ಕೆನಡಾದಲ್ಲಿ ಕನ್ನಡಿಗನ ಕಗ್ಗೊಲೆ! ಹತ್ತಾರು ಬಾರಿ ಗುಂಡು ಹಾರಿಸಿ ಕ್ರೌರ್ಯ

ನೆಲಮಂಗಲ ಮೂಲದ ವ್ಯಕ್ತಿಯನ್ನು ಕೆನಡಾದಲ್ಲಿ ಹತ್ತಾರು ಬಾರಿ ಗುಂಡಿನ ದಾಳಿ ನಡೆಸಿ ಕೊಂದ ಘಟನೆ ಭಾನುವಾರ ನಡೆದಿದೆ. ಮೃತ ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ವುಡ್‌ಬೈನ್ ಮಾಲ್ ಬಳಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬುದು ತಿಳಿದುಬಂದಿದೆ. ಈ ಕ್ರೂರ ಹತ್ಯೆಯಿಂದ ಕುಟುಂಬ ಮತ್ತು ಸಮುದಾಯದಲ್ಲಿ ಆಳವಾದ ದುಃಖ ಆವರಿಸಿದ್ದು, ಹತ್ಯೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ.

ಕೆನಡಾದಲ್ಲಿ ಕನ್ನಡಿಗನ ಕಗ್ಗೊಲೆ! ಹತ್ತಾರು ಬಾರಿ ಗುಂಡು ಹಾರಿಸಿ ಕ್ರೌರ್ಯ
ಮೃತ ಚಂದನ್ ಕುಮಾರ್​

Updated on: Feb 09, 2026 | 2:26 PM

ನೆಲಮಂಗಲ, ಫೆಬ್ರವರಿ 09: ಕೆನಡಾದಲ್ಲಿ ಕೆಲಸ ಮಾಡುತ್ತಿದ್ದ ನೆಲಮಂಗಲದ (Nelamangala) ವ್ಯಕ್ತಿಯ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಆಸ್ಪತ್ರೆಗೆ ಕರೆದೊಯ್ದ ನಂತರ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ವ್ಯಕ್ತಿಯ ಸಾವಿನಿಂದ ಕರ್ನಾಟಕದಲ್ಲಿ ನೆಲೆಸಿರುವ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಏಕಾಏಕಿ ನಡೆದ ಗುಂಡಿನ ದಾಳಿಗೆ ನಿಖರವಾದ ಕಾರಣವೇನು ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.

ನಡೆದಿದ್ದೇನು?

ಮೃತ ವ್ಯಕ್ತಿ ಚಂದನ್ ಕುಮಾರ್ (37) ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದ ಮೂಲದವರಾಗಿದ್ದು, ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಎಲ್ ಅಂಡ್ ಟಿ (L&T) ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿನ್ನೆ (ಫೆ.8) ಚಂದನ್ ಕೆನಡಾದ ವುಡ್​ಬೈನ್ ಮಾಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಸುರಿಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಗುಂಡಿನ ದಾಳಿ ನೋಡಿದ ಸ್ಥಳೀಯ ಹೇಳಿದ್ದೇನು?

ಶೂಟೌಟ್ ನಡೆದ ಸಂದರ್ಭದಲ್ಲಿ ಅದನ್ನು ತನ್ನ ಕಣ್ಣಾರೆ ನೋಡಿದ ಸ್ಥಳೀಯರು ಗಾಬರಿಗೊಂಡಿದ್ದು, ತಾವು ನೋಡಿತ ಭೀಕರತೆಯನ್ನು ವಿವರಿಸಿದ್ದಾರೆ. ಮಾಲ್​ ಹೊರಗೆ ತಮ್ಮ ಕಾರಿನಲ್ಲಿ ಕುಳಿತು ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಓರ್ವ ವ್ಯಕ್ತಿಗೆ 5-6 ಬಾರಿ ಗುಂಡು ಹಾರಿಸಿದ ಶಬ್ಧ ಕೇಳಿತ್ತಂತೆ. ಈ ವೇಳೆ ಕಾರಿನ ಕನ್ನಡಿಯ ಮೂಲಕ ನೋಡಿದಾಗ ವ್ಯಕ್ತಿಯೊಬ್ಬ ಗನ್ ಹಿಡಿದು ನಿಂತಿದ್ದೂ ಕಾಣಿಸಿತೆಂದು ಕೆನಡಾದ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಮೃತನ ತಂದೆ ಹೇಳಿದ್ದೇನು?

YouTube video player

ಚಂದನ್ ಅಪ್ಪಟ ಕನ್ನಡಾಭಿಮಾನಿಯಾಗಿದ್ದ ಎಂದ ಆತನ ಸಂಬಂಧಿ

ಚಂದನ್ ತಂದೆ ನಂದಕುಮಾರ್ ಅವರು ನಿವೃತ್ತ ಶಿಕ್ಷಕರಾಗಿದ್ದು, ತಾಯಿ ಹಾಗೂ ಕುಟುಂಬದವರು ತ್ಯಾಮಗೊಂಡ್ಲು ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ಕೆನಡಾದಲ್ಲಿ ಘಟನೆ ನಡೆದ ತಕ್ಷಣ ಅಲ್ಲಿನ ಪೊಲೀಸರು ಚಂದನ್ ತಂದೆಯನ್ನು ಸಂಪರ್ಕಿಸಿದ್ದರು. ಆದರೆ ಭಾಷೆಯ ವಿಷಯವಾಗಿ ಅಡೆತಡೆಗಳು ಬಂದಾಗ, ಭಾರತೀಯರೊಬ್ಬರ ಮೂಲಕ ಮೃತರ ತಂದೆ-ತಾಯಿಗೆ ವಿಷಯ ರವಾನಿಸಲಾಗಿತ್ತು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಚಂದನ್ ತನ್ನ ಕೆಲಸದ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲಿ ಹರಡುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲಸವನ್ನರಸಿ ಕೆನಡಾಗೆ ಹೋದ ಭಾರತೀಯರಿಗೆ, ಅದರಲ್ಲಿಯೂ ಕನ್ನಡಿಗರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಕನ್ನಡಿಗರಿಗಾಗಿ ಸಂಘಟನೆಗಳ ಮುಖಾಂತರ ಅಗತ್ಯ ಸೇವೆಗಳನ್ನೂ ಒದಗಿಸುತ್ತಿದ್ದರೆಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

ವರದಿ: ಮಂಜುನಾಥ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:20 pm, Mon, 9 February 26

Loading...
Unable to load recommendations.
Follow Us