ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ ವಂಚನೆ: ಕೇಸ್ ಬುಕ್
ನೆಲಮಂಗಲದ ಬಿಬಿಎಂಪಿ ಕಸದ ಗುತ್ತಿಗೆದಾರ 10 ಲಕ್ಷ ರೂ. ಹಣ ಮತ್ತು 90 ಗ್ರಾಂ ಚಿನ್ನಾಭರಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕಸದ ಟೆಂಡರ್ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ವಂಚಿಸಲಾಗಿದೆ. ಈ ಘಟನೆಯ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನೆಲಮಂಗಲ, ಜನವರಿ 20: ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ನೆರೆ ಮನೆಯ ವ್ಯಕ್ತಿಯಿಂದ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವಂತಹ (fraud) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೇರೋಹಳ್ಳಿಯ ಸೌಭಾಗ್ಯ ಎಂಬುವವರಿಗೆ ವಂಚಿಸಿದ್ದ ಬಿಬಿಎಂಪಿ ಕಸದ ಗುತ್ತಿಗೆದಾರ ಹರೀಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹರೀಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿಮ್ಮ ಬಳಿ ಇರುವ ಚಿನ್ನಾಭರಣ ಒತ್ತೆ ಇಟ್ಟು ಹಣ ತಂದು ಕೊಡಿ ಅಂದಿದ್ದ ಹರೀಶ್, 90 ಗ್ರಾಂ ಚಿನ್ನವನ್ನು ಕೊಟ್ಟಿದ್ದ ಮಹಿಳೆ, ನೀವೆ ಒತ್ತೆ ಇಟ್ಟು ಹಣ ತಗೊಳಿ ಎಂದಿದ್ದಾರೆ. ಹಣ ಕೊಡುವಾಗ ಗೋಪಾಲ್ ಹಾಗೂ ಪಿಳ್ಳರಾಜು ಎಂಬುವರನ್ನ ಸಾಕ್ಷಿ ಇಟ್ಟು ಹಣ ಹಾಗೂ ಚಿನ್ನಾಭರಣವನ್ನು ಸೌಭಾಗ್ಯ ಕೊಟ್ಟಿದ್ದಾರೆ. ಆದರೆ ಎರಡು ವರ್ಷದಿಂದ ಹಣವೂ ಇಲ್ಲ, ಟೆಂಡರ್ ಇಲ್ಲದೆ ವಂಚನೆ ಮಾಡಿದ್ದಾರೆ. ಬಳಿಕ ಸೌಭಾಗ್ಯ ದೂರು ನೀಡಿದ್ದು, ಇದೀಗ ಗುತ್ತಿಗೆದಾರ ಹರೀಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್ ಮಧ್ಯೆ ಅಪಘಾತ: ಹಲವರಿಗೆ ಗಾಯ
ಬೆಂಗಳೂರು ಉತ್ತರ ತಾಲೂಕಿನ ಮಾಗಡಿ ರಸ್ತೆ ತಾವರೆಕೆರೆ ಬಳಿ ಕಲ್ಲಿನ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್ ಮಧ್ಯೆ ಅಪಘಾತ ನಡೆದಿದ್ದು, ಬಸ್ ಚಾಲಕ ಸೇರಿದಂತೆ 5 ಪ್ರಯಾಣಿಕರಿಗೆ ಗಾಯಗಳಾಗಿವೆ. ಲಾರಿಯಲ್ಲಿದ್ದ ಚಾಲಕ, ಕ್ಲಿನರ್ಗೂ ಗಂಭೀರ ಗಾಯಗಳಾಗಿವೆ. ಬೆಂಗಳೂರಿನಿಂದ ಮಾಗಡಿಗೆ ಕೆಎಸ್ಆರ್ಟಿಸಿ ಬಸ್ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲೂ ಬ್ಯಾಂಕ್ ದರೋಡೆಗೆ ಯತ್ನಿಸಿದ ಕಳ್ಳರು: ಖದೀಮರಿಗೆ ಬಲೆ ಬೀಸಿದ ಪೊಲೀಸ್
ಗಾಯಗೊಂಡವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಹಿನ್ನಲೆ ಕೆಲ ಕಾಲ ಮಾಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸರಣಿ ಅಪಘಾತ
ಇನ್ನು ರಾಷ್ಟ್ರೀಯ ಹೆದ್ದಾರಿ48ರಲ್ಲಿ ಗುಂಡೇನಹಳ್ಳಿ ಬಳಿ ಸ್ವಿಫ್ಟ್ ಕಾರು, ಲಾರಿ ಹಾಗೂ ಟೂರಿಸ್ಟ್ ಬಸ್ ಮಧ್ಯೆ ಸರಣಿ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಾರಿನಲ್ಲಿದ್ದ ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ: ಮೂವರು ಆರೋಪಿಗಳ ಬಂಧನ
ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಕಾರಿಗೆ ಹಿಂಬದಿ ಬರುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.