ಏನಿದು ಎತ್ತಿನಹೊಳೆ ಯೋಜನೆ? ಇಲ್ಲಿದೆ ಕರ್ನಾಟಕದ ಬೃಹತ್​ ಯೋಜನೆಯ ಆಳ-ಅಗಲ

ರಾಜ್ಯದ ಏಳು ಜಿಲ್ಲೆಗಳ ಜನರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಎತ್ತಿನಹೊಳೆ ಯೋಜನೆಗೆ ಈಗ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಸೆಪ್ಟೆಂಬರ್​ 6 ಗೌರಿ ಹಬ್ಬದ ದಿನ ಯೋಜನೆಯ ಮೊದಲ ಹಂತದ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಒಟ್ಟು ಏಳು ಜಿಲ್ಲೆಗಳತ್ತ ಪೂರ್ವಾಭಿಮುಖವಾಗಿ ನದಿಯ ನೀರನ್ನೆ ತಿರುಗಿಸುವ ಮಹತ್ವದ ಯೋಜನೆ ಇದಾಗಿದೆ. ಎತ್ತಿನಹೊಳೆ ಯೋಜನೆ ಯಾರಿಗೆ ಉಪಯೋಗವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಎತ್ತಿನಹೊಳೆ ಯೋಜನೆ? ಇಲ್ಲಿದೆ ಕರ್ನಾಟಕದ ಬೃಹತ್​ ಯೋಜನೆಯ ಆಳ-ಅಗಲ
ಏನಿದು ಎತ್ತಿನಹೊಳೆ ಯೋಜನೆ? ಇಲ್ಲಿದೆ ಕರ್ನಾಟಕದ ಬೃಹತ್​ ಯೋಜನೆಯ ಆಳ-ಅಗಲ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 04, 2024 | 6:36 PM

ಹಾಸನ, ಸೆಪ್ಟೆಂಬರ್​ 04: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಎತ್ತಿನಹೊಳೆ ಯೋಜನೆ (Yetthinahole Project) ಮೊದಲ ಹಂತದ ಯಶ ಕಂಡಿದೆ. ಹಲವು ವಿರೋಧ, ಪ್ರತಿರೋಧಗಳ ನಡುವೆ 2014ರ ಮಾರ್ಚ್​ನಲ್ಲಿ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಂದಲೇ ಚಾಲನೆಗೊಂಡಿದ್ದ ಈ ಯೋಜನೆ ಹತ್ತು ವರ್ಷಗಳ ಬಳಿಕ ಅಂದರೆ ಸೆಪ್ಟೆಂಬರ್​ 2024ರ 6ರ ಶುಕ್ರವಾರ ಗೌರಿ ಹಬ್ಬದ ದಿನ ಯೋಜನೆಯ ಮೊದಲ ಹಂತದ ಉದ್ಘಾಟನೆ ಕೂಡ ಸಿಎಂ ಸಿದ್ದರಾಮಯ್ಯ ಅವರಿಂದಲೇ ನೆರವೇರುತ್ತಿದೆ. ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿಯೋ ಎತ್ತಿನಹೊಳೆ ಪಶ್ಚಿಮಘಟ್ಟದಿಂದ ಪಶ್ಚಿಮ ದಿಕ್ಕಿನೆಡೆಗೆ ಅಂದರೆ ಸಮುದ್ರದ ಕಡೆಗೆ ಹರಿಯುತ್ತೆ. ಹೀಗೆ ಸಮುದ್ರ ಸೇರಿ ಸುಮಾರು 24 ಟಿಎಂಸಿ ನೀರನ್ನು ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು, ರಾಮನಗರ ಹಾಗೂ ಹಾಸನ ಮತ್ತು ಚಿಕ್ಕಮಗಳೂರು ಸೇರಿ ಒಟ್ಟು ಏಳು ಜಿಲ್ಲೆಗಳತ್ತ ಅಂದ್ರೆ ಪೂರ್ವಾಭಿಮುಖವಾಗಿ ನದಿಯ ನೀರನ್ನೆ ತಿರುಗಿಸೊ ಮಹತ್ವದ ಯೋಜನೆ ಇದಾಗಿದೆ.

ಯೋಜನೆ ಆರಂಭವಾದಾಗ ಈ ಯೋಜನೆ ಸಕ್ಸಸ್ ಆಗಲು ಸಾಧ್ಯವೇ ಇಲ್ಲ ಎನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ಹಲವು ವಿರೋಧಗಳ ನಡುವೆಯು ಕೂಡ ಎತ್ತಿನಹೊಳೆ ಯೋಜನೆ ಆರಂಭಿಕ ಯಶಸ್ಸು ಕಂಡಿದೆ. ಮೊದಲ ಹಂತದ ಯೋಜನೆಗೆ ಸೆಪ್ಟೆಂಬರ್ 6ರ ಗೌರಿ ಹಬ್ಬದ ದಿನ ಜಲಸಂಫನ್ಮೂಲ ಸಚಿವರೂ ಆಗಿರೊ ಡಿಸಿಎಂ ಡಿಕೆ ಶಿವಕುಮಾರ್ ಹಾಗು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸದಸ್ಯರ ಸಮ್ಮುಖದಲ್ಲಿ ಅದ್ದೂರಿ ಉದ್ಘಾಟನೆಗೆ ತಯಾರಿ ನಡೆದಿದೆ.

ಎತ್ತಿನಹೊಳೆ ರಾಜ್ಯದ ಬೃಹತ್ ಯೋಜನೆ 

ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಅತಿದೊಡ್ಡ ನಿರಾವರಿ ಯೋಜನೆ ಈ ಎತ್ತಿನಹೊಳೆ ಯೋಜನೆ. ಒಟ್ಟು 24 ಟಿಎಂಸಿ ನೀರನ್ನ ಮೇಲೆತ್ತಿ ಹರಿಸುವ ಈ ಯೋಜನೆಯಲ್ಲಿ 14 ಟಿಎಂಸಿ ಕುಡಿಯೋ ನಿರಿಗಾಗಿಯೂ 10 ಟಿಎಂಸಿ ನೀರನ್ನ ಉದ್ದೇಶಿತ ಏಳು ಜಿಲ್ಲೆಗಳ ಸುಮಾರು 527 ಕರೆಗಳನ್ನ ತುಂಬಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಗಾಗಿ ಒಟ್ಟು ನಾಲ್ಕು ಭಾಗಗಳಾಗಿ ವಿಭಾಗ ಮಾಡಲಾಗಿದೆ. ನೀರೆತ್ತೋ ತೊಟ್ಟಿಗಳು, ಗುರುತ್ವ ಕಾಲುವೆ, ಸಮತೋಲನ ಜಲಾಶಯ ಮತ್ತು ಪೈಪ್ ಲೈನ್​ಗಳಾಗಿ ನಾಲ್ಕು ಭಾಗಮಾಡಿ ಯೋಜನೆ ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಒಟ್ಟು ಎಂಟು ಜಲ ಮೂಲಗಳಿಂದ ನೀರು ಹರಿಸಲು ಎಂಟು ಪೈಪ್ ಲೈನ್ ಮಾಡಲಾಗಿದೆ.

9 ಪಂಪ್ ಹೌಸ್, 8 ಸಬ್ ಸ್ಟೇಷನ್ ಮೂಲಕ ಈ ಯೋಜನೆಯ ನೀರು ಹರಿಯುತ್ತೆ. ಒಟ್ಟು 261 ಕಿ.ಮೀ ಈ ಯೋಜನೆಯಲ್ಲಿ ನೀರು ಹರಿಯೋ ಕಾಲುವೆಯ ಉದ್ದವಾಗಿದ್ದು ಈಗಾಗಲೆ ಮೂಲದಿಂದ ಸುಮಾರು 42 ಕಿ.ಮೀ ಅಂದರೆ ಬೇಲೂರು ತಾಲ್ಲೂಕಿನ ಐದಳ್ಳ ಕಾವಲುವೆರೆಗೂ ನೀರು ಸರಾಗವಾಗಿ ಹರಿಯಲು ಬೇಕಾದ ಕಾಮಗಾರಿ ಮುಗಿದಿದೆ. ಆದರೆ ಐದಳ್ಳ ಕಾವಲು ಬಳಿ ಐದು ಕಿಲೋಮೀಟರ್ ಅರಣ್ಯ ಭೂಮಿಯಲ್ಲಿ ಕಾಲುವೆ ಹೋಗಬೇಕಿರುವುದರಿಂದ ಅಲ್ಲಿ ಕಾಮಗಾರಿ ಆಗದೇ 32ನೇ ಕಿ.ಮೀನಲ್ಲಿ ನೀರನ್ನ ಬೇರೆಡೆ ತಿರುಗಿಸಿ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರದತ್ತ ಹರಿಸಲಾಗುತ್ತಿದೆ.

ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆಯಿಂದ ಜಮೀನು ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ: ಶಿವಕುಮಾರ್

ಎತ್ತಿನಹೊಳೆಯ ಈ ಯೋಜನೆಗಾಗಿ ಸಕಲೇಶಪುರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಎಂಟು ಪೈಪ್ ಲೈನ್ ಗಳ ಮೂಲಕ ನೀರು ಹರಿಯಲಿದ್ದು ಮೊದಲ ಪೈಪ್ ಲೈನ್ ನಲ್ಲಿ 6.6 ಟಿಎಂಸಿ ನೀರು ಸಿಗಲಿದೆ, ಎರಡನೇ ಪೈಪ್ ನಲ್ಲಿ 1.0 ಟಿಎಂಸಿ, ಮೂರನೇ ಪೈಪ್ ಲೈನ್ ನಲ್ಲಿ 1.4 ಟಿಎಂಸಿ, ನಾಲ್ಕನೆಯದ್ದರಲ್ಲಿ 0.98 ಟಿಎಂಸಿ, ಐದನೇ ಪೈಪ್ ಲೈನ್ ನಲ್ಲಿ 1.73 ಟಿಎಂಸಿ, ಆರನೇ ಪೈಪ್ ಲೈನ್ ನಲ್ಲಿ 2.01 ಟಿಎಂಸಿ, ಎಳನೇ ಪೈಪ್ ಲೈನ್ ನಲ್ಲಿ 7.76 ಟಿಎಂಸಿ, ಎಂಟನೇಯದ್ದರಲ್ಲಿ 2.51 ಟಿಎಂಸಿ ಸೇರಿ ಒಟ್ಟು 24 ಟಿಎಂಸಿ ನೀರು ಸಿಗಲಿದ್ದು ಈ ನೀರನ್ನ ಬಯಲು ಸೀಮೆಗೆ ಹರಿಸೋದು ಈ ಯೋಜನೆಯ ಬಹುಮುಖ್ಯ ಉದ್ದೇಶವಾಗಿದೆ.

ಸಕಲೇಶಪುರ ತಾಲ್ಲೂಕಿನ ದೊಡ್ದನಾಗರ ಎಂಬಲ್ಲಿ ಎಂಟು ಪೈಪ್ ಲೈನಗಳ ನೀರು ಬಂದು ಅಲ್ಲಿಂದ ಪಂಪ್ ಆಗೋ ನೀರು ಮೂರನೇ ವಿತರಣಾ ತೊಟ್ಟಿ ಸಕಲೇಶಫುರ ತಾಲ್ಲೂಕಿನ ಹೆಬ್ಬನಹಳ್ಳಿಗೆ ಬಂದು ಅಲ್ಲಿಂದ ಗುರುತ್ವ ಬಲದಿಂದ ನೀರು ದೊಡ್ಡಬಳ್ಳಾಫುರದತ್ತ ಹರಿಯಲಿದೆ. 2014ರ ಮಾರ್ಚ್ ರಂದು ಈ ಯೋಜನೆ ಆರಂಭವಾದಾಗ ಇದರ ಅಂದಾಜು ಮೊತ್ತ 8500 ಕೋಟಿ ರೂ. ನಂತರ ಅದು 12 ಸಾವಿರ ಕೋಟಿ ರೂ. ಏರಿತು. ಬಳಿಕ 2023ರ ಜನವರಿಯಂದು ಈ ಯೋಜನೆ ಗಾತ್ರ 23, 251 ಕೋಟಿ ರೂ. ಏರಿಕೆ ಮೂಲಕ ರಾಜ್ಯದ ಅತಿದೊಡ್ಡ ನಿರಾವರಿ ಯೋಜನೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗುತ್ತಿದೆ. ಇದರಲ್ಲಿ ಬರೊಬ್ಬರಿ 8500 ಕೋಟಿಯಷ್ಟು ಬೃಹತ್ ಮೊತ್ತವನ್ನ ಪಾವತಿ ಮಾಡಿ ರೈತರ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲಾಗಿದೆ ಎನ್ನೋದು ಕೂಡ ಮಹತ್ವದ ಸಂಗತಿಯಾಗಿದೆ.

ಸುರಂಗ, ಪೈಪ್ ಲೈನ್ ಗುರುತ್ವ ಬಲದಿಂದ ಹರಿಯಲಿದೆ ನೀರು 

ಪಶ್ಚಿಮಘಟ್ಟ ಪ್ರದೇಶದಿಂದ ಬಯಲುಸೀಮೆ ಪ್ರದೇಶಕ್ಕೆ ನೀರು ಹರಿಸುವುದು ಸುಲಭದ ಕೆಲಸವೇನು ಅಲ್ಲ. ಹಾಗಾಗಿಯೇ ಈ ಯೋಜನೆ ಜಾರಿಯಾದಾಗ ಬಹಳ ವಿರೋಧವಿತ್ತು. ಆದರೆ ಎಲ್ಲಾ ವಿರೋಧ, ಅಡೆತಡೆ, ಹಲವು ವಿಘ್ನಗಳೆಲ್ಲವನ್ನು ಮೀರಿ ಈಗ ಯೋಜನೆ ಮುಗಿಯುವ ಹಂತಕ್ಕೆ ಬರುತ್ತಿದೆ. ಜಲ ಸಂಪನ್ಮೂಲ ಸಚಿವರು ಹೇಳುವ ಮಾಹಿತಿ ಪ್ರಕಾರ 2027ರ ವೇಳೆಗೆ ಈ ಯೋಜನೆ ಸಂಪೂರ್ಣ ಮುಗಿದು ಉದ್ದೇಶಿತ ಜಿಲ್ಲೆಗಳಿಗೆ ನೀರು ಹರಿಯಲಿದೆ ಎನ್ನೋ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎತ್ತಿನಹೊಳೆ ಯೋಜನೆಯ ಒಟ್ಟು ಉದ್ದ 290 ಕಿಲೋಮೀಟರ್ ಅದರಲ್ಲಿ ಗುರುತ್ವಾಕರ್ಷಣೆ ಬಲದ ಮೂಲವೇ 261 ಕಿಲೋಮೀಟರ್ ಅಂದ್ರೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿಯಿಮದ ದೊಡ್ಡಬಳ್ಳಾಪುರದ ವರೆಗೆ ನೀರು ಹರಿಯಲಿದೆ.

