ಗೆಳತಿಯ ಪತಿಯನ್ನು ಕೊಲೆ ಮಾಡಿದ ಶಾಲಾ ವಾಹನ ಚಾಲಕ? ಅನೈತಿಕ ಸಂಬಂಧ ಶಂಕೆ
ಹಾಸನ ಜಿಲ್ಲೆಯ ಮಧು ಕೂಲಿ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಶುಕ್ರವಾರ (ಜು.04) ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋದವರು ರಾತ್ರಿ ಎಷ್ಟೊತ್ತಾದರೂ ಮನೆಗೆ ಬಂದಿರಲಿಲ್ಲ. ಫೋನ್ ಮಾಡಿದರೂ ಕನೆಕ್ಟ್ ಆಗುತ್ತಿರಲಿಲ್ಲ. ಶನಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 376ರ ಬದಿಯಲ್ಲಿ ಮಧು ಅವರ ಶವ ಪತ್ತೆಯಾಗಿದೆ. ಈ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಹಾಗಿದ್ದರೆ, ಮಧು ಮೃತಪಟ್ಟಿದ್ದು ಹೇಗೆ? ಇಲ್ಲಿದೆ ವಿವರ.

ಹಾಸನ, ಜುಲೈ 05: ಹಾಸನದಿಂದ (Hassan) ಬೇಲೂರುಕಡೆಗೆ (Belur) ಹೋಗುವ ರಾಷ್ಟ್ರೀಯ ಹೆದ್ದಾರಿ 376ರ ಹೂವಿನಹಳ್ಳಿ ಕಾವಲು ಬಳಿ ಶನಿವಾರ (ಜು.05) ಅಪರಿಚಿತ ಶವ ಪತ್ತೆಯಾಗಿದೆ. ಹಾಸನ ತಾಲೂಕಿನ ಹೂವಿನಹಳ್ಳಿ ಗ್ರಾಮದ ಮಧು (36) ಮೃತ ದುರ್ದೈವಿ. ಹೆದ್ದಾರಿ ಪಕ್ಕದಲ್ಲಿ ಮಧ ಶವ ಕಂಡ ಸ್ಥಳೀಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳೀಯರು, ಮಧು ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು. ಆದರೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ, ಮಧು ಅಪಘಾತದಿಂದ ಮೃತಪಟ್ಟಿಲ್ಲ, ಕೊಲೆಯಾಗಿದ್ದಾನೆ ಎಂದು ಗೊತ್ತಾಗಿದೆ.
ಏಳು ವರ್ಷಗಳ ಹಿಂದೆ ಅರಸೀಕೆರೆ ಮೂಲದ ಯುವತಿಯ ಜೊತೆಗೆ ಮೃತ ಮಧು ಅವರ ವಿವಾಹವಾಗಿದೆ. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಬೆಳಗ್ಗೆ ಕೂಲಿ ಕೆಲಸಕ್ಕೆ ಹೋದ ಮಧು, ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬರುತ್ತಿದ್ದನು. ಈ ನಡುವೆ ಶಾಲಾ ವಾಹನದ ಚಾಲಕ ಮೋಹನ್ ಕುಮಾರ್ ಎಂಬುವರ ಜೊತೆಗೆ ಮಧು ಪತ್ನಿಯ ಗೆಳೆತನವಾಗಿತ್ತಂತೆ. ಮೋಹನ್ ಕುಮಾರ್ ಆಗಾಗ ಮಧು ಪತ್ನಿಯನ್ನು ಬೇಟಿಯಾಗುವುದು, ಆಕೆಯನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿ ಬರುತ್ತಿದ್ದನಂತೆ.
ಹೀಗಿರುವಾಗ, ಮೋಹನ್ ಕುಮಾರ್ ಒಂದು ದಿನ ಮಧು ಪತ್ನಿಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ಯೋಚಿಸಿ ಮಧು ಅನ್ನು ಕೊಲೆ ಮಾಡುವ ಪ್ಲಾನ್ ಮಾಡಿದ್ದಾನೆ. ಶುಕ್ರವಾರ (ಜು.04) ರಾತ್ರಿ ಕೂಲಿ ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಮಧುವನ್ನು ಕರೆದೊಯ್ದ ಮೋಹನ್ ಕುಮಾರ್ ಆತನಿಗೆ ಕಂಠಪೂರ್ತಿ ಕುಡಿಸಿದ್ದಾನೆ. ಬಳಿಕ, ಮದ್ಯದ ನಶೆಯಿಂದ ನಿತ್ರಾಣಗೊಂಡ ಮಧುವಿನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಕೆಲಸದಾಕೆ ಜತೆ ಚಕ್ಕಂದ ಆಡ್ತಾನೆಂದು ಪತಿಗೆ ಚಟ್ಟ ಕಟ್ಟಿದ ಪತ್ನಿ: ಶವಕ್ಕೆ ಸ್ನಾನ ಮಾಡಿ ಮಲಗಿಸಿ ನಾಟಕ!
ರಾತ್ರಿ ಮಧು ಮನೆಗೆ ಬಾರದಿದ್ದಾಗ ಮನೆಯವರು ಫೋನ್ ಮಾಡಿದ್ದಾರೆ. ಆದರೆ, ಆತನ ಫೋನ್ಗೆ ಕಾಲ್ ಕನೆಕ್ಟ್ ಆಗಿಲ್ಲ. ಬೆಳಗ್ಗೆ ಎದ್ದು ನೋಡಿದರೇ ಮಧು ಶವ ಹೆದ್ದಾರಿ ಪಕ್ಕದಲ್ಲಿ ಪತ್ತೆಯಾಗಿದೆ. ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಧು ತಾಯಿ ನೀಡಿದ ದೂರು ಆಧರಿಸಿ ಕೊಲೆ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಧು ಕುಟುಂಬ ಸದಸ್ಯರು ಆಕ್ರೋಶ ಹೊರ ಹಾಕಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Sat, 5 July 25