ತುಮಕೂರು: ಪತ್ನಿಯ ಕುತ್ತಿಗೆ, ಮುಖಕ್ಕೆ 20 ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಪತಿ
ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಏಳೇಳು ಜನ್ಮ ಜೊತೆಯಾಗಿರೋಣ ಅಂತ ಸಪ್ತಪದಿ ತುಳಿದಿದ್ದ ದಂಪತಿ ಬಾಳಲ್ಲಿ ಸುಂಟರಗಾಳಿ ಬೀಸಿದ್ದು, ಚಾಕುವಿನಿಂದ ಚುಚ್ಚಿ ಪತ್ನಿಯನ್ನು ಪತಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಗಂಡನ ಜೊತೆ ಸುಖ ಸಂಸಾರ ಸಾಗಿಸಬೇಕಾಗಿದ್ದ ಮೃತ ಗೀತಾ ಮಸಣ ಸೇರಿದ್ದಾಳೆ.

ತುಮಕೂರು, ಜುಲೈ 06: ಪತ್ನಿಗೆ ಚಾಕುವಿನಿಂದ ಬರ್ಬರವಾಗಿ ಇರಿದು ಪತಿ ಕೊಲೆ ಮಾಡಿರುವ ಘಟನೆ ತುಮಕೂರು (Tumakuru) ಹೊರವಲಯದ ಅಂತರಸನಹಳ್ಳಿಯಲ್ಲಿ ನಡೆದಿದೆ. ಗೀತಾ (20) ಮೃತದುರ್ದೈವಿ. ಪತಿ ನವೀನ್ ಕೊಲೆ ಮಾಡಿದ ಆರೋಪಿ. ನವೀನ್ ಮತ್ತು ಗೀತಾ ಎರಡು ವರ್ಷ ಹಿಂದೆಯಷ್ಟೇ ಮದುವೆಯಾಗಿದ್ದರು. ದಂಪತಿ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನವೀನ್ ಅಂತರಸನಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿನ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ದಂಪತಿಗೆ ಒಂದು ವರ್ಷದ ಗಂಡು ಮಗು ಇದೆ. ಮಗುವನ್ನು ಗೀತಾ ತನ್ನ ತವರು ಮನೆಗೆ ಕಳುಹಿಸಿದ್ದರು.
ದಂಪತಿ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು. ಶನಿವಾರ (ಜು.05) ರಾತ್ರಿ ದಂಪತಿ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ಪತ್ನಿ ಗೀತಾರಿಗೆ ಪತಿ ನವೀನ್ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಮನೆ ಮಾಲೀಕ ಬಾಡಿಗೆ ಪಡೆಯಲೆಂದು ರವಿವಾರ (ಜು.06) ಬೆಳಿಗ್ಗೆ ಮನೆ ಬಳಿ ಬಂದಿದ್ದರು. ಈ ವೇಳೆ ಗೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಮನೆ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಗೆಳತಿಯ ಪತಿಯನ್ನು ಕೊಲೆ ಮಾಡಿದ ಶಾಲಾ ವಾಹನ ಚಾಲಕ? ಅನೈತಿಕ ಸಂಬಂಧ ಶಂಕೆ
ನವೀನ್ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಗೀತಾರ ಕುತ್ತಿಗೆ ಮತ್ತು ಮುಖಕ್ಕೆ ನವೀನ್ 20ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ನವೀನ್ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಕಾರಣವೇನು ಎಂಬುವುದು ಪೊಲೀಸರ ತನಿಖೆ ಬಳಿಕ ಗೊತ್ತಾಗಲಿದೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಜೋಡಿ
ನವೀನ್ ಮತ್ತು ಗೀತಾ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ದಂಪತಿ ಅಂತರಸನಹಳ್ಳಿಯಲ್ಲಿ ಒಂದೂವರೆ ವರ್ಷ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಗಂಡು ಮಗು ಇದೆ. ಆರೋಪಿ ನವೀನ್ ಅಂತರಸನಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿನ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನವೀನ್ ವಾರಕ್ಕೆ ಎರಡು ದಿನ ಮಾತ್ರ ಕೆಲಸಕ್ಕೆ ಹೋಗುತ್ತಿದ್ದನು. ಬಾಕಿ ದಿನ ಮನೆಯಲ್ಲೇ ಇರುತ್ತಿದ್ದನು.
ವಾರಕ್ಕೆ ಎರಡು ದಿನ ದಂಪತಿ ನಡುವೆ ಜಗಳವಾಗುತ್ತಿತ್ತು. ಕೆಲವು ಸಲ ಮನೆ ಮಾಲೀಕ ಜಗಳ ಬಿಡಿಸಿದ್ದರು. ಇಬ್ಬರ ಜಗಳ ಅತಿರೇಕಕ್ಕೆ ಹೋದಾಗ ಮಾಲೀಕ ಮನೆ ಖಾಲಿ ಮಾಡಿಸಿದ್ದನು. ಹೀಗಾಗಿ, ದಂಪತಿ ಮೂರು ತಿಂಗಳು ಬೇರೆ ಕಡೆಯಿದ್ದರು. ಆದರೆ, ಅಲ್ಲಿ ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ ಅಂತ ಮತ್ತೆ ಹಳೆ ಮನೆಗೆ ದಂಪತಿ ಪಾಪಸ್ ಬಂದಿದ್ದರು.
ಆರೋಪಿ ನವೀನ್, ಮೂರು ತಿಂಗಳಿನಿಂದ ಮನೆ ಬಾಡಿಗೆ ಕೊಡದೆ ಬಾಕಿ ಉಳಿಸಿಕೊಂಡಿದ್ದನು. ರವಿವಾರ (ಜು.06) ಬೆಳಗ್ಗೆ ಮನೆ ಮಾಲೀಕನ ಮಗ ಬಾಡಿಗೆ ಹಣ ಕೇಳಲು ಬಂದಿದ್ದರು. ಮನೆಯ ಬಾಗಿಲು ಅರ್ಧ ತೆರೆದಿತ್ತು. ಮಾಲೀಕನ ಮಗ ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಗೀತಾ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಯುವಕ ತನ್ನ ತಂದೆಗೆ ವಿಚಾರ ತಿಳಿಸಿದ್ದಾರೆ. ಆಗ, ಮನೆ ಮಾಲೀಕ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Sun, 6 July 25