ಅದರಲ್ಲಿ 126 ಕಿಲೋಮೀಟರ್ ಪೈಪ್ ಲೈನ್ ಮೂಲಕ ನೀರು ಹರಿದರೆ ಉಳಿದಂತೆ 140 ಕಿಲೋಮೀಟರ್ ನಷ್ಟು ಪ್ರಮಾಣದಲ್ಲಿ ತೆರೆದ ಕಾಲುವೆಗಳ ಮೂಲಕ ನೀರು ಹರಿದು ಗುರಿಮುಟ್ಟಲಿದೆ. ಇಷ್ಟೋ ದೊಡ್ಡ ಯೋಜನೆಯಲ್ಲಿ ಈಗ 162 ಕಿಲೋಮೀಟರ್ ಕಾಲುವೆ ಕೆಲಸ ಸಂಪೂರ್ಣವಾಗಿ ಮುಗಿದಿದ್ದರೆ, 25 ಕಿಲೋಮೀಟರ್ ಕೆಲಸ ಪ್ರಗತಿಯಲ್ಲಿದೆ. 50 ಕಿಲೋಮೀರ್ ಪ್ರದೇಶದಲ್ಲಿ 19 ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿದ್ದು ಆ ಪ್ರದೇಶದ ಕೆಲಸ ಕೂಡ ಬಾಕಿ ಇದ್ದು 502 ಎಕರೆ ಬದಲಿ ಭೂಮಿಯನ್ನ ಕೊಟ್ಟು ಅರಣ್ಯ ಪ್ರದೇಶದಲ್ಲಿ ಕೂಡ ಕೆಲಸ ಶುರುಮಾಡಲು ಪ್ರಯತ್ನ ನಡೆದಿದೆ.

ಹಾಸನ ಜಿಲ್ಲೆಯೊಳಗೆ ಸದ್ಯ 42ನೇ ಕಿಲೋಮೀಟರ್​ವರೆಗೂ ಕೂಡ ನೀರು ಹರಿಯುವಷ್ಟು ಕೆಲಸ ಆಗಿದೆ. ಆದರೆ ಬೇಲೂರು ತಾಲ್ಲೂಕಿನ ಐದಳ್ಳ ಕಾವಲು ಬಳಿ ಅರಣ್ಯ ಪ್ರದೇಶದಲ್ಲಿ ಕೆಲಸ ಆಗಬೇಕಿರುವುದರಿಂದ 32 ಕಿಲೋಮೀಟರ್​ನಿಂದ ನೀರನ್ನ ಬೇರೆಡೆ ತಿರುಗಿಸಿ ಅಲ್ಲಿಂದ 132 ಕಿಲೋಮೀಟರ್ ದೂರದಲ್ಲಿರುವ ವಾಣಿವಿಲಾಸ ಸಾಗರಲ್ಲಿ ನೀರು ಹರಿಸಲಾಗುತ್ತಿದೆ. ಹಳೆಬೀಡು ಕೆರೆ, ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆಗಳ ಮೂಲಕ ನೀರು ವೇದಾ ನದಿಗೆ ಸೇರಿ ಅಲ್ಲಿಂದ ವಾಣಿವಿಲಾಸ ಸೇರಲು ಬೇಕಾದ ವ್ಯವಸ್ಥೆಯನ್ನ ಸದ್ಯಕ್ಕೆ ಮಾಡಲಾಗಿದೆ.

ಎತ್ತಿನಹೊಳೆ ಯೋಜನೆಯಿಂದ ಸಿಗುವ ನೀರೆಷ್ಟು?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಉದ್ದೇಶ ಪಶ್ಷಿಮಘಟ್ಟ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ವ್ಯರ್ಥವಾಗಿ ಸಮುದ್ರ ಸೇರೋದನ್ನ ತಡೆದು ಅದನ್ನ ಬಯಲುಸೀಮೆ ಭಾಗದ ಜಿಲ್ಲೆಗಳ ಕುಡಿಯೋ ನೀರುಪೂರೈಕೆಗೆ ಬಳಸೋದಾಗಿದೆ, ಒಟ್ಟು 24 ಟಿಎಂಸಿ ನೀರು ಸಿಗಲಿದೆ ಎನ್ನೋ ನಿರೀಕ್ಷೆಯಲ್ಲಿ ಈ ಯೋಜನೆ ಜಾರಿಮಾಡಲಾಗಿದೆ. ಓಟ್ಟು ಎಂಟು ಬೇರೆ ಬೇರೆ ಪ್ರದೇಶಗಳಿಂದ ನೀರನ್ನ ಪೈಪ್ ಲೈನ್ ಗಳ ಮೂಲಕ ಹರಿಸಿ ಒಂದು ಕಡೆ ಅದನ್ನ ಸಂಗ್ರಹಮಾಡಿ ಅಲ್ಲಿಂದ ನೀರು ಹರಿಸೋದು ಯೋಜನೆಯ ಉದ್ದೇಶವಾಗಿದೆ. ಅದರಂತೆ 14 ಟಿಎಂಸಿ ಕುಡಿಯುವ ನೀರಿನ ಉದ್ದೇಶಕ್ಕೂ, 10 ಟಿಎಂಸಿ ನೀರನ್ನ ಕೆರೆಗಳನ್ನ ತುಂಬಿಸಲು ಬಳಸಲಾಗುತ್ತೆ.

ಮಳೆಗಾಲದ ಜೂನ್ 1ರಿಂದ ಆರಂಭವಾದರೆ ಅಕ್ಟೋಬರ್ 31ರ ವರೆಗೆ ಅಂದರೆ ಒಟ್ಟು 139 ದಿನಗಳ ಕಾಲ ಈ ಭಾಗದಿಂದ ನೀರು ಹರಿಸಬಹುದು ಎನ್ನೋದು ಯೋಜನೆಯ ಲೆಕ್ಕಾಚಾರ ಹಾಗೂ ಉದ್ದಶ. ಮಳೆಗಾಲ ಚೆನ್ನಾಗಿ ಆದರೆ ಕಾಲುವೆಯಲ್ಲಿ ಏಕ ಕಾಲದಲ್ಲಿ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಬೇಕಾದಷ್ಟು ಪ್ರಮಾಣದಲ್ಲಿ ತಯಾರಿ ಮಾಡಲಾಗಿದೆ. ಆದರೆ ಸದ್ಯ ಕಾಲುವೆಯಲ್ಲಿ 1500 ಕ್ಯೂಸೆಕ್ ನೀರನ್ನ ಹರಿಸಲಾಗುತ್ತೆ. ಎಂಟು ಪೈಪ್ ಲೈನ್ ಗಳ ಪೈಕಿ 7 ಪೈಪ್ ಲೈನ್ ಕೆಲಸ ಮುಗಿದಿದ್ದು ಇದರಿಂದ 1500 ಕ್ಯೂಸೆಕ್ ನೀರನ್ನ ಸೆಪ್ಟೆಂಬರ್ 6ರಿಂದ ಹರಿಸಲು ಆರಂಭ ಮಾಡಲಾಗುತ್ತೆ.

ಇದನ್ನೂ ಓದಿ: ಗೌರಿಹಬ್ಬದ ದಿನ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡ್ತೇವೆ-ಡಿಕೆ ಶಿವಕುಮಾರ್​

ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಇದುವರೆಗೆ ಸುಮಾರು 15 ಟಿಎಂಸಿ ನೀರು ಹರಿದು ಸಮುದ್ರ ಸೇರಿದೆ. ಸೆಪ್ಟೆಂಬರ್ 6ರಿಂದ ಅಕ್ಟೋಬರ್ 31ರವರೆಗೆ ಅಂದರೆ ಒಟ್ಟು 60 ದಿನಗಳು ನಿರಂತರವಾಗಿ ನೀರು ಹರಿಸುವ ಪ್ಲಾನ್ ಇದ್ದು, ಇಷ್ಟು ದಿನ ನಿತ್ಯ 1500 ಕ್ಯೂಸೆಕ್ ನೀರು ಹರಿದರೆ ವಾಣಿವಿಲಾಸ ಸಾಗರಕ್ಕೆ 5 ಟಿಎಂಸಿ ನೀರು ಹರಿದು ಹೋಗಲಿದೆ ಎನ್ನೋ ಲೆಕ್ಕಾಚಾರ ಇಟ್ಟುಕೊಳ್ಳಲಾಗಿದೆ. ಮುಂದಿನ ವರ್ಷದ ಮಳೆಗಾಲದ ವೇಳೆಗೆ ಹಾಸನ ಹಾಗೂ ಚಿಕ್ಕಮಗಳೂರು ಭಾಗದ ಕೆರೆಗಳನ್ನು ಕೂಡ ತುಂಬಿಸುವ ಹಂತಕ್ಕೆ ಕಾಮಗಾರಿ ಮುಗಿಯಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸೆಪ್ಟೆಂಬರ್ 6ರಂದು ಅದ್ದೂರಿ ಕಾರ್ಯಕ್ರಮ್ಕಕೆ ತಯಾರಿ 

