಜೀವ ಭಯದಲ್ಲೆ ಮಕ್ಕಳನ್ನ ಪಾಳು ಬಿದ್ದ ಶಾಲೆಯಲ್ಲಿ ಕಲಿಕೆಗೆ ಕಳಿಸುತ್ತಿದ್ದು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕ್ತಿದ್ದಾರೆ.

ಇತ್ತೀಚೆಗೆ ಬಿದ್ದ ಸೈಕ್ಲೋನ್ ಮಳೆಯಿಂದ ಶಾಲೆಯ ಗೋಡೆಗಳಿಂದ ನೀರೆಲ್ಲ ಒಳಗಡೆ ನುಗ್ಗಿದ್ದು ಪಿಠೋಪಕರಣಗಳು, ದಾಖಲಾತಿಗಳೆಲ್ಲ ನೀರು ಪಾಲಾಗಿವೆ. ಅಲ್ಲದೆ ಶಾಲೆಯ ದುಃಸ್ಥಿತಿ ತಿಳಿದು ವರದಿ ಮಾಡಲು ಟಿವಿ 9 ತಂಡ ಗ್ರಾಮಕ್ಕೆ ತೆರಳುತ್ತಿದ್ದಂತೆ ಎಚ್ಚೆತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆ ಪಕ್ಕದಲ್ಲಿರುವ ಅಂಗನವಾಡಿಗೆ ಮಕ್ಕಳನ್ನ ರವಾನಿಸಿ ಅಲ್ಲಿ ಪಾಠ ಮಾಡುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ.

ಆದ್ರೆ ಇರೋ ಒಂದು ಅಂಗನವಾಡಿ ಕೊಠಡಿಯಲ್ಲಿ ಅಂಗನವಾಡಿ ಮಕ್ಕಳು ಮತ್ತು ಒಂದರಿಂದ ಐದನೆ ತರಗತಿವರೆಗಿನ 9 ಜನ ಮಕ್ಕಳು ಕೂತು ಪಾಠ ಕೇಳಬೇಕಾದ ಸ್ಥಿತಿಯಿದ್ದು ಹೊಸ ಕಟ್ಟಡ ಕಟ್ಟಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿಯವರನ್ನ ಕೇಳಿದ್ರೆ ಶಾಲೆ ಬಗ್ಗೆ ಈ ಹಿಂದಿನಿಂದಲೂ ಮನವಿಯನ್ನ ಸರ್ಕಾರಕ್ಕೆ ನೀಡಿದ್ದು ಕೂಡಲೇ ದುಃಸ್ಥಿತಿಯಲ್ಲಿರುವ ಕಟ್ಡಡವನ್ನ ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟಿಸಲು ಕ್ರಮ ಕೈಗೊಳ್ಳುವುದಾಗಿ ಹೇಳ್ತಿದ್ದಾರೆ.

ಒಟ್ಟಾರೆ ಸರ್ಕಾರ ಶಿಕ್ಷಣಕ್ಕೆ ಅಂತ ಕೋಟಿ ಕೋಟಿ ಹಣ ಖರ್ಚು ಮಾಡ್ತಿರುವುದಾಗಿ ಹೇಳ್ತಿದ್ರು ಸಿಲಿಕಾನ್ ಸಿಟಿ ಹೊರ ವಲಯದಲ್ಲೆ ಸರ್ಕಾರಿ ಶಾಲೆ ಶೋಚನೀಯ ಸ್ಥಿತಿಯಲ್ಲಿರುವುದು ನಿಜಕ್ಕೂ ದುರಂತ. ಇನ್ನಾದ್ರು ಸರ್ಕಾರ ಇತ್ತ ಗಮನಹರಿಸಿ ಹೊಸ ಕಟ್ಟಡ ಕಟ್ಟಿಸುವ ಮೂಲಕ ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕಿದೆ.