ಸಿಎಂ ಬದಲಾವಣೆ ಚರ್ಚೆಗೆ ಸ್ವಾಮೀಜಿಗಳೂ ಎಂಟ್ರಿ: ಒಪ್ಪಂದದಂತೆ ಸಿಎಂ ಸ್ಥಾನ ಕಲ್ಪಿಸಿಕೊಟ್ಟರೆ ಒಳ್ಳೆಯದೆಂದ ಸ್ವಾಮೀಜಿ
ಕಾಂಗ್ರೆಸ್ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ನಾಯಕತ್ವ ಬದಲಾವಣೆ ಕೂಗು ಎದ್ದಿದೆ. ಕಾಂಗ್ರೆಸ್ ಪಾಳಯದಲ್ಲಿನ ಆಂತರಿಕ ಕಚ್ಚಾಟ ದೆಹಲಿ ಮಟ್ಟಕ್ಕೂ ಮುಟ್ಟಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಸುರ್ಜೇವಾಲ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಈಮಧ್ಯೆ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸ್ವಾಮೀಜಿಗಳೂ ಧ್ವನಿಗೂಡಿಸಿದ್ದು, ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ.

ಬೆಂಗಳೂರು, ಜುಲೈ 7: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಿಎಂ ಪಟ್ಟಕ್ಕೇರುತ್ತಾರೆ ಎಂಬ ಪುಕಾರು ಕಾಂಗ್ರೆಸ್ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಮಧ್ಯೆ ಈ ವಿಚಾರಕ್ಕೆ ಸ್ವಾಮೀಜಿಗಳೂ ಕೂಡ ಧ್ವನಿಗೂಡಿಸಿದ್ದಾರೆ. ಜೂನ್ 27 ರಂದು ಕೆಂಪೇಗೌಡ ಜಯಂತಿಯಂದು ಮಾತನಾಡಿದ್ದ ನಿಶ್ಚಲಾನಂದ ಸ್ವಾಮೀಜಿ, ಡಿಕೆಶಿ ನಾಡ ಪ್ರಭುವಾಗಲಿ ಎಂದಿದ್ದರು. ಭಾನುವಾರ ಮಾತನಾಡಿರುವ ರಂಭಾಪುರ ಶ್ರೀಗಳು, ಕಾಂಗ್ರೆಸ್ ವರಿಷ್ಠರ ಸಮ್ಮುಖದಲ್ಲಿ ನಡೆದ ಒಪ್ಪಂದಂತೆ ಮತ್ತು ಒಡಂಬಡಿಕೆಯಂತೆ ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಕಲ್ಪಿಸಿಕೊಟ್ಟರೆ ಒಳ್ಳೆಯದು ಎಂದಿದ್ದಾರೆ.
ಏತನ್ಮಧ್ಯೆ, ಒಡಂಬಡಿಕೆ ಬಗ್ಗೆ ನಾನು ಬಹಿರಂಗವಾಗಿ ಯಾಕೆ ಮಾತನಾಡಲಿ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ, ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟಿದ್ದು ನಮ್ಮ ದೊರೆ ರಾಜ ಸಿದ್ದರಾಮಯ್ಯ ಎಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ. ಇತ್ತ ಸಿದ್ದರಾಮಯ್ಯ ಪುತ್ರ ಯತೀಂದ್ರ ಕೂಡ, 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಗದಗ ಜಿಲ್ಲೆ ರೋಣ ತಾಲೂಕು ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಅಲಿ ದೇವರ ವಾಣಿಯೂ ಸಿದ್ದರಾಮಯ್ಯ ಪರವೇ ಬಂದಿದೆ. ‘‘ಹಾಲು ಕೆಟ್ಟರೂ, ಹಾಲಮತ ಕೆಡಂಗಿಲ್ಲ. ಅಂಥವ್ರ ಕೈಯಾಗ ಅಧಿಕಾರ ಸಿಕ್ಕಿದೆ. ನೀವು ಕೊಟ್ಟೀರಿ. ಅದನ್ನು ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಬಹಳ ಕಠಿಣ ಐತಿ’’ ಎಂದು ದೇವರ ವಾಣಿ ಹೇಳಿದೆ.
