ಬೆಂಗಳೂರು: ಹೊಸಕೋಟೆಯಲ್ಲಿ ಮತ್ತೆ ಶಾಸಕ, ಸಚಿವರ ನಡುವೆ ಗಲಾಟೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ವೇಳೆ ಸಚಿವ ಎಂಟಿಬಿ ನಾಗರಾಜ್(MTB Nagaraj) ಮತ್ತು ಶಾಸಕ ಶರತ್(Sharath Bache Gowda) ನಡುವೆ ಗಲಾಟೆ ನಡೆದಿದ್ದು ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಕಾರ್ಯಕ್ರಮದಲ್ಲಿ ಸಚಿವರನ್ನೇ ಶಾಸಕ ಶರತ್ ಓವರ್‌ಟೇಕ್ ಮಾಡಿದ್ದಾರೆ.
ಇಂದು ಮುತ್ಸಂದ್ರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಇಬ್ಬರನ್ನೂ ಆಹ್ವಾನಿಸಲಾಗಿತ್ತು. ಮುತ್ಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ವೇಳೆ ಶಾಸಕ ಶರತ್ ಬಚ್ಚೇಗೌಡ, ಸಚಿವ ಎಂಟಿಬಿ ನಾಗರಾಜ್ ಅವರನ್ನು ಓವರ್‌ಟೇಕ್ ಮಾಡಿ ಸಚಿವರಿಗಿಂತ ಮೊದಲೇ ಟೇಪ್ ಕತ್ತರಿಸಿ ಒಳನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಸಚಿವರಿಗೆ ಗೌರವ ಕೊಡುವಂತೆ ಎಂಟಿಬಿ ನಾಗರಾಜ್ ವಾರ್ನ್ ಮಾಡಿದ್ದಾರೆ. ಆಗ ಸಚಿವ ಎಂಟಿಬಿಯನ್ನು ಒಂದುಕಡೆ ತಳ್ಳಿ ಶಾಸಕ ಶರತ್ ಒಳನುಗ್ಗಿದ್ದಾರೆ. ಪಕ್ಕಕ್ಕೆ ಎಡವಿದ ಎಂಟಿಬಿ ನಾಗರಾಜ್, ತಂದೆ, ಮಗನ ದಬ್ಬಾಳಿಕೆ ಹೆಚ್ಚಾಯಿತೆಂದು ಗರಂ ಆಗಿದ್ದಾರೆ. ಗರಂ ನಡುವೆ ಕೈ ಬೆರಳು ತೋರಿಸಿ ಮಾತನಾಡದಂತೆ ಎಂಟಿಬಿಗೆ ಶಾಸಕ ಶರತ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿದೆ.
ಪರಸ್ಪರ ಮುಖಾಮುಖಿಯಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖಂಡರು, ಅಧಿಕಾರಿಗಳು, ಪೊಲೀಸರು ಇಬ್ಬರನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟಿದ್ದಾರೆ. ಈ ಹಿಂದೆಯೂ ಇದೇ ರೀತಿ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ವೇದಿಕೆ ಮೇಲೆ ಶಾಸಕ ಶರತ್ ಬಚ್ಚೇಗೌಡ, ಸಚಿವರ ವಾಕ್ಸಮರ
ಸಚಿವ ಎಂಟಿಬಿ ನಾಗರಾಜ್, ಶಾಸಕ ಶರತ್ ಮಧ್ಯೆ ವಾಕ್ಸಮರ ಮುಂದುವರೆದಿದೆ. ಮುತ್ಸಂದ್ರ ಗ್ರಾ.ಪಂ. ಉದ್ಘಾಟನೆ ಭಾಷಣ ವಿಚಾರಕ್ಕೂ ಗಲಾಟೆ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ಗಲಾಟೆ ಮಾಡಿಕೊಂಡು ಮೊದಲು ನೀವೆ ಮಾತನಾಡಿ ನೀವೆ ಮೊದಲು ಮಾತನಾಡಿ ಎಂದು ಒಬ್ಬರನೊಬ್ಬರು ಗಲಾಟೆ ಮಾಡುತ್ತ ಕೊನೆಗೆ ಭಾಷಣ ಮಾಡದೆ ಹೊರಟ ಹೋಗಿದ್ದಾರೆ.
ಸರ್ಕಾರದ ಪರವಾಗಿ ನಾನು ಉದ್ಘಾಟಕನಾಗಿ ಬಂದಿದ್ದೇನೆ
ಇನ್ನು ಘಟನೆ ಸಂಬಂಧ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಉದ್ಘಾಟನೆಗೆ ಈಶ್ವರಪ್ಪ, ಸುಧಾಕರ್ ಬರದಿದ್ದಕ್ಕೆ ಬಂದಿದ್ದೆ. ಸರ್ಕಾರದ ಪರವಾಗಿ ನಾನು ಉದ್ಘಾಟಕನಾಗಿ ಬಂದಿದ್ದೇನೆ. ಶಾಸಕರು ಅಧ್ಯಕ್ಷತೆ ವಹಿಸಿದ್ದಾರೆ ಹೊರತು ಉದ್ಘಾಟಕರಲ್ಲ. ಈ ಜಿಲ್ಲೆಯನ್ನ ನೋಡಲ್ ಜಿಲ್ಲೆಯಾಗಿ ಪಡೆದುಕೊಂಡಿದ್ದೇನೆ. ನಾವು ಕೊಡುವ ಕಾಮಗಾರಿಗಳೆಲ್ಲ ಇವರೆ ಉದ್ಘಾಟಿಸ್ತಿದ್ದಾರೆ. ನಾವು ಮಾಡಿದರೆ ಮಾತ್ರ ಪ್ರೋಟೋಕಾಲ್ ಅಂತಾರೆ. ಇವರು ಮಾಡಿದ್ರೆ ಪ್ರೋಟೋಕಾಲ್ ಬರಲ್ವ ಎಂದು ಎಂಟಿಬಿ ಪ್ರಶ್ನೆ ಮಾಡಿದ್ದಾರೆ. ಇವರು ಹಿಂದೆ ಹೇಗೆ ಆಡಳಿತ ಮಾಡಿದ್ದಾರೆ ಜನಕ್ಕೆ ಗೊತ್ತು. ಇದೀಗ ಮತ್ತೆ ಅದನ್ನೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಜನರೆ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.
Published On - 12:53 pm, Thu, 10 February 22