
ನೆಲಮಂಗಲ, ನವೆಂಬರ್ 29: ಪೂರ್ವಾಪರ ವಿಚಾರಿಸದೆ ಮನೆಯನ್ನು ದಂಪತಿಗೆ ಬಾಡಿಗೆಗೆ ನೀಡಿದ್ದ ಮಹಿಳಾ ಮಾಲೀಕರೋರ್ವರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಂಗಳೂರು ಉತ್ತರ ತಾಳೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಂಗಾರ ಮತ್ತು ಹಣವನ್ನು ದೋಚಿ ದಂಪತಿ ಎಸ್ಕೇಪ್ ಆಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಚಿಕ್ಕಗೊಲ್ಲರಹಟ್ಟಿಯಲ್ಲಿ ಸ್ವಂತ ಮನೆ ಹೊಂದಿದ್ದ 60 ವರ್ಷದ ಮಹಿಳೆ ಜಯಲಕ್ಷ್ಮೀ ಎಂಬವರು ಒಂಟಿಯಾಗಿ ವಾಸಿಸುತ್ತಿದ್ದರು. ಈ ನಡುವೆ ಎರಡು ತಿಂಗಳ ಹಿಂದೆ ಪೂಜಾ ಮತ್ತು ರಾಜು ಎಂಬ ದಂಪತಿ ಬಾಡಿಗೆಗೆ ಬಂದಿದ್ದರು. ಅವರಿಗೆ ಒಂದು ಹೆಣ್ಣು ಮಗುವೂ ಇತ್ತು. ಮೊನ್ನೆ ಶುಕ್ರವಾರ ಜಯಲಕ್ಷ್ಮೀ ಅವರ ಬಳಿ ಬಂದು ಫಿಶ್ ವರ್ಲ್ಡ್ಗೆ ಹೋಗಿ ಬರೋಣ ಬನ್ನಿ ಆಂಟಿ. ಒಬ್ಬರೇ ಮನೆಯಲ್ಲಿ ಇದ್ದು ಏನು ಮಾಡುತ್ತೀರಾ ಎಂದು ಪೂಜಾ ಪುಸಲಾಯಿಸಿದ್ದಳು. ಗಂಡ ಆಮೇಲೆ ಬರುತ್ತಾನೆ, ನಾವು ಮುಂದೆ ಹೋಗಣ ಎಂದು ನಂಬಿಸಿ ಮಗಳ ಜೊತೆ ಜಯಲಕ್ಷ್ಮೀ ಅವರನ್ನು ಕರೆದೊಯ್ದಿದ್ದಳು.
ಇದನ್ನೂ ಓದಿ: ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಪತ್ನಿ ಜೊತೆ ಮನೆ ಮಾಲಕಿ ಹೊರಡುತ್ತಿದ್ದಂತೆ ಇತ್ತ ರಾಜು ತನ್ನ ಕೈಚಳಕ ಆರಂಭಿಸಿದ್ದ. ನಕಲಿ ಕೀ ಬಳಸಿ ಮಾಲಕಿಯ ಮನೆಗೆ ನುಗ್ಗಿರುವ ಆರೋಪಿ ಚಿನ್ನ, ಹಣವನ್ನು ಎಗರಿಸಿದ್ದ. ಮತ್ತೊಂದೆಡೆ ಜಯಲಕ್ಷ್ಮೀ ಅವರನ್ನು ಫಿಶ್ ವರ್ಲ್ಡ್ಗೆ ಕರೆದುಕೊಂಡು ಹೋಗಿದ್ದ ಪೂಜಾ, ಮಗಳಿಗೆ ವಾಶ್ರೂಮ್ಗೆ ಹೋಗಬೇಕಂತೆ. ನೀವು ಇಲ್ಲೇ ಕುಳಿತಿರಿ ಆಂಟಿ ಎಂದು ಹೇಳಿಹೋಗಿದ್ದವಳು ಮರಳಿ ಬರಲೇ ಇಲ್ಲ. ಆಕೆಗಾಗಿ ಕಾದು ಕಾದು ಸುಸ್ತಾತ ಜಯಲಕ್ಷ್ಮಿ ಅವರು ಮನೆಗೆ ಮರಳಿದ್ದಾರೆ. ಈ ವೇಳೆ ಮನೆಯ ಬಾಗಿಲಿಗೆ ಹಾಕಿದ್ದ ಎರಡು ಲಾಕ್ಗಳ ಪೈಕಿ ಒಂದು ಓಪನ್ ಆಗಿಯೇ ಇರುವುದು ಕಂಡುಬಂದಿದೆ. ಅನುಮಾನಗೊಂಡು ಪರಿಶೀಲಿಸಿದಾಗ 40 ಲಕ್ಷ ಬೆಲೆಬಾಳುವ 450 ಗ್ರಾಂ ಚಿನ್ನಾಭರಣ ಮತ್ತು ಎರಡು ಲಕ್ಷ ನಗದು ದೋಚಿರುವುದು ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.