ಶಿವಮೊಗ್ಗದಲ್ಲಿ ಹಿಂದೂ ದೇವರಿಗೆ ಅಪಮಾನ: ಇಬ್ಬರು ಕಿಡಿಗೇಡಿಗಳು ಅಂದರ್, ಪರಿಸ್ಥಿತಿ ತಿಳಿ
ಶಿವಮೊಗ್ಗದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಗಣೇಶ ಮತ್ತು ನಾಗರ ವಿಗ್ರಹಗಳಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ. ಕಿಡಿಗೇಡಿಗಳು ಮಾಡಿದ ಉದ್ಧಟತನದಿಂದಾಗಿ ಕೆಲಕಾಲ ಈ ಸಂಬಂಧ ರಾಗಿಗುಡ್ಡದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶವಾದ ರಾಗಿಗುಡ್ಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಶಿವಮೊಗ್ಗ, (ಜುಲೈ 06): ಶಿವಮೊಗ್ಗದ (Shivamogga) ಬಂಗಾರಪ್ಪ ಬಡಾವಣೆಯಲ್ಲಿ ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು ಹಾಗೂ ಅಲ್ಲೇ ಇದ್ದ ನಾಗನ ವಿಗ್ರಹ ಚರಂಡಿಗೆ ಎಸೆದು ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೆಹಮತ್‌ವುಲ್ಲಾ ಹಾಗೂ ಸದ್ದಾಂನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಮುನ್ನೆಚ್ಚರಿಕೆಯಿಂದ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಿಡಿಗೇಡಿಗಳು ಮಾಡಿದ ಉದ್ಧಟತನದಿಂದಾಗಿ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಸಕಾಲಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದಾರೆ.
ಬಂಗಾರಪ್ಪ ಬಡಾವಣೆಯ ಮುಖ್ಯ ರಸ್ತೆಯ ಬಳಿಯ ಪಾರ್ಕ್ ನಲ್ಲಿ ಗಣೇಶನ ಮೂರ್ತಿ ಹಾಗೂ ನಾಗನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ ನಿನ್ನೆ (ಜುಲೈ 05) ಸಂಜೆ ಇಬ್ಬರು ಅನ್ಯಕೋಮಿ ಯುವಕರು ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು ಹಾಗೂ ಅಲ್ಲೇ ಇದ್ದ ನಾಗನ ವಿಗ್ರಹ ಚರಂಡಿಗೆ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಅದರಂತೆ ಇದೀಗ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಗಣೇಶ ಮೂರ್ತಿಗೆ ಒದ್ದು, ನಾಗರ ವಿಗ್ರಹವನ್ನು ಅನ್ಯಕೋಮಿನ ವ್ಯಕ್ತಿ ಚರಂಡಿಗೆ ಎಸೆದ ಆರೋಪ
ಈ ಘಟನೆ ಸಂಬಂಧ ಏರಿಯಾದ ಜನ ಆಕ್ರೋಶ ಹೊರ ಹಾಕಿದ್ದರು. ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ವಿಗ್ರಹಗಳಿಗೆ ಅಪಮಾನ ಮಾಡಿದ್ದಾನಂತೆ. ಆಗ ಸ್ಥಳೀಯರ ಜತೆ ಮಾತಿನ ಚಕಮಕಿ ಮಾಡಿರೋದು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗ್ತಿದ್ದಂತೆಯೇ ಸ್ಥಳಕ್ಕೆ ಎಸ್‌ಪಿ ಮಿಥುನ್‌ಕುಮಾರ್ ಧಾವಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದರು.
ಯಾವಾಗ ಏರಿಯಾದ ಜನ ಆರೋಪಿಯನ್ನ ತರಾಟೆಗೆ ತೆಗೆದುಕೊಂಡ್ರೋ, ಆಗ ವಿಗ್ರಹಗಳನ್ನ ಮೊದಲಿದ್ದ ಸ್ಥಳದಲ್ಲೇ ಇರಿಸಿದ್ದಾನಂತೆ. ಈ ಪ್ರದೇಶದಲ್ಲಿ ಎಲ್ಲ ವರ್ಗದವರು, ಜಾತಿ-ಧರ್ಮದವರು ಒಟ್ಟಾಗಿ ಬದುಕುತ್ತಿದ್ದಾರೆ. ಹೊರಗಿನಿಂದ ಬಂದ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು, ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಭೇಟಿ ನೀಡಿ ಆರೋಪಿ ವಿರುದ್ಧ ಕ್ರಮಕೈಗೊಳ್ಬೇಕು. ಇಲ್ಲಿ ಕಾನೂನುಬಾಹಿರವಾಗಿ ಕಟ್ಟಡ ಕಟ್ಟುತ್ತಿರುವ ವ್ಯಕ್ತಿ ಮೇಲೂ ಪಾಲಿಕೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.
ಈಗ ಪೊಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಯಾರೇ ವ್ಯಕ್ತಿಗಳಿದ್ರೂ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮವಾಗಬೇಕಿದೆ.