ಪ್ರಧಾನಿ ಕಚೇರಿ ಸೂಚನೆಗೂ ಡೋಂಟ್ ಕೇರ್: ದಾಬಸಪೇಟೆಯಿಂದ ದೇವನಹಳ್ಳಿ ಹೆದ್ದಾರಿ ನಿರ್ಮಾಣ ಅಪಘಾತಗಳ ತಾಣವಾಗುತ್ತಿದೆ!
ಈ ರಸ್ತೆ ಕಾಮಗಾರಿ ಶುರುವಾದ ಮೇಲೆ ಅಪಘಾತಗಳು ಹೆಚ್ಚಾಗಿವೆ. ಪ್ರಧಾನ ಕಾರ್ಯದರ್ಶಿ-ಲೋಕೋಪಯೋಗಿ ಇಲಾಖೆಗೂ ಆದೇಶವಾಗಿತ್ತು. ಪ್ರಧಾನಿ ಕಚೇರಿ, ರಾಜ್ಯದ ಮುಖ್ಯಮಂತ್ರಿ ಕಚೇರಿಯಿಂದ ಬರುವ ಸೂಚನೆಗಳಿಗೂ ಕಿಂಚಿತ್ತೂ ಬೆಲೆ ಕೊಡದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸುವುದನ್ನು ಮುಂದುವರಿಸಿದ್ದಾರೆ.
ಅದು ಪ್ರಮುಖ ಹೆದ್ದಾರಿಗಳ ಸಂಪರ್ಕ ಕಲ್ಪಿಸುವ ರಸ್ತೆ, ಆ ರಸ್ತೆಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿ (PWD) ನಡೆಯುತ್ತಿದೆ. ಕಳೆದ ಎರಡು ವರ್ಷದಿಂದ ಹಿಂದೆ ಆರಂಭಗೊಂಡ ರಸ್ತೆ ಕಾಮಗಾರಿ ಈಗಾಗಲೇ ಮುಗಿಯಬೇಕಿತ್ತು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಆರಂಭಿಕ ಹಂತದಲ್ಲೆ ಇದ್ದು ಆ್ಯಕ್ಸಿಡೆಂಟ್ ಝೋನ್ ಆಗಿ ಪರಿಣಮಿಸಿ ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣವಾಗುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ಹಾಗೂ ದಾಬಸಪೇಟೆಯಿಂದ (Dabaspet) ದೇವನಹಳ್ಳಿ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸಲು 14 ಕೋಟಿ ವೆಚ್ಚದಲ್ಲಿ ಟಿ. ಬೇಗೂರು ಗ್ರಾಮದಿಂದ ತ್ಯಾಮಗೊಂಡ್ಲು ರಸ್ತೆ ಅಗಲೀಕರಣ ಕಾಮಗಾರಿ ಆರಂಭ ಮಾಡಿ ಎರಡು ವರ್ಷಗಳು ಕಳೆದಿವೆ. ಅದು 14 ಕೋಟಿ ಅನುದಾನದಲ್ಲಿ ನೆಲಮಂಗಲದ ಟಿ. ಬೇಗೂರುನಿಂದ ಶುರುವಾಗಿ ನಿಡುವಂದಾ ಗ್ರಾಮದವರೆವಿಗೂ ನಿರ್ಮಿಸಲಾಗುತ್ತಿರುವ 40 ಅಡಿ ರಸ್ತೆ. ಇನ್ನೂ ಪೂರ್ತಿಯಾಗದೆ ನೆನೆಗುದಿಗೆ ಬಿದ್ದಿದೆ. ಅಲ್ಲದೇ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ದಿನಕ್ಕೊಂದರಂತೆ ಅಪಘಾತಗಳು ಸಂಭವಿಸುತ್ತಿದ್ದು ಕಳೆದ ತಿಂಗಳಲ್ಲಿ ಈ ರಸ್ತೆಯಲ್ಲಿ ಸುಮಾರು ಹತ್ತು ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಳೆದ ತಿಂಗಳಲ್ಲಿ 50ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ ರಸ್ತೆಯಲ್ಲಿ ಬೈಕ್ ಸವಾರನೊಬ್ಬನ ಪ್ರಾಣ ಉಳಿಸಲು ಹೋಗಿ ಚಾಲಕನ ಸಮಯ ಪ್ರಜ್ಞೆಯಿಂದ ಪಕ್ಕದ ಮರಕ್ಕೆ ಗುದ್ದಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಬಳಿಕ ಸ್ಥಳಕ್ಕೆ ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಸ್ಥಳಕ್ಕೆ ಧಾವಿಸಿ ಇದರ ಬಗ್ಗೆ ಕ್ರಮ ಕೈಗೊಳುತ್ತೇವೆ, ಈ ರಸ್ತೆಯನ್ನು ನಿರ್ಮಿಸುತ್ತಿರುವ ಕಂಟ್ರಾಕ್ಟರ್ ಮೇಲೆ ಎಫ್ ಐ ಆರ್ ಮಾಡಿಸುವುದಾಗಿ ಭರವಸೆ ನೀಡಿದರಂತೆ.
ಆದರೆ ಇಷ್ಟೆಲ್ಲಾ ಘಟನೆಗಳು ಸಂಭವಿಸಿದರು ಕೂಡ ಯಾವುದೇ ಕ್ರಮವನ್ನ ಶಾಸಕರು ಹಾಗೂ ಅಧಿಕಾರಿಗಳು ತೆಗೆದುಕೊಳ್ಳದೆ ಜನರ ಮುಂದೆ ನಾಟಕೀಯ ಪ್ರದರ್ಶನ ಮಾಡುತ್ತಿದ್ದಾರೆ ಅಂತಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೂಡಲೇ ರಸ್ತೆಯನ್ನ ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ 48 ಗ್ರಾಮದ ಗ್ರಾಮಸ್ಥರು ಸೇರಿ ರಸ್ತೆಯಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ರವೀಶ್.
ಈ ರಸ್ತೆ ಕಾಮಗಾರಿ ಶುರುವಾದ ಮೇಲೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ದೂರು ಸಲ್ಲಿಸಲಾಗಿತ್ತು, ಪ್ರಧಾನ ಕಾರ್ಯದರ್ಶಿ-ಲೋಕೋಪಯೋಗಿ ಇಲಾಖೆಗೂ ಆದೇಶವಾಗಿತ್ತು. ಇಲ್ಲಿ ಸ್ಪಂದನೆ ಸಿಕ್ಕರೂ ಕೂಡ ಕೆಲಸ ಆಗಿಲ್ಲ. ಪ್ರಧಾನಿ ಕಚೇರಿ, ರಾಜ್ಯದ ಮುಖ್ಯಮಂತ್ರಿ ಕಚೇರಿಯಿಂದ ಬರುವ ಸೂಚನೆಗಳಿಗೂ ಕಿಂಚಿತ್ತೂ ಬೆಲೆ ಕೊಡದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸುವುದನ್ನು ಮುಂದುವರಿಸಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. (ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ)
ಇದನ್ನೂ ಓದಿ: Raichur: ರಾಯಚೂರು ಜಿಲ್ಲೆಗೆ ಎಂಟ್ರಿಯಾಗ್ತಿದೆ ಆಂಧ್ರ-ತೆಲಂಗಾಣದ ಭತ್ತ! ಸ್ಥಳೀಯ ರೈತರು ಕಂಗಾಲು