ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗ ತುಳಿದು ಹಲ್ಲೆ: ರೇಣುಕಾಸ್ವಾಮಿ ರೀತಿ ಮಾಡುತ್ತೇವೆ ಎಂದ ಆರೋಪಿಗಳು
ಕಳೆದ ವರ್ಷ ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಇಂತಹದ್ದೇ ಪ್ರಕರಣ ನಡೆದಿದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ರೀತಿಯಲ್ಲೇ ಓರ್ವ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ.
ನೆಲಮಂಗಲ, ಜುಲೈ 07: ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದೆ. ಕುಶಾಲ್ ಹಲ್ಲೆಗೊಳಗಾದ ಯುವಕ. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಲೇಜಿನ ದಿನಗಳಲ್ಲಿ ಕುಶಾಲ್ ಮತ್ತು ಯುವತಿ ಮಧ್ಯೆ ಪ್ರೀತಿ ಅರಳಿತ್ತು. ಎರಡು ವರ್ಷದ ಪ್ರೀತಿ ಕೆಲವು ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಬ್ಬ ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸಲಾಗದೆ ಕುಶಾಲ್, ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದನು. ಹೀಗಾಗಿ, ಯುವತಿಯ ಗೆಳೆಯ ಮತ್ತು ಆತನ ಸ್ನೇಹಿತರು ಸೇರಿಕೊಂಡು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಅಂತ ಕುಶಾಲ್ನನ್ನು ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡು ಅಪಹರಿಸಿದ್ದಾರೆ.
ಇದನ್ನೂ ಓದಿ: ಶಾಸಕರ ಮನೆಯ ಹಿಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ 20 ವಾಹನಗಳ ಮೇಲೆ ದುಷ್ಕರ್ಮಿಗಳಿಂದ ದಾಳಿ
ಬಳಿಕ, ಆರೋಪಿಗಳು ಕುಶಾಲ್ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕುಶಾಲ್ನ ಬಟ್ಟೆ ಬಿಚ್ಚಿ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ. ಕುಶಾಲ್ನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿರುವುದನ್ನು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಆರೋಪಿಗಳು, ರೇಣುಕಾಸ್ವಾಮಿ ಕೊಲೆ ಕೇಸ್ನಂತೆ ಇದೂ ಆಗುತ್ತೆ. ಎ1 ಹೇಮಂತ ಎ2 ನಾನು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಬಳಿಕ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಕುಶಾಲ್ಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.
ಈ ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೇಮಂತ್, ಯಶವಂತ್, ಶಿವಶಂಕರ್, ಶಶಾಂಕ್ ಗೌಡ ಬಂಧಿತರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 am, Mon, 7 July 25