Happy Birthday Sunil Gavaskar: 76ನೇ ವರ್ಷಕ್ಕೆ ಕಾಲಿಟ್ಟ ಟೀಮ್ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್
ಭಾರತ ಕ್ರಿಕೆಟ್ ತಂಡಕ್ಕೆ ಬೆಟ್ಟದಷ್ಟು ಕೊಡುಗೆ ನೀಡಿರುವ ಗವಾಸ್ಕರ್, 1983ರಲ್ಲಿ ಮೊದಲ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿ ಕೂಡ ಗವಾಸ್ಕರ್ ಅವರದ್ದು. ಸುನಿಲ್ ಗವಾಸ್ಕರ್ 1971ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಬೆಂಗಳೂರು (ಜು. 10): ಕ್ರಿಕೆಟ್ ಲೋಕದಲ್ಲಿ ಲಿಟ್ಲ್ ಮಾಸ್ಟರ್ ಹೆಸರು ಕೇಳಿದಾಗ ಎಲ್ಲರ ಮನದಲ್ಲಿ ಮೊದಲು ಬರುವುದು ಸಚಿನ್ ತೆಂಡೂಲ್ಕರ್ ಹೆಸರು. ಆದರೆ ಸಚಿನ್‌ಗಿಂತ ಮೊದಲು ಈ ಹೆಸರನ್ನು ಬೇರೆಯವರಿಗೆ ಇಡಲಾಗಿತ್ತು. ಆ ಆಟಗಾರ ಬೇರೆ ಯಾರೂ ಅಲ್ಲ, ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಭಾರತದ ಸುನಿಲ್ ಗವಾಸ್ಕರ್ (Sunil Gavaskar). ಇಂದು ಅಂದರೆ ಜುಲೈ 10 ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಸುನಿಲ್ ಗವಾಸ್ಕರ್ ತಮ್ಮ 76ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ ಆಟಗಾರರ ಪೈಕಿ ಗವಾಸ್ಕರ್ ಮೊದಲ ಸಾಲಿನಲ್ಲಿದ್ದಾರೆ. ಇಂತಾ ದಿಗ್ಗಜ ಆಟಗಾರನ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಭಾರತ ಕ್ರಿಕೆಟ್ ತಂಡಕ್ಕೆ ಬೆಟ್ಟದಷ್ಟು ಕೊಡುಗೆ ನೀಡಿರುವ ಗವಾಸ್ಕರ್, 1983ರಲ್ಲಿ ಮೊದಲ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿ ಕೂಡ ಗವಾಸ್ಕರ್ ಅವರದ್ದು. ಸುನಿಲ್ ಗವಾಸ್ಕರ್ 1971ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ 65 ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 67 ರನ್ ಗಳಿಸಿ ಮಿಂಚುಹರಿಸಿ ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದರು.
ಗವಾಸ್ಕರ್, ಇತರ ಬ್ಯಾಟ್ಸ್‌ಮನ್‌ಗಳಿಂದ ಏಕೆ ಭಿನ್ನವಾಗಿ ಕಾಣುತ್ತಾರೆ ಎಂಬುದಕ್ಕೆ ಇನ್ನೊಂದು ನಿದರ್ಶನವೆಂದರೆ ಅವರ ನಿರ್ಭಯತೆ. ವೆಸ್ಟ್ ಇಂಡೀಸ್ ತಂಡ ಉತ್ತುಂಗದಲ್ಲಿದ್ದ ಸಮಯದಲ್ಲಿ ಗವಾಸ್ಕರ್, ಈ ಕೆರಿಬಿಯನ್ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಕೆರಿಬಿಯನ್ ತಂಡದಲ್ಲಿದ್ದ ಆಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್, ಮೈಕೆಲ್ ಹೋಲ್ಡಿಂಗ್ ಅವರ ಹೆಸರನ್ನು ಕೇಳಿದರೆ ಬ್ಯಾಟ್ಸ್‌ಮನ್‌ಗಳು ನಡುಗುತ್ತಿದ್ದರು. ಆದರೆ ಗವಾಸ್ಕರ್ ಇವರನ್ನೆಲ್ಲ ದಿಟ್ಟವಾಗಿ ಎದುರಿಸಿದ್ದಲ್ಲದೆ, ಅವರೆಲ್ಲರ ಮುಂದೆ ಹೆಲ್ಮೆಟ್ ತೊಡದೆ ಬ್ಯಾಟಿಂಗ್ ಮಾಡುತ್ತಿದ್ದರು. ಹೆಲ್ಮೆಟ್ ಇಲ್ಲದೆ ಅವರೆಲ್ಲರ ಮುಂದೆ ಇಳಿಯುವ ಧೈರ್ಯ ಯಾವ ಬ್ಯಾಟ್ಸ್‌ಮನ್‌ಗೂ ಸಾಧ್ಯವಿರಲಿಲ್ಲ. ಆದರೆ ಗವಾಸ್ಕರ್ ಅದನ್ನು ಮಾಡಿ ತೋರಿಸಿದ್ದರು.
