ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಿದ್ದ ದೂರು ವಜಾ

ಪ್ರಾಸಿಕ್ಯೂಷನ್​ಗೆ ಗವರ್ನರ್ ಪೂರ್ವಾನುಮತಿ ನೀಡದ ಹಿನ್ನೆಲೆಯಲ್ಲಿ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಿದ್ದ ದೂರು ವಜಾ
ಬಿ.ಎಸ್.ಯಡಿಯೂರಪ್ಪ (ಚಿತ್ರ: ಅಂತರ್ಜಾಲ)

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ಪ್ರಾಸಿಕ್ಯೂಷನ್​ಗೆ ಗವರ್ನರ್ ಪೂರ್ವಾನುಮತಿ ನೀಡದ ಹಿನ್ನೆಲೆಯಲ್ಲಿ ಖಾಸಗಿ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಬಿ,ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದ ಟಿ.ಜೆ.ಅಬ್ರಹಾಂ ಆ ಬಗ್ಗೆ ದೂರನ್ನೂ ನೀಡಿದ್ದರು. ಆದರೆ, ಅದರ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರಿಂದ ಪೂರ್ವಾನುಮತಿ ಸಿಗದ ಕಾರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ದೂರನ್ನು ವಜಾ ಮಾಡಿರುವುದಾಗಿ ಆದೇಶ ನೀಡಿದೆ.

ಯಡಿಯೂರಪ್ಪ ವಿರುದ್ಧ ಯತ್ನಾಳ್ ಗುಡುಗು
ಯಡಿಯೂರಪ್ಪ ವಿರುದ್ಧ ಎರಡು ದಿನಗಳ ಹಿಂದೆಯಷ್ಟೇ ವಾಗ್ದಾಳಿ ನಡೆಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ  ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ್ದರು. ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ಧನಾಗಿದ್ದೇನೆ. ಆದ್ರೆ ನಾನು ಅರ್ಜುನನಾಗುತ್ತೇನೆ. ಈಗ ವನವಾಸ, ಅಜ್ಞಾತವಾಸ ಎಲ್ಲವೂ ಕೂಡ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಬಾಕಿ ಇದೆ. ನಾಯಕತ್ವ ಬದಲಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಕುಟುಕಿದ್ದರು.

ಯಡಿಯೂರಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ ಎಂದು ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ನಿಮ್ಮ ಭ್ರಷ್ಟಾಚಾರದ ಕರ್ಮಕಾಂಡವೇ ನಮ್ಮ ಬಳಿ ಇದೆ. ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಪಕ್ಷದ ಹಿತದೃಷ್ಟಿಯಿಂದ ಹಾಗೂ ನಿಮ್ಮ ಕುಟುಂಬದ ಹಿತದೃಷ್ಟಿಯಿಂದಲೂ ನಿವೃತ್ತಿ ಒಳ್ಳೆಯದು ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದರು.

ನಾನು ಏಕಾಂಗಿಯಲ್ಲ. ಸಾಕಷ್ಟು ಸಚಿವರು ಸಂಪರ್ಕದಲ್ಲಿದ್ದಾರೆ. ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ. ಹೋರಾಟವನ್ನು ಮುಂದುವರಿಸಿ ಎಂದು ನನಗೆ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ನನ್ನ ಹೋರಾಟದ ಫಲ ಸಿಗುತ್ತದೆ ಎಂದು ಯತ್ನಾಳ್ ಹೇಳಿದ್ದರು.

ಸಿಎಂ ಯಡಿಯೂರಪ್ಪಗೆ ತಮ್ಮ ಬಳಿ ಬರುವ ಫೈಲ್​ಗಳಿಗೆ ಸಹಿ ಹಾಕಲು ಶಕ್ತಿಯಿಲ್ಲ ಎಂದು ಕಿಡಿಕಾರಿದ ಯತ್ನಾಳ್, ಪ್ರಧಾನಿ ಮೋದಿ ಉದಾಹರಣೆ ನೀಡಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನಾಲ್ಕು ತಾಸು ಮಾತ್ರ ಮಲಗುತ್ತಾರೆ. ಸಿಎಂ ಮಗನ ಒತ್ತಾಯಕ್ಕೆ ಮಣಿದು ವಿಧಾನಸೌಧಕ್ಕೆ ಹೋಗುತ್ತಾರೆ. ಸಭೆಗಳು ಕೇವಲ 15 ನಿಮಿಷ ಮಾತ್ರ ನಡೆಯುತ್ತದೆ. 30 ರಿಂದ 40 ವಿಷಯ ಇದ್ದರು 30 ನಿಮಿಷದಲ್ಲಿ ಮುಗಿಯುತ್ತದೆ. ಸಿಎಂ ಯಡಿಯೂರಪ್ಪ ನಿಷ್ಕ್ರಿಯರಾಗಿದ್ದಾರೆ. ಅವರ ಮಗ ಆಡಳಿತ ನಡೆಸುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದರು.

ನ್ಯಾಯಾಂಗದ ತೀರ್ಪಿನ ಮೇಲೆ ಪ್ರಭಾವ ಬೀರಲು ಅವರು ಯತ್ನಿಸಿದ್ದಾರೆ. ಎಲ್ಲರನ್ನೂ ಖರೀದಿ ಮಾಡುತ್ತೇವೆ ಎನ್ನುವ ಭಾವನೆ ಇದೆ. ನ್ಯಾಯಾಂಗವನ್ನು ಖರೀದಿ ಮಾಡುತ್ತೇನೆ ಎನ್ನುವ ಮೂರ್ಖತನದಲ್ಲಿ ಇದ್ದಾರೆ. ಆದರೆ ರಾಜ್ಯ ದೇಶದ ನ್ಯಾಯಾಂಗ ವ್ಯವಸ್ಥೆ ಇಂತಹ ಆಸೆ ಆಮಿಷಗಳಿಗೆ ಒಳಗಾಗುವುದಿಲ್ಲ. ಐತಿಹಾಸಿಕ ಕರ್ನಾಟಕವನ್ನು ಭ್ರಷ್ಟಾಚಾರಿಗಳಿಂದ ಮುಕ್ತ ಮಾಡುವ ತೀರ್ಪು ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶಾಸಕ ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:
ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ನನ್ನ ಹತ್ರ ಬ್ರಹ್ಮಾಸ್ತ್ರವಿದೆ; ಬಯಲು ಮಾಡಿದ್ರೆ ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ: ಶಾಸಕ ಯತ್ನಾಳ್

 

Read Full Article

Click on your DTH Provider to Add TV9 Kannada