ಈ ಹಿಂದೆ 2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಚಾಲನೆ ಕೊಟ್ಟಿದ್ದ ಯೋಜನೆ ಸಂಪೂರ್ಣವಾಗಿ ಮುಗಿದಿಲ್ಲವಾದರೂ ಕೂಡ ನೀರನ್ನ ಮೇಲಕ್ಕೆತ್ತೋ ಎಲ್ಲಾ ಪಂಪ್ ಹೌಸ್ ಕೆಲಸಗಳು ಕೂಡ ಮುಗಿದಿದೆ. ಕೇವಲ ನೀರು ಹರಿಯೋ ಕಾಲುಕವೆ ಕೆಲಸ ಮಾತ್ರ ಬಾಕಿ ಉಳಿದಿದೆ. ಹಾಗಾಗಿಯೇ ಮೊದಲ ಹಂತದ ಕಾಮಗಾರಿ ಉದ್ಘಾಟನೆ ಮಾಡಲು ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 6ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರು, ಕಾಂಗ್ರೆಸ್​ ಹಾಗೂ ಫಲಾನುಭವಿ ಜಿಲ್ಲೆಗಳ ಎಲ್ಲ ಶಾಸಕ, ಸಂಸದರಿಗೆ ಆಹ್ವಾನ ನೀಡಲಾಗಿದೆ.

ಅಂದು ವಿತರಣಾ ತೊಟ್ಟಿ 4ರ ದೊಡ್ಡನಾಗರ ಬಳಿ ಮೊದಲು ಸಿಎಂ ಹಾಗೂ ಡಿಸಿಎಂ ಅವರು ಯೋಜನೆ ಉದ್ಘಾಟನೆ ಮಾಡಲಿದ್ದು ವಿತರಣಾ ತೊಟ್ಟಿ 3ರ ಬಳಿಯ ಹೆಬ್ಬನಹಳ್ಳಿ ಬಳಿ ಬೃಹತ್ ಬಹಿರಂಗ ಸಭೆ ನಡೆಸಲು ತಯಾರಿ ನಡೆದಿದೆ, ಇಂದು ಖುದ್ದು ಸ್ಥಳ ಪರಿಶೀಲನೆ ನಡೆಸಿದ ಹಾಸನ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಮತ್ತು ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಶಿವಲಿಂಗೇಗೌಡ ನೇತೃತ್ವದ ತಂಡ ಸುಮಾರು 10ರಿಂದ 15 ಸಾವಿರ ಜನರು ಸೇರಿ ಈ ಮಹತ್ವದ ಯೋಜನೆ ಉದ್ಘಾಟನೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಏಳು ಜಿಲ್ಲೆಗಳ ಜನರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಯೋಜನೆಗೆ ಈಗ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಮಳೆಗಾಲ ಚೆನ್ನಾಗಿ ಆದರೆ ಯೋಜನೆಯಲ್ಲಿ ನಿರೀಕ್ಷೆಯಂತೆ ನೀರು ಸಿಗಲಿದೆ ಎನ್ನೋ ವಿಶ್ವಾಸ ಅಧಿಕಾರಿಗಳಲ್ಲಿ ಇದೆ. ಆದರೆ ಭವಿಷ್ಯದಲ್ಲಿ ಸುರಿಯುವ ಮಳೆ, ಎಲ್ಲಾ ಅಡೆತಡೆ ಮೀರಿ ಯೋಜನೆ ಮುಗಿದು 2027ಕ್ಕೆ ಸಂಪೂರ್ಣ ಯೋಜನೆ ಲೋಕಾರ್ಪಣೆ ಆದರೆ ಆಗ ಯೋಜನೆ ಸಮಗ್ರ ಯಶಸ್ಸು ಏನೆಂಬುದು ತಿಳಿಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:34 pm, Wed, 4 September 24