ಸಂಚಾರ ಮಾಡದಿದ್ದರೂ ಬಿಎಂಟಿಸಿ ಬಸ್ಗೆ ಬೇಕಂತೆ ಡೀಸೆಲ್! 4 ಸಾವಿರ ಲೀಟರ್ ಡೀಸೆಲ್ ಹಣ ಲೂಟಿ
ಈ ಬಿಎಂಟಿಸಿ ಅಧಿಕಾರಿಗಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಬಸ್ಗಳು ಸಂಚಾರ ಮಾಡದೇ ಇದ್ದರೂ ಸುಳ್ಳು ಲೆಕ್ಕ ಕೊಟ್ಟು, ಸಾವಿರಾರು ಲೀಟರ್ ಡಿಸೇಲ್ ಕಳ್ಳತನ ಮಾಡಿರುವ ಬಗ್ಗೆ ಸುಮ್ಮನಹಳ್ಳಿ ಡಿಪೋ ಅಧಿಕಾರಿಗಳ ವಿರುದ್ಧ ದೂರುಗಳು ಕೇಳಿ ಬಂದಿವೆ. ಆದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು, ಜುಲೈ 7: ಬಿಎಂಟಿಸಿಯಲ್ಲಿ (BMTC) 54 ಡಿಪೋಗಳಿದ್ದು, ಸುಮಾರು 6800 ಬಸ್ಗಳಿವೆ. ಅದರಲ್ಲಿ ಪ್ರತಿದಿನ ಡಿಪೋದಿಂದ ಒಪ್ಪಂದದ ಮೇರೆಗೆ ನೂರಾರು ಬಸ್ಗಳು (BMTC Buses) ಬಾಡಿಗೆಗೆ ಹೋಗುತ್ತವೆ. ಈ ವೇಳೆ, ಡಿಪೋದ ಹಿರಿಯ ಅಧಿಕಾರಿಗಳು ಡ್ರೈವರ್ ಮತ್ತು ಕಂಡಕ್ಟರ್ಗಳನ್ನು ಸೆಟ್ ಮಾಡಿಕೊಂಡು ಸುಳ್ಳು ಲೆಕ್ಕ ಕೊಟ್ಟು ಡಿಸೇಲ್ ಕಳ್ಳತನ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದೀಗ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಘಟಕ 31 ರ ಸುಮ್ಮನಹಳ್ಳಿ ಡಿಪೋದಿಂದ ಸಿಸಿ ಕಾಂಟ್ಯಾಕ್ಟ್ ಕ್ಯಾರೇಜ್ ಮೇಲೆ ಬೇರೆಬೇರೆ ಊರಿಗೆ ಮತ್ತು ಮದುವೆ-ಶುಭ ಸಮಾರಂಭಗಳಿಗೆ ಬಿಎಂಟಿಸಿ ಬಸ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ, ಬಸ್ ಕಡಿಮೆ ದೂರ ಸಂಚಾರ ಮಾಡಿದ್ದರೂ ಹೆಚ್ಚಿನ ಸಂಚಾರ ಮಾಡಿದೆ ಎಂದು ಲೆಕ್ಕ ತೋರಿಸಿ ಡಿಪೋದ ಹಿರಿಯ ಅಧಿಕಾರಿಗಳು ಸುಮಾರು 4 ಸಾವಿರ ಲೀಟರ್ನಷ್ಟು ಡಿಸೇಲ್ ಕಳವು ಮಾಡಿ ಬಿಎಂಟಿಸಿಗೆ ಲಕ್ಷಾಂತರ ರುಪಾಯಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ಈ ಆರೋಪದ ಬಗ್ಗೆ ದಾಖಲೆ ಸಮೇತ ಬಿಎಂಟಿಸಿಯ ಮುಖ್ಯ ಕಚೇರಿಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಗೊಳ್ಳಲು ಮುಂದಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಅಕ್ರಮದಲ್ಲಿ ಹಿರಿಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪವೂ ಇದೆ.
ಈಗ ಬೆಳಕಿಗೆ ಬಂದಿರುವುದು ಸುಮ್ಮನಹಳ್ಳಿ ಡಿಪೋ ಅಕ್ರಮ ಮಾತ್ರ. ಸರಿಯಾಗಿ ತನಿಖೆ ಮಾಡಿದರೆ 54 ಡಿಪೋಗಳ ಅಕ್ರಮ ಕೂಡ ಬಯಲಾಗುತ್ತದೆ ಎಂದು ಸಾರಿಗೆ ನೌಕರರ ಮುಖಂಡರು ಹೇಳಿದ್ದಾರೆ.
ಈ ಬಗ್ಗೆ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವರು, ಈ ವಿಚಾರ ‘ಟಿವಿ9’ ವರದಿಯಿಂದ ನಮಗೆ ಗೊತ್ತಾಗಿದೆ. ಬಿಎಂಟಿಸಿ ಎಂಡಿ ಅವರಿಗೆ ಈ ಬಗ್ಗೆ ತನಿಖೆ ಮಾಡಲು ಸೂಚನೆ ನೀಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಾರ್ಟಿಗಳಲ್ಲಿ ಡ್ರಗ್ಸ್ ಕಂಡುಬಂದರೆ ರೆಸಾರ್ಟ್, ಹೋಂ ಸ್ಟೇ, ಹೋಟೆಲ್ ಮಾಲೀಕರ ಮೇಲೂ ಕೇಸ್
ಒಟ್ಟಿನಲ್ಲಿ ಬಿಎಂಟಿಸಿ ಚಾಲಕ, ನಿರ್ವಾಹಕರು ಒಂದು ಅಥವಾ ಎರಡು ರೂ. ಕಡಿಮೆ ಲೆಕ್ಕ ತೋರಿಸಿದರೆ ಕೂಡಲೇ ಅವರನ್ನು ಅಮಾನತು ಮಾಡುವ ಬಿಎಂಟಿಸಿಯ ಹಿರಿಯ ಅಧಿಕಾರಿಗಳು, ಇದೀಗ ಅಧಿಕಾರಿಗಳೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿದರೂ ಮೌನವಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.