ಗೂಡ್ಸ್ ಶೆಡ್‌ಗೆ ದಾರಿ ನಿರ್ಮಾಣಕ್ಕೆ ಮುಂದಾದ ರೈಲ್ವೆ ಇಲಾಖೆ; ಶಾಲಾ ಕಟ್ಟಡ ಉರುಳುವ ಭೀತಿಯಲ್ಲಿ ಶಿಕ್ಷಕರು ಮಕ್ಕಳು
ಆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನೂರಾರು ಮಕ್ಕಳು ಶಿಕ್ಷಣವನ್ನ ಪಡಿತಾ ಇದ್ದಾರೆ. ಅದೇ ಶಾಲೆಯ ಪಕ್ಕದಲ್ಲಿ ರೈಲ್ವೇ ಟ್ರ್ಯಾಕ್ ಹಾದು ಹೋಗಿದೆ. ಇದೀಗ ಅಲ್ಲಿ, ಗೂಡ್ಸ್ ಶೆಡ್‌ಗೆ ದಾರಿ ಮಾಡುವುದಕ್ಕೆ ರೈಲ್ವೇ ಇಲಾಖೆ ಮುಂದಾಗಿದ್ದು, ಶಿಕ್ಷಕರಿಗೂ ಹಾಗೂ ಮಕ್ಕಳಿಗೆ ಶಾಲೆ ಕಟ್ಟಡ ಉರುಳುವ ಭೀತಿ ಶುರುವಾಗಿದೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ(Nelamangala) ಪಟ್ಟಣದ ಹೊರವಲಯದ ಬಸವನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(government school) ಇದೆ. ಇಲ್ಲಿ 400ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೇ ಶಾಲೆಯ ಬಳಿ ರೈಲ್ವೆ ಟ್ರ್ಯಾಕ್ ಹಾದು ಹೋಗಿದ್ದು, ಅರ್ಧ ಕಿಲೋಮೀಟರ್ ಅಂತರದಲ್ಲಿ ರೈಲ್ವೆ ಸ್ಟೇಷನ್ ಇದೆ. ಈ ರೇಲ್ವೆ ಸ್ಟೇಷನ್ ಬಳಿ ಗೂಡ್ಸ್ ಶೆಡ್ ನಿರ್ಮಾಣವಾಗುತ್ತಿದ್ದು ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ಮುಖ್ಯರಸ್ತೆಗೆ ಈ ಗೂಡ್ಸ್ ಶೆಡ್‌ಗೆ ದಾರಿ ಕಲ್ಪಿಸಲು ದಾರಿ ನಿರ್ಮಾಣ ಮಾಡಲಾಗುತ್ತಿದೆ. ಕೇಂದ್ರ ರೈಲ್ವೆ ಇಲಾಖೆಗೆ ಸಂಬಂಧಿತ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮದ ಸರ್ಕಾರಿ ಶಾಲಾ ಜಾಗಕ್ಕೆ ಪ್ರವೇಶ ಮಾಡುತ್ತಿದೆ ಎಂದು ಆರೋಪಿಸಿದ್ದು, ರೈಲ್ವೆ ಇಲಾಖೆ ಸರ್ಕಾರಿ ಶಾಲಾ ಸ್ವತ್ತಿನ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ. ಈ ವಿಚಾರವಾಗಿ ಗ್ರಾಮಸ್ಥರು ಹಾಗೂ ರೈಲ್ವೆ ಇಲಾಖೆ ಇಂಜಿನಿಯರ್ಸ್ ನಡುವೆ ವಾಗ್ವಾದ ನಡೆದಿತ್ತು.
ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಶಸ್ತ್ರ ರೈಲ್ವೆ ಪೊಲೀಸರೊಂದಿಗೆ ಬಂದಿದ್ದ ರೈಲ್ವೇ ಇಂಜಿನಿಯರ್ಸ್ ಗ್ರಾಮಸ್ಥರ ವಿರೋಧಕ್ಕೆ ಮಣಿದು ಸ್ಥಳದಿಂದ ಹೊರಟು ಹೋಗಿದ್ದರು. ಇದೀಗ ಶಾಲೆಗೆ ಪರ್ಯಾಯ ಜಾಗ ನೀಡಿ, ನಿರ್ಮಾಣ ಮಾಡಿಕೊಡಬೇಕಿದೆ. ಆದರೆ, ಈವರೆಗೆ ಶಾಲಾ ಕಟ್ಟಡಕ್ಕೆ ಬೇರೆ ಸ್ಥಳ ನಿಗಧಿ ಮಾಡಿಲ್ಲ. ಯಾವುದೇ ಸಮಯದಲ್ಲಾದರೂ ರೈಲ್ವೇ ಇಲಾಖೆಯವರು ಶಾಲೆಯ ಕಟ್ಟಡ ಉರುಳಿಸುವ ಸಾಧ್ಯತೆ ಇದೆ. ಒಂದೆಡೆಗೆ ರೈಲ್ವೆ ಟ್ರ್ಯಾಕ್ ಹಾಗೂ ಇನ್ನೊಂದೆಡೆ ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ಇಲ್ಲಿ ಮಕ್ಕಳಿಗೆ ಪಾಠ ಮಾಡಲು ಕೂಡ ತೊಂದರೆಯಾಗುತ್ತಿದೆ ಎನ್ನುತ್ತಿದ್ದಾರೆ ಶಾಲೆಯ ಶಿಕ್ಷಕರು.
ಇದನ್ನೂ ಓದಿ:ಕನ್ನಡ ಮನಸುಗಳಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ: ಕಾಸರಗೋಡಿನ ಕನ್ನಡ ಶಾಲೆಗೆ ಬಂತು ಹೊಸ ಕಳೆ
ಒಟ್ಟಿನಲ್ಲಿ ಈ ಸರ್ಕಾರಿ ಶಾಲೆಯಲ್ಲಿ ಕಲಿಯುವ ನೂರಾರು ಮಕ್ಕಳ ಭವಿಷ್ಯ ಅಡಗಿದ್ದು, ರೈಲ್ವೇ ಇಲಾಖೆ ಯಾವುದೇ ಕ್ಷಣದಲ್ಲೂ ಕೂಡ ಕಟ್ಟಡ ತೆರವುಗೊಳಿಸುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಇದನ್ನ ಯಾವ ರೀತಿಯಾಗಿ ಪರಿಗಣಿಸಿ ಇಲ್ಲಿನ ಸಮಸ್ಯೆಯನ್ನ ಬಗೆಹರಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ: ವಿನಾಯಕ್ ಟಿವಿ9 ನೆಲಮಂಗಲ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:21 am, Fri, 9 June 23