T20 World Cup 2026: ಹೀಗಾದ್ರೆ ಟಿ20 ವಿಶ್ವಕಪ್ಗೆ ಇಟಲಿ ತಂಡದ ಎಂಟ್ರಿ ಖಚಿತ..!
T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ 2026ರ ಟಿ20 ವಿಶ್ವಕಪ್ಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಯೂರೋಪ್ ತಂಡಗಳ ನಡುವಣ ಅರ್ಹತಾ ಸುತ್ತಿನಲ್ಲಿ ಬಲಿಷ್ಠ ಸ್ಕಾಟ್ಲೆಂಡ್ ತಂಡಕ್ಕೆ ಸೋಲುಣಿಸಿ ಇಟಲಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ಸನಿಹಕ್ಕೆ ಬಂದು ನಿಂತಿದೆ.

T20 World Cup 2026: ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಟಲಿ ತಂಡ ರೋಚಕ ಜಯ ಸಾಧಿಸಿದೆ. ನೆದರ್ಲೆಂಡ್ಸ್ನ ಸ್ಪೋರ್ಟ್‌ಪಾರ್ಕ್ ವೆಸ್ಟ್‌ವ್ಲಿಯೆಟ್ ಮೈದಾನದಲ್ಲಿ ನಡೆದ ಯುರೋಪ್ ಕ್ವಾಲಿಫೈಯರ್ನ 7ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಟಲಿ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.
ಈ 168 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಸ್ಕಾಟ್ಲೆಂಡ್ ತಂಡವು 20 ಓವರ್ಗಳಲ್ಲಿ 155 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಇಟಲಿ ತಂಡ 12 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಟಲಿ ತಂಡವು ಟಿ20 ವಿಶ್ವಕಪ್ ಅರ್ಹತಾ ಸುತ್ತಿನ (ಯುರೋಪ್ ಕ್ವಾಲಿಫೈಯರ್) ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಇದಾಗ್ಯೂ ಇಟಲಿ ತಂಡವು ಅಧಿಕೃತವಾಗಿ ಟಿ20 ವಿಶ್ವಕಪ್ 2026 ಕ್ಕೆ ಅರ್ಹತೆ ಪಡೆದಿಲ್ಲ. ಈ ಅರ್ಹತೆ ಖಚಿತವಾಗಬೇಕಿದ್ದರೆ, ಮುಂದಿನ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕು. ಏಕೆಂದರೆ ಎಲ್ಲಾ ತಂಡಗಳಿಗೂ ಇನ್ನೂ ಒಂದು ಮ್ಯಾಚ್ಗಳು ಬಾಕಿಯಿದ್ದು, ಈ ಪಂದ್ಯಗಳ ಫಲಿತಾಂಶದೊಂದಿಗೆ ಇಟಲಿ ತಂಡ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.
ಇಲ್ಲಿ ಇಟಲಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ನಲ್ಲಿ ಇಟಲಿ ಜಯ ಸಾಧಿಸಿದರೆ ನೇರವಾಗಿ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೂ ಕೂಡ ನೆಟ್ ರನ್ ರೇಟ್ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಅರ್ಹತೆ ಗಿಟ್ಟಿಸಿಕೊಳ್ಳಬಹುದು.
ಆದರೆ ನೆದರ್ಲೆಂಡ್ಸ್ ವಿರುದ್ಧ ಇಟಲಿ ಪಡೆ ಹೀನಾಯವಾಗಿ ಸೋತರೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇದರಿಂದ ಜೆರ್ಸಿ ಹಾಗೂ ಸ್ಕಾಟ್ಲೆಂಡ್ ತಂಡಗಳಿಗೆ ಅಂಕ ಪಟ್ಟಿಯಲ್ಲಿ ಮೇಲೇರಲು ಅವಕಾಶ ದೊರೆಯಲಿದೆ. ಹೀಗಾಗಿ ನೆದರ್ಲೆಂಡ್ಸ್ ವಿರುದ್ಧ ಗೆಲ್ಲಲು ಸಾಧ್ಯವಾಗದೇ ಇದ್ದರೂ ಇಟಲಿ ತಂಡ ಹೀನಾಯ ಸೋಲನ್ನು ತಪ್ಪಿಸಿಕೊಳ್ಳುವುದು ಅನಿವಾರ್ಯ.
ಇಟಲಿ ತಂಡದ ಕ್ವಾಲಿಫೈ ಲೆಕ್ಕಾಚಾರ ಹೀಗಿದೆ:
- ನೆದರ್ಲೆಂಡ್ಸ್ ವಿರುದ್ಧ ಗೆದ್ದರೆ 7 ಅಂಕಗಳೊಂದಿಗೆ ಇಟಲಿ ಟಿ20 ವಿಶ್ವಕಪ್ಗೆ ನೇರವಾಗಿ ಅರ್ಹತೆ ಪಡೆಯಲಿದೆ.
- ನೆದರ್ಲೆಂಡ್ಸ್ ವಿರುದ್ಧ 20-30 ರನ್ಗಳಿಂದ ಸೋತರೂ ನೆಟ್ ರನ್ ರೇಟ್ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಬಹುದು.
- ಇಟಲಿ ವಿರುದ್ಧ ನೆದರ್ಲೆಂಡ್ಸ್ ಗೆದ್ದರೆ, ಜೆರ್ಸಿ ಅಥವಾ ಸ್ಕಾಟ್ಲೆಂಡ್ ತಂಡಗಳು ಮುಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಬಾರದು. ಹೀಗಾದರೂ ಕೂಡ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಇಟಲಿ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಬಹುದು.
