ಜಿ.ಪಂ-ತಾ.ಪಂ ಚುನಾವಣೆ ಸುಳಿವು ಬೆನ್ನಲ್ಲೇ ನೆಲಮಂಗಲದಲ್ಲಿ ಆಪರೇಷನ್ ಹಸ್ತ

| Updated By: ರಮೇಶ್ ಬಿ. ಜವಳಗೇರಾ

Updated on: Dec 02, 2024 | 10:11 PM

ಶೀಘ್ರದಲ್ಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್​ ಸುಳಿವು ನೀಡಿದ್ದು, ಎಲ್ಲರೂ ಸಜ್ಜಾಗುವಂತೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಿದ್ದು, ಸದ್ದಿಲ್ಲದೇ ಆಪರೇಷನ್ ಹಸ್ತ ಶುರು ಮಾಡಿಕೊಂಡಿದೆ. ಇದಕ್ಕೆ ಹೌದು...ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರಸಭೆ ಅಧ್ಯಕ್ಷರು, ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಜಿ.ಪಂ-ತಾ.ಪಂ ಚುನಾವಣೆ ಸುಳಿವು ಬೆನ್ನಲ್ಲೇ ನೆಲಮಂಗಲದಲ್ಲಿ ಆಪರೇಷನ್ ಹಸ್ತ
ನೆಲಮಂಗಲದಲ್ಲಿ ಆಪರೇಷನ್ ಹಸ್ತ
Follow us on

ಬೆಂಗಳೂರು, (ಡಿಸೆಂಬರ್ 02): ಒಂದೆಡೆ ಕರ್ನಾಟಕ ಬಿಜೆಪಿಯಲ್ಲಿ ವಿಜಯೇಂದ್ರ ಹಾಗೂ ಯತ್ನಾಳ್ ನಡುವೆ ಬಣ ಬಡಿದಾಟ ಜೋರಾಗಿದ್ದರೆ, ಇತ್ತ ಕಾಂಗ್ರೆಸ್​ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಭರ್ಜರಿ ತಯಾರಿ ನಡೆಸಿದೆ. ಡಿಸಿಎಂ ಡಿಕೆ ಶಿವಕುಮಾರ್​ ಕೊರೆ ಕೊಟ್ಟ ಬೆನ್ನಲ್ಲೇ ನಾಯಕರುಗಳು, ಸ್ಥಳೀಯ ಬಿಜೆಪಿ ನಾಯಕರನ್ನು ಸೆಳೆಯಲು ಮುಂದಾಗಿದ್ದಾರೆ. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯರು ಸೇರಿದಂತೆ ಬಿಜೆಪಿ, ಜೆಡಿಎಸ್​​ ಮುಖಂಡರು ಇಂದು(ಡಿಸೆಂಬರ್ 02) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಅರಿಶಿನಕುಂಟೆ ಗ್ರಾಮದ ಹಾಲಿಡೇ ಪಾರ್ಮ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ, ನಗರಸಭೆ ಅಧ್ಯಕ್ಷೆ ಪೂರ್ಣಿಮ ಅವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನೂ ಸದಸ್ಯ ಕೇಬಲ್‌ ಗಣೇಶ್ ಸೇರಿದಂತೆ ಹತ್ತಾರು ಮಂದಿ ಮುಖಂಡರು ಶಾಸಕ ಎನ್.ಶ್ರೀನಿವಾಸ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಶಾಸಕ ಎನ್.ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತೋಷಕರ ಸಂಗತಿ. ಕಾಂಗ್ರೆಸ್ ಪಕ್ಷಕ್ಕೆ ನಗರಸಭೆ ಅಧ್ಯಕ್ಷರು, ಹಾಗೂ ಕೆಲ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುದ್ದು ಪಕ್ಷಕ್ಕೆ ಬಲ ಬಂದಂತಾಗಿದೆ. ನಿರಂತರವಾಗಿ ಜನಪರ, ಅಭಿವೃದ್ಧಿ ಪರ ಸೇರಿದಂತೆ ಜನರ ಮದ್ಯೆ ಇರುವಂತಹ ರಾಜಕೀಯ ಇರುವುದು ಬಹಳ ಕಡಿಮೆ. ಮುಂದಿನ ದಿನಗಳಲ್ಲಿ ನೆಲಮಂಗಲ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಪಕ್ಷ ಸೇರ್ಪಡೆಯಾದವರಿಗೆ ಪಕ್ಷ ಎಂದಿಗೂ ಕೈಬಿಟ್ಟಿಲ್ಲ. ಪಕ್ಷದಲ್ಲಿ ಹಾಗೂ ಸರ್ಕಾರದ ಹಂತದಲ್ಲಿ ಜವಬ್ದಾರಿಯನ್ನು ನೀಡುವ ಕಾರ್ಯ ಮಾಡಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿರುವ ಎಲ್ಲಾ ಮುಖಂಡರಿಗೆ ಧನ್ಯವಾದ ತಿಳಿಸಿದರು.

ನೆಲಮಂಗಲ ನಗರಸಭೆ ಅಧ್ಯಕ್ಷೆ ಪೂರ್ಣಿಮ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಾಸಕ ಎನ್.ಶ್ರೀನಿವಾಸ್ ಅವರು ಜನಪರ ಕಾರ್ಯಗಳು ಹಾಗೂ ಕ್ಷೇತ್ರ ಅಭಿವೃದ್ಧಿಯನ್ನು ಒಪ್ಪಿ ಅತ್ಯಂತ ಸಂತೋಷದಿಂದ ಯಾವುದೇ ಬೇಡಿಕೆ ಇಡದೆ ಪಕ್ಷವನ್ನು ಸೇರ್ಪಡಯಾಗಿದ್ದೇನೆ. ಶಾಸಕರು ನಗರಸಭೆ ಅಧ್ಯಕ್ಷರಾಗಿ ಮಾಡಲು ಶ್ರಮಿಸಿ ನುಡಿದಂತೆ ನಡೆದು ಕೊಂಡಿದ್ದಾರೆ.ಇದೇ ರೀತಿಯಲ್ಲಿ ಬೆಂಬಲ ಮಾರ್ಗದರ್ಶನ ಹಾಗೂ ಸಲಹೆಯಂತೆ ಕಾಂಗ್ರೆಸ್ ಪಕ್ಷಕ್ಕೆ ಇಂದು ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.

ನೆಲಮಂಗಲ ನಗರಸಭೆ ಅಧ್ಯಕ್ಷೆ ಪೂರ್ಣಿಮ ಜತೆ ಸದಸ್ಯ ಎನ್.ಗಣೇಶ್, ಶಾರದ ಉಮೇಶ್, ಭಾರತಿ ಬಾಯಿ,ತಾ.ಪಂ ಮಾಜಿ ಸದಸ್ಯ ವೀರಣ್ಣ, ಗ್ರಾ.ಪಂ ಸದಸ್ಯ ಅಂಜಿನಪ್ಪ, ಗಣೇಶ್, ಮುಖಂಡ ಕಪಾಲಿವೆಂಕಟೇಶ್, ಜಯರಾಮ್ ಸೇರಿದಂತೆ ಹತ್ತಾರು ಮಂದಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:10 pm, Mon, 2 December 24