ಆನೇಕಲ್… ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಿರುವ ಪುಟ್ಟ ತಾಲೂಕು ಕೇಂದ್ರ. ಆದರೆ ಈ ಆನೇಕಲ್ನಲ್ಲಿ ಪಾತಕಿಗಳು ಕಾಲೂರಿದ್ದಾರೆ. ದಿನೇ ದಿನೆ ಇಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ರಿಯಲ್ ಎಸ್ಟೇಟ್ಗೆ ಪ್ರಶಸ್ತವಾಗಿರುವ ಆನೇಕಲ್ ಅದರಿಂದಲೇ ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ಪಡೆಯುತ್ತಿದೆ. ಆನೇಕಲ್ನಲ್ಲಿ ಸರಣಿ ಹತ್ಯಾ ಪ್ರಕರಣಗಳು ಅಬಾಧಿತವಾಗಿ ನಡೆದಿದ್ದು, ತಾಜಾ ಆಗಿ ಕೇಂದ್ರ ಸಚಿವರ ಮನೆಯೆದುರೇ ರಿಯಲ್ ಎಸ್ಟೇಟ್ ಉದ್ಯಮಿಯ ಭಯಾನಕ ಹತ್ಯೆಯಾಗಿದೆ. ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ನಲ್ಲಿ ನಡೆದಿದೆ. ರಾಜಶೇಖರ್ ರೆಡ್ಡಿ ಕೊಲೆಯಾದ ವ್ಯಕ್ತಿ.
ರಾತ್ರಿ 8 ಗಂಟೆ ಸಮಯದಲ್ಲಿ ಬೆಂಗಳೂರು ನಗರ ಜಿಲ್ಲೆ ಆನೇಕಲ್ ನಿವಾಸಿಗಳು ಬೆಚ್ಚಿ ಬಿದ್ದಿದ್ರು. ಯಾಕಂದ್ರೆ, ಆನೇಕಲ್ನ ಶಿವಾಜಿ ವೃತದ ಬಳಿ ರಿಯಲ್ ಎಸ್ಟೇಟ್ ಉದ್ಯಮಿಯ ಹೆಣ ಬಿದ್ದಿತ್ತು. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ರಾಜಶೇಖರ್ ರೆಡ್ಡಿ ಕಾರಿನಲ್ಲಿ ಹೋಗ್ತಿದ್ರು. ರಸ್ತೆ ಮಧ್ಯೆ ಕಾರನ್ನು ಅಡ್ಡಗಟ್ಟಿದ ಗ್ಯಾಂಗ್, ದಿಢೀರ್ ದಾಳಿ ಮಾಡಿತ್ತು. ಸ್ವಿಫ್ಟ್ ಕಾರಿನ ಗಾಜು ಒಡೆದು ಚಾಕು, ಮಚ್ಚು, ರಾಡ್ಗಳಿಂದ ರಾಜಶೇಖರ್ ರೆಡ್ಡಿ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ಎಸ್ಕೇಪ್ ಆಗಿತ್ತು. ಇದ್ರಿಂದಾಗಿ ಗಂಭೀರ ಗಾಯಗೊಂಡಿದ್ದ ರಾಜಶೇಖರ್ ರೆಡ್ಡಿ ಜೀವ ಸ್ಥಳದಲ್ಲೇ ಹಾರಿ ಹೋಗಿದೆ.
ವಿಚಿತ್ರ ಅಂದ್ರೆ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮನೆ ಮುಂದೆಯೇ ಈ ಕೊಲೆ ನಡೆದಿದೆ. ಇನ್ನು ಕೊಲೆಯಾದ ರಾಜಶೇಖರ್ ರೆಡ್ಡಿ, ಹಲವು ದಾಖಲೆಗಳನ್ನು ಕೊಂಡೊಯ್ಯುತ್ತಿದ್ದರಂತೆ. ಈ ವೇಳೆ, ದುಷ್ಕರ್ಮಿಗಳು ದಾಳಿ ಮಾಡಿ ಕೊಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಆಯುಕ್ತ ಲಕ್ಷ್ಮೀ ಗಣೇಶ್ ಹಾಗೂ ಡಿವೈಎಸ್ಪಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯ ಪರಿಶೀಲಿಸಿ ಹಂತಕರಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಆನೇಕಲ್: ಕಾರು ಅಡ್ಡಗಟ್ಟಿ ಗುಂಡಿಕ್ಕಿ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