Ragi Kana Santhe: ಕೊರೊನಾದಿಂದ ಸ್ಥಗಿತಗೊಂಡಿದ್ದ ‘ರಾಗಿ ಕಣ ಸಂತೆ’ ಅಕ್ಟೋಬರ್ 2ರಿಂದ ಪುನರಾರಂಭ

ಕೊರೊನಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರಾಗಿ ಕಣ ಸಂತೆಯು ಮತ್ತೆ ಆರಂಭವಾಗಲಿದೆ. ಅಕ್ಟೋಬರ್ 2 ಹಾಗೂ 3ರಂದು ಸಂತೆ ನಡೆಯಲಿದೆ.

Ragi Kana Santhe: ಕೊರೊನಾದಿಂದ ಸ್ಥಗಿತಗೊಂಡಿದ್ದ ‘ರಾಗಿ ಕಣ ಸಂತೆ’ ಅಕ್ಟೋಬರ್ 2ರಿಂದ ಪುನರಾರಂಭ
ರಾಗಿ ಕಣ ಸಂತೆ (ಸಾಂಕೇತಿಕ ಚಿತ್ರ)
Follow us
TV9 Web
| Updated By: shivaprasad.hs

Updated on:Sep 25, 2021 | 11:01 AM

ಕೊವಿಡ್ ಮಹಾಮಾರಿಯಿಂದ ತತ್ತರಿಸುತ್ತಿರುವ ಶ್ರಮಿಕ ಸಮುದಾಯದೊಂದಿಗೆ ಕೈಗೂಡಿಸುವ ಕಾರ್ಯದಲ್ಲಿ ಸದಾ ನಿರತವಾಗಿರುವ ಕೈಉತ್ಪನ್ನ ಕ್ಷೇತ್ರಕ್ಕೆ ಒತ್ತು ಕೊಡುವ ಸಂತೆಯಾದ ರಾಗಿಕಣ ಸಂತೆಯು ಗಾಂಧಿ ಜಯಂತತಿಯಂದು ಆರಂಭಗೊಳ್ಳಲಿದೆ. ಸಾಂಸ್ಕೃತಿಕ ಕೇಂದ್ರ ರಾಗಿಕಣ ಸಂತೆಯು ಅಕ್ಟೋಬರ್ 2ರಂದು ಆರಂಭಗೊಳ್ಳಲಿದ್ದು, ಅಕ್ಟೋಬರ್​ 3ರಂದು ಮುಕ್ತಾಯವಾಗಲಿದೆ. ಎರಡು ದಿನಗಳ ಸಂತೆಯಲ್ಲಿ, ಕೈಉತ್ಪನ್ನಗಳ ಜೊತೆಗೆ ಕೈಮಗ್ಗ ಮತ್ತು ಖಾದಿ ಕ್ಷೇತ್ರಕ್ಕೆ ವಿಶೇಷ ಗಮನ ನೀಡಲಾಗಿದೆ.

ಅಕ್ಟೋಬರ್ 2 ರಂದು 11 ಘಂಟೆಗೆ ನಿವೃತ್ತ ಐಪಿಸ್ ಅಧಿಕಾರಿ ಹಾಗೂ ಗಾಂಧೀವಾದಿ ಶ್ರೀ ಅಜಯ್ ಕುಮಾರ್ ಸಿಂಗ್​ ಸಂತೆಯ ಉದ್ಘಾಟನೆಯನ್ನು ನಡೆಸಲಿದ್ದಾರೆ. ಅಕ್ಟೋಬರ್ 2ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ನಿಶಾಂತ್ ಗುರವ್ ಗಾಂಧಿ ಸ್ಮರಣ ಗೀತೆಗಳನ್ನು ಹಾಡಲಿದ್ದಾರೆ. ನಂತರ ಹೆಸರಾಂತ ನೃತ್ಯಕಲಾವಿದ ಸುಹಾಸಿನಿ ಜಲಗಿಯವರಿಂದ ಭರತನಾಟ್ಯ ಪ್ರದರ್ಶನವಿದ್ದು, ಅದರ ಮೂಲಕ ರೈತರ ಬವಣೆಯನ್ನು ಕಟ್ಟಿಕೊಡಲಾಗುತ್ತದೆ.

ಅಕ್ಟೋಬರ್ 3 ರಂದು 11 ಘಂಟೆಗೆ ‘ಖಾದಿ ಮತ್ತು ಕೈಮಗ್ಗದಲ್ಲಿ ಪ್ರಸ್ತುತ ಸವಾಲುಗಳು’ ವಿಷಯದ ಕುರಿತಂತೆ ಚರ್ಚಾಘೋಷ್ಠಿಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ವಿಮೊರ್ ಸಂಸ್ಥೆಯ ಪವಿತ್ರಾ ಮುದ್ದಯ್ಯ, ಮೆಟಫರ್ ರಾಚದ ರವಿಕಿರಣ್, KASKOM ಸಂಸ್ಥೆಯ ಸ್ವಾಮಿನಾಥನ್ ವೈತಲಿಂಗಂ ಭಾಗವಹಿಸಲಿದ್ದು, ಈ ಚರ್ಚೆಯನ್ನು NIFT ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ವಿನ್ಯಾಸಕಿ ಇಳಾ ದುಬೆ ನಡೆಸಿಕೊಡಲಿದ್ದಾರೆ.

