
ದೇವನಹಳ್ಳಿ, ಜುಲೈ 7: ಎತ್ತಿನಹೊಳೆ ಯೋಜನೆಗೆ (Yettinahole Project) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಆ ನಂತರ ಸಕಲೇಶಪುರದಲ್ಲಿ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕೂಗು ಕೇಳಿಬಂದಿದ್ದು ಗೊತ್ತೇ ಇದೆ. ಇದೆಲ್ಲದರ ಮಧ್ಯೆ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ 2024ರ ಸೆಪ್ಟೆಂಬರ್ನಲ್ಲಿ ಮಾಡಿದ್ದರು. ಬಯಲುಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳತ್ತ ಪೂರ್ವಾಭಿಮುಖವಾಗಿ ನದಿಯ ನೀರನ್ನು ತಿರುಗಿಸುವ ಈ ಯೋಜನೆಗೆ ಇದೀಗ ಬಯಲುಸೀಮೆಯಲ್ಲೇ ವಿರೋಧ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಲಕ್ಕೆನಹಳ್ಳಿ ಬಳಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಲಕ್ಕೆನಹಳ್ಳಿ ಬಳಿ ಎತ್ತಿನಹೊಳೆ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದೆ. 7 ಹಳ್ಳಿಗಳನ್ನು ಸ್ಥಳಾಂತರ ಮಾಡಿ ಡ್ಯಾಂ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಲಕ್ಕೆನಹಳ್ಳಿ ಬಳಿ ಡ್ಯಾಂ ನಿರ್ಮಾಣ ಮಾಡುವುದರಿಂದ ಲಕ್ಕೆನಹಳ್ಳಿ, ಸಿಂಗೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ, ಮಚ್ಚೇನಹಳ್ಳಿ, ಕಡೆಪಾಳ್ಯ, ಗಾಣದಾಳು ಗ್ರಾಮಗಳ ಮುಳುಗಡೆ ಆತಂಕ ಎದುರಾಗಿದ್ದು, ಇಲ್ಲಿನ ನಿವಾಸಿಗಳಿಗೆ ಸಂಪೂರ್ಣ ಸ್ಥಳಾಂತರ ಮಾಡುವ ಭಯ ಎದುರಾಗಿದೆ.
ಎತ್ತಿನಹೊಳೆ ನೀರನ್ನು ಪೈಪ್ ಲೈನ್ ಮೂಲಕ ತಂದು ಲಕ್ಕೆನಹಳ್ಳಿಯಲ್ಲಿ ನಿರ್ಮಿಸಲಾಗುವ ಡ್ಯಾಂಗೆ ತುಂಬಿಸಲು ಸರ್ಕಾರ ಯೋಜನೆ ರೂಪಿಸಿದೆ. ನಂತರ ಅಲ್ಲಿಂದ ನೀರು ಪೂರೈಕೆ ಮಾಡುವ ಇರಾದೆ ಹೊಂದಿದೆ. ಆದರೆ, ಇಲ್ಲಿ ಡ್ಯಾಂ ನಿರ್ಮಾಣದಿಂದ ಅಕ್ಕಪಕ್ಕದ 7 ಗ್ರಾಮಗಳು ಮುಳುಗಡೆಯಾಗಲಿದ್ದು, ಸಂಪೂರ್ಣ ಸ್ಥಳಾಂತರ ಮಾಡಬೇಕಾಗಲಿದೆ. ಹೀಗಾಗಿ, ‘ನಮ್ಮ ಗ್ರಾಮದ ಬಳಿ ಡ್ಯಾಂ ಬೇಡ, ಬೇರೆಡೆ ನಿರ್ಮಾಣ ಮಾಡಿ’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳೆದ ವಾರ ಡಿಸಿಎಂ ಡಿಕೆ ಶಿವಕುಮಾರ್ ಡ್ಯಾಂ ನಿರ್ಮಾಣದ ಸ್ಥಳಕ್ಕೆ ಬೇಟಿ ನೀಡಿದ್ದರು. ಇದರ ಬೆನ್ನಲ್ಲೇ, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಡ್ಯಾಂ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿಗಳು ಗ್ರಾಮಸ್ಥರ ಅಭಿಪ್ರಾಯ ಪಡೆಯದೇ ತೆರಳಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಏನಿದು ಎತ್ತಿನಹೊಳೆ ಯೋಜನೆ? ಇಲ್ಲಿದೆ ಕರ್ನಾಟಕದ ಬೃಹತ್ ಯೋಜನೆಯ ಆಳ-ಅಗಲ
ಗ್ರಾಮದ ಸುತ್ತಮುತ್ತ ಅಡಿಕೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಡ್ಯಾಂ ನಿರ್ಮಾಣ ಮಾಡಿದರೆ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಮುಳುಗಡೆಯಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದು, ಕೋಲಾರ ಅಥವಾ ಚಿಕ್ಕಬಳ್ಳಾಪುರ ಭಾಗದ ಬಯಲು ಪ್ರದೇಶದಲ್ಲಿ ಡ್ಯಾಂ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.
ಹಿರಿಯರು ಕಟ್ಟಿದ ಊರು, ಅವರ ಸಮಾಧಿ ಇರುವ ಭೂಮಿ ಬಿಟ್ಟು ಹೋಗಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಡ್ಯಾಂ ನಿರ್ಮಾಣ ಮಾಡಲು ಬಂದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
Published On - 10:51 am, Mon, 7 July 25