ಬೆಂಗಳೂರು, ಅ.05: ಇಂಡಿಗೋ ಏರ್ಲೈನ್ಸ್ನಲ್ಲಿ ಸರ್ವರ್ ಸಮಸ್ಯೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್(Kempegowda International Airport) ನಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಹೌದು, ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ಟರ್ಮಿನಲ್ 1ರಲ್ಲಿ ನೂರಾರು ಜನ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಚೆಕ್ಇನ್ ಸಮಸ್ಯೆ ಹಿನ್ನೆಲೆ ವಿಮಾನಗಳ ಟೇಕಾಫ್ನಲ್ಲೂ ವಿಳಂಬವಾಗಿದ್ದು, ಏರ್ಲೈನ್ಸ್ ಸಿಬ್ಬಂದಿಗಳು ಕೆಲ ವಿಮಾನಗಳನ್ನು ರಿ ಶೆಡ್ಯೂಲ್ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರೆದಿದ್ದು, ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಇನ್ನು ಕಳೆದ ಜುಲೈ 19 ರಂದು ಕೂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಲ್ಲಿ ಪ್ರಯಾಣಿಕರು ಪರದಾಡಿದ್ದರು. ನಾಲ್ಕು ಗಂಟೆಗಳ ಕಾಲ ಸರ್ವರ್ ಸಮಸ್ಯೆಯಿಂದ ಕಂಗಾಲಾಗಿದ್ದರು. ಇಂಡಿಗೋ, ಆಕಾಶ್, ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ಏಕ್ಸಪ್ರೇಸ್ ಏರ್ಲೈನ್ಸ್ ಸಂಸ್ಥೆಗಳಲ್ಲಿ ಈ ತೊಂದರೆ ಉಂಟಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಸಿಬ್ಬಂದಿಗಳು ಮ್ಯಾನುವಲ್ ಚೆಕ್ ಇನ್ ಮಾಡಿಸುತ್ತಿದ್ದಾರೆ. ಮ್ಯಾನುವಲ್ ಚೆಕಿಂಗ್ನಿಂದ ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವಂತಾಗಿತ್ತು. ಇದೀಗ ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರೆದಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಅಷ್ಟೇ ಅಲ್ಲ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಈ ಸಮಸ್ಯೆ ಕಂಡು ಬಂದಿತ್ತು. ಈ ಹಿನ್ನಲೆ ವಿಮಾನ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ನಿಗದಿತ ಸಮಯಕ್ಕಿಂತ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಸೂಚನೆ ನೀಡಿದ್ದವು. ಈ ಕುರಿತು ಎಷ್ಟೇ ಕ್ರಮಕೈಗೊಂಡರೂ ಸಮಸ್ಯೆ ಮಾತ್ರ ತಪ್ಪುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Sat, 5 October 24