ಏನಿದು ರಾಗಿ ಕಣ ಸಂತೆ?: ರಾಗಿಕಣ ಸಂತಯು ಮೇ 2017 ರಲ್ಲಿ ಗ್ರಾಮಸೇವಾ ಸಂಘ ಮತ್ತು ಹುಲ್ಕುಲ್ ಮುನಿಸ್ವಾಮಪ್ಪ ಮುನಿವೆಂಕಟಮ್ಮ ಅವರ ಸಂಯುಕ್ತಾಶ್ರಯದಲ್ಲಿ ಪ್ರಾರಂಭವಾಯಿತು. ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕಣ, ಗೊಟ್ಟಿಗೆರೆ- ಬನ್ನೇರುಘಟ್ಟ ರಸ್ತೆಯಲ್ಲಿ 4 ವರ್ಷಗಳಿಂದ ಸಂತೆಯು ಯಶಸ್ವಿಯಾಗಿ ನಡೆಯುತ್ತಿತ್ತು. ಅದರ ಕೊವಿಡ್ ಕಾರಣದಿಂದ ಸಂತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಪ್ರಸ್ತುತ ಸಂತೆ ಪುನರಾರಂಭಗೊಳ್ಳಲಿದೆ.

ರಾಗಿಕಣ ಸಂತೆಯು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶ್ರಮಿಕ ಸಮುದಾಯದ ಕೃಷಿಕರು, ಕುಶಲ ಕರ್ಮಿಗಳು, ಅರಣ್ಯ ಉತ್ಪನ್ನ ಹಾಗೂ ಇತರ ತಯಾರಕರುಗಳು ಹಾಗೂ ನಗರ/ಪಟ್ಟಣ ಮಾರುಕಟ್ಟೆಯ ನಡುವೆ ಸಂಪರ್ಕ ಸೇತುವೆಯಾಗಲು ವಾರದ ಸಂತೆ/ ಬಜಾರ್‌ ಗಳನ್ನು ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು, ಕಲಾ ಮತ್ತು ಚಲನಚಿತ್ರ ಪ್ರದರ್ಶನಗಳು- ಇವೆಲ್ಲವನ್ನು ಒಳಗೊಂಡಂತೆ ಸುತ್ತಿಗೆ ಬದುಕು, ಕೃಷಿ ಹಾಗೂ ಪರಿಸರದ ಸಮಸ್ಯೆಗಳ ಸುತ್ತ ರಾಗಿ ಕಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪ್ರದರ್ಶನ ಹಾಗೂ ಮಾರಾಟದಲ್ಲಿ ಏನೇನಿದೆ?: ಇವೆರಡೂ ದಿನಗಳಲ್ಲಿ ವೈವಿಧ್ಯ ಕೈ ಉತ್ಪನ್ನ ಪದಾರ್ಥಗಳು ಮಾರಾಟಕ್ಕಿವೆ. ಪ್ರಖ್ಯಾತ ಖಾದಿ ಮತ್ತು ಕೈಮಗ್ಗ ಸಂಸ್ಥೆಗಳಾದ ಜನಪದ ಖಾದಿ, ಮಗನ್ ಖಾದಿ, ಚರಕ ಸೊಸೈಟಿ, ದೇಸಿ ಟ್ರಸ್ಟ್, ಕೈಮಗ್ಗ ನೇಕಾರರ ಒಕ್ಕೂಟ, KASKOM ಸಂಸ್ಥೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ನೈಸರ್ಗಿಕವಾಗಿ ಬೆಳೆದ ಹೂವು ತರಕಾರಿಗಳು, ದಿನಸಿ ಪದಾರ್ಥಗಳು, ಗಾಣದ ಎಣ್ಣೆಗಳು, ಕೈಉತ್ಪಾದಿತ ಕಲಾತ್ಮಕ ಹಾಗೂ ಕರಕುಶಲ ವಸ್ತುಗಳು ಸೇರಿದಂತೆ ಹಲವು ಪದಾರ್ಥಗಳು ಮಾರಾಟಕ್ಕೆ ಲಭ್ಯವಿದೆ.

ಇದನ್ನೂ ಓದಿ:

UPSCಯಲ್ಲಿ ಮೈಸೂರಿನ ನಿಶ್ಚಯ್ ಪ್ರಸಾದ್​​ಗೆ 130ನೇ ರ್‍ಯಾಂಕ್; ಸ್ವಂತ ಪರಿಶ್ರಮದಿಂದ ಓದಿ ಸಾಧನೆಗೈದ 24ರ ಯುವಕ!

ವಿಜಯಪುರ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿಗೆ ರ್‍ಯಾಂಕ್

ಉಡುಪಿಯಲ್ಲಿ ಫ್ರೀಡಂ ರನ್​ಗೆ ಶೋಭಾ ಕರಂದ್ಲಾಜೆ ಚಾಲನೆ

(Ragi Kana Santhe will restart from October 2nd)

Published On - 10:43 am, Sat, 25 September 21