ಶಾಸಕರ ಜೊತೆ ಸುರ್ಜೇವಾಲ ಇಂದು ಮತ್ತೆ ಸಭೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಎರಡನೇ ಹಂತದ ಶಾಸಕರ ಮೀಟಿಂಗ್ ನಡೆಸಲು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮತ್ತೆ ಮೂರು ದಿನಗಳ ಕಾಲ ಶಾಸಕರ ಜೊತೆಗೆ ಚರ್ಚೆ ನಡೆಸಲಿರುವ ಸುರ್ಜೆವಾಲ, ಸಚಿವರ ಕಾರ್ಯವೈಖರಿ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಸಾಧ್ಯತೆಗಳು ದಟ್ಟವಾಗಿವೆ. ಆಯಾಯ ಕ್ಷೇತ್ರದಲ್ಲಿ ಆಗದೇ ಇರುವ ಕೆಲಸಗಳ ಬಗ್ಗೆಯೂ ಸುರ್ಜೇವಾಲ ಮಾಹಿತಿ ಸಂಗ್ರಹ ಮಾಡಲಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಮಹತ್ವದ ಹುದ್ದೆ: ರಾಷ್ಟ್ರ ರಾಜಕಾರಣ, ಅಂತೆ-ಕಂತೆಗಳಿಗೆ ತೆರೆ ಎಳೆದ ಸಿಎಂ
ಶಾಸಕರ ಜೊತೆಗಿನ ಸಭೆಯ ಬಳಿಕ ಸಚಿವರಿಗೂ ಪ್ರತ್ಯೇಕವಾಗಿ ಸುರ್ಜೆವಾಲ ಬುಲಾವ್ ಹೊರಡಿಸಲಿದ್ದಾರೆ. ಶಾಸಕರು ಹೇಳಿದ ಅಭಿಪ್ರಾಯಗಳನ್ನು ಇಟ್ಟುಕೊಂಡು ಸಂಪುಟ ಪುನರ್ರಚನೆಗೂ ಹೈಕಮಾಂಡ್ ಹೋಂ ವರ್ಕ್ ನಡೆಸಲಿದೆ. ಈಗಾಗಲೇ ಸಚಿವರಿಂದ ಹೈಕಮಾಂಡ್ ರಿಪೋರ್ಟ್ ಕಾರ್ಡ್ ಪಡೆದುಕೊಂಡು ಪರಿಶೀಲನೆ ನಡೆಸಿದೆ. ಆಯಾಯ ಇಲಾಖೆಗೆ ಸಂಬಂದಿಸಿ 5 ಪ್ರಶ್ನೆಗಳ ರಿಪೋರ್ಟ್ ಕಾರ್ಡ್ ಪಡೆದಿರುವ ಹೈಕಮಾಂಡ್, ಸಚಿವರ ರಿಪೋರ್ಟ್ ಆಧರಿಸಿ ಪ್ರಗತಿ ಪರಿಶೀಲನೆ ನಡೆಸುತ್ತಿದೆ. ಸಚಿವರ ರಿಪೋರ್ಟ್ಗೂ ಶಾಸಕರ ದೂರಿಗೂ ತಾಳೆ ಹಾಕಲಿರುವ ಹೈಕಮಾಂಡ್, ಸಚಿವರ ಕಾರ್ಯವೈಖರಿ ಗಮನಿಸಿ ಕ್ಯಾಬಿನೆಟ್ನಲ್ಲಿ ಮುಂದುವರಿಸಬೇಕಾ ಕೈ ಬಿಡಬೇಕಾ ಎಂದು ತೀರ್ಮಾನಿಸಲಿದೆ ಎಂದು ಮೂಲಗಳು ತಿಳಿಸಿವೆ.