
ನೆಲಮಂಗಲ, ಜುಲೈ 18: ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕೂರು ಗ್ರಾಮದಲ್ಲಿ ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಸ್ಲಿಂ ಯುವತಿಯೊಬ್ಬಳ ಜೊತೆಯಲ್ಲಿ ಓಡಾಡುತ್ತಿದ್ದನೆಂಬ ಕಾರಣಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಯಶವಂತ್ ಹಲ್ಲೆಗೊಳಗಾದ ಯುವಕ.
ಯಶವಂತ್ ಹಾಗೂ ಯುವತಿ ಕೌಸರ್ ಬಾನು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಲಕ್ಕೂರು ಗ್ರಾಮದ ನಿವಾಸಿಗಳಾದ ತಹರೀಕ್ ಪಾಷಾ, ಸೋಹೇಲ್ ಪಾಷಾ ಮತ್ತು ಸಯ್ಯದ್ ಕರೀಂ ಎಂಬುವವರು ಯಶವಂತ್ನನ್ನ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ಮಾಡಿದ್ದಾರೆ.
ಆರೋಪಿಗಳು ಯಶವಂತ್‌ನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಬಳಿಕ ವಿವಿಧ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿಬಿಟ್ಟಿದ್ದಾರೆ. ತಮಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದನ್ನು ಕಂಡು ತೀವ್ರ ಮನನೊಂದ ಕೌಸರ್ ಬಾನು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ಕೂಡ ನಡೆದಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ
ಸದ್ಯ ಘಟನೆಗೆ ಸಂಬಂಧಿಸಿದಂತೆ ನೊಂದ ಯುವತಿಯೇ ಖುದ್ದಾಗಿ ಹಲ್ಲೆ ಮಾಡಿದವರ ವಿರುದ್ಧ ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಈ ನೈತಿಕ ಪೊಲೀಸ್‌ಗಿರಿ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಮಾರಪ್ಪನಪಾಳ್ಯದಲ್ಲಿ ನಡೆದಿದೆ. ಮನೆಯ ಮೇಲಿನ ಕೊಠಡಿಯಲ್ಲಿ ಉದಯ್(20) ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬಂಟ್ವಾಳ ಲಾವಣ್ಯ ಕೊಲೆ ಪ್ರಕರಣ: ಆರೋಪಿಯನ್ನು ಬಜರಂಗದಳ ಕಾರ್ಯಕರ್ತನೆಂದು ಬಿಂಬಿಸಿದವರ ವಿರುದ್ಧ ಕೇಸ್ ದಾಖಲು
ಸುರೇಶ್ ಹಾಗೂ ಪ್ರೇಮಲತಾ ದಂಪತಿಯ ಪುತ್ರ ಉದಯ್, ಆನ್ಲೈನ್ ಗೇಮಿಂಗ್ ಚಟಕ್ಕೆ ಅಡಿಕ್ಟ್ ಆಗಿದ್ದ ಬಗ್ಗೆ ಮಾಹಿತಿ ಇದೆ. ಸದ್ಯ ಸ್ಥಳಕ್ಕೆ ಮಾದನಾಯಕಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Sat, 18 July 26