ಯೂರೋಪ್ ಕ್ವಾಲಿಫೈಯರ್ನ ಮುಂದಿನ ಪಂದ್ಯಗಳ ವೇಳಾಪಟ್ಟಿ:
- ಜುಲೈ 11, ಜೆರ್ಸಿ vs ಸ್ಕಾಟ್ಲೆಂಡ್
- ಜುಲೈ 11, ಇಟಲಿ vs ನೆದರ್ಲೆಂಡ್ಸ್.
ಇಲ್ಲಿ ಕೊನೆಯ ಪಂದ್ಯದಲ್ಲಿ ಇಟಲಿ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದು ಇಟಲಿ ತಂಡದ ಪಾಲಿಗೆ ಪ್ಲಸ್ ಪಾಯಿಂಟ್. ಏಕೆಂದರೆ ನೆದರ್ಲೆಂಡ್ಸ್ ವಿರುದ್ಧ ಗೆಲ್ಲಲು ಸಾಧ್ಯವಾಗದೇ ಇದ್ದರೆ, ನೆಟ್ ರನ್ ರೇಟ್ ಉಳಿಸಿಕೊಳ್ಳಲು ಹೀನಾಯ ಸೋಲನ್ನು ತಪ್ಪಿಸಿಕೊಳ್ಳಲು ಬೇಕಾದ ಗುರಿಯ ಸ್ಪಷ್ಟತೆ ಇಟಲಿ ತಂಡಕ್ಕೆ ಸಿಗಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.
ಯೂರೋಪ್ ಕ್ವಾಲಿಫೈಯರ್ ಅಂಕ ಪಟ್ಟಿ:
ಸದ್ಯ ಅಂಕ ಪಟ್ಟಿಯಲ್ಲಿ ಇಟಲಿ ತಂಡ ಅಗ್ರಸ್ಥಾನ ಅಲಂಕರಿಸಿದೆ. ಜೆರ್ಸಿ ವಿರುದ್ಧ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಇಟಲಿ ತಂಡಕ್ಕೆ ಒಂದು ಅಂಕ ಲಭಿಸಿದೆ. ಅಲ್ಲದೆ ಇನ್ನುಳಿದ 2 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಒಟ್ಟು 5 ಪಾಯಿಂಟ್ಸ್ಗಳನ್ನು ಪಡೆದುಕೊಂಡಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇಟಲಿ ತಂಡದ ನೆಟ್ ರೇಟ್. 2 ಗೆಲುವು ದಾಖಲಿಸಿದರೂ ಇಟಲಿ +1.722 ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಈ ನೆಟ್ ರನ್ ರೇಟ್ ಕುಂಠಿತವಾಗದಂತೆ ನೋಡಿಕೊಳ್ಳುವುದು ಇಟಲಿ ಪಾಲಿಗೆ ಅನಿವಾರ್ಯ.
ಮತ್ತೊಂದೆಡೆ ಆಡಿರುವ 3 ಪಂದ್ಯಗಳಲ್ಲಿ 2 ಜಯ ಹಾಗೂ 1 ಸೋಲಿನೊಂದಿಗೆ ನೆದರ್ಲೆಂಡ್ಸ್ ತಂಡವು ದ್ವಿತೀಯ ಸ್ಥಾನದಲ್ಲಿದೆ. ಒಟ್ಟು 4 ಅಂಕಗಳನ್ನು ಹೊಂದಿರುವ ನೆದರ್ಲೆಂಡ್ಸ್ +1.200 ನೆಟ್ ರನ್ ರೇಟ್ ಪಡೆದುಕೊಂಡಿದೆ.
ಇನ್ನು ಮೂರನೇ ಸ್ಥಾನದಲ್ಲಿ 3 ಪಂದ್ಯಗಳಲ್ಲಿ ಒಂದು ಜಯ ಸಾಧಿಸಿರುವ ಜೆರ್ಸಿ ತಂಡವಿದ್ದು, 3 ಅಂಕಗಳೊಂದಿಗೆ ಒಟ್ಟು +0.430 ನೆಟ್ ರನ್ ರೇಟ್ ಪಡೆದುಕೊಂಡಿದೆ.
ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ
ಹಾಗೆಯೇ ನಾಲ್ಕನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡ ಕಾಣಿಸಿಕೊಂಡಿದೆ. ಆಡಿರುವ ಮೂರು ಮ್ಯಾಚ್ನಲ್ಲಿ ಎರಡರಲ್ಲಿ ಸೋತಿರುವ ಸ್ಕಾಟ್ಲೆಂಡ್ ತಂಡವು -0.150 ನೆಟ್ ರನ್ ರೇಟ್ ಹೊಂದಿದ್ದು, ತನ್ನ ಮುಂದಿನ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಬಹುದು. ಅದು ಕೂಡ ಇಟಲಿ ತಂಡದ ಫಲಿತಾಂಶವನ್ನು ಅವಲಂಭಿಸಿ.
ಅಂದರೆ ನೆದರ್ಲೆಂಡ್ಸ್ ವಿರುದ್ಧ ಇಟಲಿ ಹೀನಾಯವಾಗಿ ಸೋತು, ಸ್ಕಾಟ್ಲೆಂಡ್ ತಂಡವು ಜೆರ್ಸಿ ವಿರುದ್ಧ ಅಮೋಘ ಗೆಲುವು ದಾಖಲಿಸಿ ನೆಟ್ ರನ್ ರೇಟ್ನಲ್ಲಿ ಇಟಲಿ ತಂಡವನ್ನು ಹಿಂದಿಕ್ಕಿದರೆ ಮಾತ್ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.
