ನೆಲಮಂಗಲ: ಅವಧಿ ಮೀರಿದ ತಿಂಡಿ ಪ್ಯಾಕೇಟ್ ಮೇಲೆ ಹೊಸ ಎಕ್ಸ್ಪೈರ್ ಡೇಟ್ ಮುದ್ರಿಸುತ್ತಿದ್ದ ಗೋಡೌನ್ ಮೇಲೆ ಪೊಲೀಸರ ದಾಳಿ
ಅಂಗಡಿಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಎಕ್ಸ್ಪೈರ್ ಡೇಟ್ ಪರಿಶೀಲಸಲಾಗುತ್ತದೆ. ಆದರೆ, ಅವಧಿ ಮೀರಿದ ಪ್ಯಾಕೇಟ್ಗಳಿಗೆ ಹೊಸ ಅವಧಿ ದಿನಾಂಕ ಮುದ್ರಿಸಿದರೆ ಏನು ಮಾಡೋದು? ಇಂತಹದ್ದೊಂದು ಪ್ರಕರಣ ಬೆಂಗಳೂರು ಉತ್ತರ ತಾಲೂಕಿನ ಗೋಪಾಲಪುರ ವೇರ್ ಹೌಸ್ನಲ್ಲಿ ನಡೆದಿದೆ.
ನೆಲಮಂಗಲ, ಡಿ.1: ಹಣದಾಸೆಗೆ ಬಿದ್ದ ವ್ಯಕ್ತಿಯೊಬ್ಬ, ಅವಧಿ ಮೀರಿದ ಮಕ್ಕಳ ತಿಂಡಿ ಪ್ಯಾಕೇಟ್ಗಳಿಗೆ ಹೊಸ ಅವಧಿ ದಿನಾಂಕ ಮುದ್ರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಂಗಳೂರು (Bengaluru) ಉತ್ತರ ತಾಲೂಕಿನ ಗೋಪಾಲಪುರ ವೇರ್ಹೌಸ್ನಲ್ಲಿ ಬೆಳಕಿಗೆ ಬಂದಿದೆ. ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೋರಮಂಗಲದ ರೋಹಿತ್ ಫರ್ನಾಂಡಿಸ್ ಎಂಬಾತ ಗ್ರಾಮದ ನಾರಯಣಪ್ಪ ಅವರಿಂದ ಆರು ತಿಂಗಳ ಹಿಂದೆ ಗೋಡೌನ್ ಅನ್ನು ಬಾಡಿಗೆಗೆ ಪಡೆದಿದ್ದನು. ಹಣದ ದುರಾಸೆಗೆ ಬಿದ್ದಿದ್ದ ರೋಹಿತ್ ಫರ್ನಾಂಡಿಸ್, ಕಂಪನಿಯ ಯಾವುದೇ ನಾಮಪಾಲಕ ಹಾಕದೆ ಬೆಂಗಳೂರಿನಿಂದ ಅವಧಿ ಮೀರಿದ ಆಹಾರ ಪ್ಯಾಕೇಟ್ ತರಿಸಿಕೊಂಡು ಹೊಸ ಅವಧಿ ದಿನಾಂಕ ಮುದ್ರಿಸುತ್ತಿದ್ದನು.
ಇದನ್ನೂ ಓದಿ: ಬೆಂಗಳೂರು: ಅವಧಿ ಮೀರಿದ ಇಂಜಕ್ಷನ್ ನೀಡಿದ್ದ ಸಂಜೀವಿನಿ ಆಸ್ಪತ್ರೆ ವಿರುದ್ಧ FIR
ಥಿನ್ನರ್ ಹಾಗೂ ಕೆಮಿಕಲ್ ಸಹಾಯದಿಂದ ಹೊಸ ಎಕ್ಸ್ಪೈರ್ ಡೇಟ್ ಮುದ್ರಣ ಮಾಡಲಾಗುತ್ತಿತ್ತು. ಈ ವಿಚಾರ ಸ್ಥಳೀಯರಿಗೆ ತಿಳಿದು ಮಾಹಿತಿ ಬಹಿರಂಗವಾಗಿದೆ. ತಕ್ಷಣ ದಾಳಿ ನಡೆಸಿದ ಮಾದನಾಯಕನಹಳ್ಳಿ ಠಾಣಾ ಪೊಲೀಸರು, ಮ್ಯಾನೇಜರ್ ವೆಂಕಟೇಶ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದು, ಕೋಟ್ಯಂತರ ಮೌಲ್ಯದ ಆಹಾರ ಸಾಮಾಗ್ರಿಗಳು, ಧಿನ್ನರ್ ಹಾಗೂ ಕೆಮಿಕಲ್ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ 15 ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