ವಿವಿಧ ಕಂಪನಿಗಳಲ್ಲಿ ಹಣ ಹಾಕಿ ಮೋಸ: ದಿಕ್ಕುತೋಚದೇ ಡಿಸಿ ಕಚೇರಿ ಮುಂದೆ ಬಂದು ನಿಂತ ಬಾಗಲಕೋಟೆ ಜನ
ಅವರಲ್ಲಿ ಕೆಲವರು ಕೂಲಿ ಮಾಡಿ ಹಣ ತೊಡಗಿಸಿದ್ದರೆ, ಹಲವರು ಒಡವೆ ಮಾರಿ ಹಣ ಕಟ್ಟಿದ್ದರು. ಇನ್ನು ಹೊಲವನ್ನು ಬಡ್ಡಿ ಮೇಲೆ ಅಡವಿಟ್ಟು ಹಣ ತುಂಬಿದ್ದರು. ಆದರೆ, ಅವರಿಗೆಲ್ಲ ಮರಳಿ ನಯಾಪೈಸೆ ಬಂದಿಲ್ಲ. ಇದರಿಂದ ಅವರೆಲ್ಲ ಅನಿರ್ಧಿಷ್ಟ ಧರಣಿ ಕೈಗೊಂಡಿದ್ದಾರೆ. ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.
ಬಾಗಲಕೋಟೆ, ಸೆ.04: ಸಮೃದ್ದಿ ಜೀವನ್, ಗರೀಮಾ, ಪಿಎಸಿಎಲ್, ಕಲ್ಪತರು ಅಗ್ರಿಗೋಲ್ಡ್ ಸೇರಿದಂತೆ ವಿವಿಧ 185 ಕಂಪನಿಗಳಲ್ಲಿ ಹಣ ಹಾಕಿ ಕೈ ಸುಟ್ಟುಕೊಂಡ ಬಾಗಲಕೋಟೆ(Bagalkote) ಜನರು, ಇಂದು(ಬುಧವಾರ) ಕೈಯಲ್ಲಿ ನಾಮಫಲಕ, ತಮಗೆ ಮೋಸ ಮಾಡಿದ ಕಂಪನಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲ, ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ‘ನಮ್ಮ ಹಣ ನಮಗೆ ಕೊಡಿಸಿ ಎಂದು ಘೋಷಣೆ ಕೂಗಿದರು.
ಕೂಲಿ ನಾಲಿ ಮಾಡಿದ ಹಣ, ಒಡವೆ, ಆಸ್ತಿ ಒತ್ತೆಯಿಟ್ಟು ದುಡ್ಡು ತಂದು ಇವರೆಲ್ಲ ಮೇಲ್ಕಂಡ ಫೈನಾನ್ಸ್ ಇನ್ಸುರೆನ್ಸ್, ಚಿಟ್ ಫಂಡ್ ಕಂಪನಿಗಳಲ್ಲಿ ಹಣ ಹಾಕಿ ಈಗ ಬೀದಿಗೆ ಬರುವಂತಾಗಿದೆ. 5 ಲಕ್ಷ, 10, 50, ಕೋಟಿಗಟ್ಟಲೇ ಒಬ್ಬೊಬ್ಬರು ಹಣ ಕಳೆದುಕೊಂಡಿದ್ದಾರೆ. ಕಂಪನಿ ಎಜೆಂಟ್ ಇದ್ದವರು ಗ್ರಾಹಕರ ಹಣ ತೊಡಗಿಸಿದ ಕಾರಣ ಗ್ರಾಹಕರು ಮನೆಗೆ ಬಂದು ಕೂರುತ್ತಿದ್ದಾರೆ. ಇದರಿಂದ ವಂಚನೆಗೊಳಗಾದ ಠೇವಣಿದಾರರು ಹಾಗೂ ಗ್ರಾಹಕರು, ನಮ್ಮ ಹಣ ನಮಗೆ ಕೊಡಿಸಿ ಎಂದು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಇದನ್ನೂ ಓದಿ:ಆನ್ಲೈನ್ ಟ್ರೇಡಿಂಗ್ ನೆಪದಲ್ಲಿ ಜನರಿಗೆ ಕೋಟ್ಯಂತರ ರೂ. ವಂಚನೆ; ನಾಲ್ವರು ಅರೆಸ್ಟ್
ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಸದಸ್ಯರ ಬೃಹತ್ ಪ್ರತಿಭಟನೆ ನಿರಂತರವಾಗಿ ಮುಂದುವರೆದಿದೆ. ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಅಂದಾಜು 200 ಕೋಟಿ ಹಣ ಠೇವಣಿದಾರರಿಗೆ ಬರಬೇಕಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ 20 ಸಾವಿರ ಜನರು ವಂಚನೆಗೆ ಒಳಗಾಗಿದ್ದಾರೆ. ಇಡೀ ರಾಜ್ಯಾದ್ಯಂತ 2 ವರೆ ಕೋಟಿ ಜನ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಈ ಕಂಪನಿಗಳಿಂದ ವಂಚನೆ ಕಂಡುಬಂದ ಕಾರಣ ಕೇಂದ್ರ ಸರಕಾರ 1978 ಆ್ಯಕ್ಟ್ ಸೆಬಿ ಮೂಲಕ ಕಂಪನಿಗಳನ್ನು ಬಂದ್ ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಹಣ ಕೂಡ ಜಪ್ತಿ ಮಾಡಿದೆ. ಆದರೆ, 2019 ಬಡ್ಸ್(banning of unregulated deposits scheme)act ಪ್ರಕಾರ ವಂಚನೆ ಠೇವಣಿ ಸಂತ್ರಸ್ತರಿಗೆ ಹಣ ವಾಪಸ್ ಕೊಡಿಸುವ ಕಾರ್ಯವಾಗಿಲ್ಲ.
ನಮಗೆ 2019 ರ ಬಡ್ಸ್ ಆ್ಯಕ್ಟ್ ಪ್ರಕಾರ ಹಣ ಮರಳಿ ಕೊಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆಗ್ರಹ ಮಾಡುತ್ತಿದ್ದಾರೆ. ಕಷ್ಟಪಟ್ಟು ಕೂಡಿಟ್ಟ ಹಣ ಹಾಕಿ ಇವರೆಲ್ಲ ಪರದಾಡುವಂತಾಗಿದೆ. ಇವರ ಹೋರಾಟಕ್ಕೆ ಸರಕಾರ ಸ್ಪಂಧಿಸಿ ಹಣ ವಾಪಸ್ ಕೊಡಿಸುವ ಕಾರ್ಯ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