Karun Nair: ಇಂದು ಪ್ಲೇಯಿಂಗ್ XI ನಲ್ಲಿ ಕರುಣ್ ನಾಯರ್ಗೆ ಸಿಗುತ್ತ ಅವಕಾಶ: ಸಿಗಲೇ ಬೇಕು ಎಂದ ಮಾಜಿ ಆಟಗಾರ
ಗವಾಸ್ಕರ್ ಟೆಸ್ಟ್ ಮಾದರಿಯಲ್ಲಿ ಒಂದರ ಹಿಂದೆ ಒಂದರಂತೆ ಹಲವು ದಾಖಲೆಗಳನ್ನು ಮಾಡಿದರಾದರೂ, ಏಕದಿನ ಮಾದರಿಯಲ್ಲಿ ಹೆಚ್ಚು ಯಶಸ್ವಿಯಾಗಲಿಲ್ಲ. ಟೆಸ್ಟ್ನಲ್ಲಿ 34 ಶತಕ ಸಿಡಿಸಿರುವ ಗವಾಸ್ಕರ್ ಏಕದಿನದಲ್ಲಿ ಕೇವಲ ಒಂದು ಶತಕ ಬಾರಿಸಿದ್ದಾರೆ. 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಗವಾಸ್ಕರ್, ಅದರ ಹಿಂದಿನ ವಿಶ್ವಕಪ್‌ನಲ್ಲಿ ಅಂದರೆ 1979ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 174 ಎಸೆತಗಳಲ್ಲಿ 36 ರನ್ ಗಳಿಸಿದ್ದು ಮುಜುಗರದ ದಾಖಲೆಯಾಗಿ ಉಳಿದಿದೆ.
ಟೆಸ್ಟ್ ಮಾದರಿಯಲ್ಲಿ ಭಾರತದ ಪರ 125 ಟೆಸ್ಟ್ ಪಂದ್ಯಗಳನ್ನಾಡಿರುವ ಗವಾಸ್ಕರ್, 51.12 ರ ಸರಾಸರಿಯಲ್ಲಿ 10,122 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 34 ಶತಕ ಮತ್ತು 45 ಅರ್ಧ ಶತಕಗಳು ಸೇರಿವೆ. ಹಾಗೆಯೇ ಏಕದಿನ ಮಾದರಿಯಲ್ಲಿ ಭಾರತದ ಪರ 108 ಪಂದ್ಯಗಳನ್ನಾಡಿರುವ ಸುನಿಲ್, 27 ಅರ್ಧ ಶತಕ ಮತ್ತು ಒಂದು ಶತಕ ಸೇರಿದಂತೆ 35.13 ಸರಾಸರಿಯಲ್ಲಿ 3092 ರನ್ ಬಾರಿಸಿದ್ದಾರೆ. ಹದಿನಾರು ವರ್ಷಗಳ ಕಾಲ ಕ್ರಿಕೆಟ್ ಅನ್ನು ಆಳಿದ ಗವಾಸ್ಕರ್ 1987ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:39 am, Thu, 10 July 25




