ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಮುಷ್ಕರ: ಇದನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ವಸೂಲಿಗೆ ಇಳಿದ ವೈಟ್ ಬೋರ್ಡ್ ಕಾರುಗಳು

| Updated By: ಆಯೇಷಾ ಬಾನು

Updated on: Sep 11, 2023 | 12:33 PM

ಇಂದು ಖಾಸಗಿ ಬಸ್, ಓಲಾ ಆಟೋ, ಕ್ಯಾಬ್, ಉಬರ್ ಆಟೋ ಕ್ಯಾಬ್, ಏರ್‌ಪೋರ್ಟ್ ಟ್ಯಾಕ್ಸಿ, ಗೂಡ್ಸ್ ವಾಹನಗಳು, ಶಾಲಾ ವಾಹನಗಳು, ಸಿಟಿ ಟ್ಯಾಕ್ಸಿ ಕಾರ್ಪೋರೇಟ್ ಕಂಪನಿಯ ಬಸ್‌ಗಳು ರೋಡಿಗಿಳಿದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವಾಹನ ಸವಾರರು, ವೈಟ್ ಬೋರ್ಡ್ ಕಾರುಗಳ‌ನ್ನ ರಸ್ತೆಗಿಳಿಸಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಮುಷ್ಕರ: ಇದನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ವಸೂಲಿಗೆ ಇಳಿದ ವೈಟ್ ಬೋರ್ಡ್ ಕಾರುಗಳು
ಬೆಂಗಳೂರು ವಿಮಾನ ನಿಲ್ದಾಣದ ಬಳಿ ಕಂಡು ಬಂದ ದೃಶ್ಯ
Follow us on

ದೇವನಹಳ್ಳಿ, ಸೆ.11: ಸಾಲು ಸಾಲು ಬೇಡಿಕೆಗಳನ್ನ ಮುಂದಿಟ್ಟು ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಸಿಬ್ಬಂದಿ ಸಮರ ಸಾರಿದ್ದಾರೆ(Bengaluru Bandh). ಖಾಸಗಿ ಸಾರಿಗೆ ಸಂಘಟನೆಗಳೆಲ್ಲ ಇಂದು ಬೆಂಗಳೂರು ಬಂದ್​ಗೆ ಕರೆ ನೀಡಿದ್ದು ಸದ್ಯದ ವರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಖಾಸಗಿ ಸಾರಿಗೆ ಮುಷ್ಕರದಿಂದ ಟ್ಯಾಕ್ಸಿಗಳು ಬಂದ್ ಹಿನ್ನೆಲೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವಾಹನ ಸವಾರರು ವೈಟ್ ಬೋರ್ಡ್ ಕಾರುಗಳ‌ನ್ನ ರಸ್ತೆಗೆ ಇಳಿಸಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಬೆಂಗಳೂರು ಏರ್ಪೋರ್ಟ್​ನಿಂದ ಮೆಜೆಸ್ಟಿಕ್, ಬನಶಂಕರಿಗೆ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ.

ಶಕ್ತಿ ಯೋಜನೆ ವಿರೋಧಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟ ಸರ್ಕಾರದ ವಿರುದ್ಧ ಬಂದ್ ಅಸ್ತ್ರ ಪ್ರಯೋಗಿಸಿದೆ. ಇಂದು ಖಾಸಗಿ ಬಸ್, ಓಲಾ ಆಟೋ, ಕ್ಯಾಬ್, ಉಬರ್ ಆಟೋ ಕ್ಯಾಬ್, ಏರ್‌ಪೋರ್ಟ್ ಟ್ಯಾಕ್ಸಿ, ಗೂಡ್ಸ್ ವಾಹನಗಳು, ಶಾಲಾ ವಾಹನಗಳು, ಸಿಟಿ ಟ್ಯಾಕ್ಸಿ ಕಾರ್ಪೋರೇಟ್ ಕಂಪನಿಯ ಬಸ್‌ಗಳು ರೋಡಿಗಿಳಿದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವಾಹನ ಸವಾರರು, ವೈಟ್ ಬೋರ್ಡ್ ಕಾರುಗಳ‌ನ್ನ ರಸ್ತೆಗಿಳಿಸಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಏರ್ಪೋರ್ಟ್​ನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಂದ ದುಪ್ಪಟ್ಟು‌ ಹಣ ಪಡೆಯಲಾಗುತ್ತಿದೆ. ವೈಟ್ ಬೋರ್ಡ್ ಕಾರುಗಳಲ್ಲಿ 1300 ರಿಂದ 2 ಸಾವಿರ ವಸೂಲಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಪುಟ್ಟಮಗು ಮತ್ತು ವೃದ್ಧ ತಂದೆತಾಯಿಯೊಂದಿಗೆ ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದ ಮಹಿಳೆಗೆ ಕೆಐಎನಲ್ಲಿ ಕ್ಯಾಬ್ ಬುಕ್ ಆಗಲಿಲ್ಲ!

ಟ್ಯಾಕ್ಸಿಗಳು ಏರ್ಪೋರ್ಟ್​ನಿಂದ ಮೆಜೆಸ್ಟಿಕ್, ಬನಶಂಕರಿಗೆ ಈ ಹಿಂದೆ 800 ರೂ. ಇಂದ ಒಂದು ಸಾವಿರ ಚಾರ್ಚ್ ಮಾಡುತ್ತಿದ್ದವು. ಆದರೆ ಇಂದು ಮುಷ್ಕರ ಹಿನ್ನೆಲೆ ದುಪ್ಪಟ್ಟು ಹಣ ವಸೂಲಿ ಮಾಡಲಾಗಿದೆ. ಕೆಲವರು ದುಪ್ಪಟ್ಟು ಹಣ ನೀಡಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹಣ ಜಾಸ್ತಿ ಅಂತ ಏರ್ಪೋಟರ್​ನಲ್ಲೇ ಉಳಿದಿದ್ದಾರೆ.

ಆಟೋದವರಿಂದಲೂ ಒನ್ ಟು ಡಬಲ್

ಇನ್ನು ನಗರದಲ್ಲಿ ಸಂಚಾರ ನಡೆಸುತ್ತಿರುವ ಕೆಲ ಆಟೋದವರು ಕೂಡ ಒನ್ ಟು ಡಬಲ್ ಚಾರ್ಚ್ ಪಡೆಯುತ್ತಿದ್ದಾರೆ. ಪ್ರತಿದಿನ ಕೆಆರ್ ಮಾರ್ಕೆಟ್​ನಿಂದ ಕಲಾಸಿಪಾಳ್ಯ ಬಸ್ ಸ್ಟ್ಯಾಂಡ್‌ಗೆ ಬರಲು 50 ರೂಪಾಯಿ ಸಾಕಾಗುತ್ತಿತ್ತು. ಆದರೆ ಇವತ್ತು 100 ರಿಂದ 150 ರೂಪಾಯಿ ಕೇಳುತ್ತಿದ್ದಾರೆ. ಇನ್ನೊಂದೆಡೆ ಸರಿಯಾದ ಸಮಯಕ್ಕೆ ಬಿಎಂಟಿಸಿ ಬಸ್​ಗಳು ಬಾರದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಗಂಟೆಗಟ್ಟಲೆ ಬಸ್‌ಗಾಗಿ ಕಾದು ಸುಸ್ತಾಗುತ್ತಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