ಲಾಕ್ಡೌನ್ನಿಂದ ಕಂಗಾಲಾದ ಕೂಲಿ ಕಾರ್ಮಿಕರು; ಫುಡ್ ಕಿಟ್ ನೀಡಿ ಸಹಾಯ ಮಾಡುವಂತೆ ಮನವಿ
ಕೂಲಿ ಕೆಲಸ ಮಾಡಿದ್ರೇನೆ ಜೀವನ. ಬೇರೆ ದಾರಿ ಇಲ್ಲ. ಕೊರೊನಾ ಭಯದ ಮಧ್ಯೆಯೂ ಕೆಲಸ ಮಾಡಲೇಬೇಕು ಎಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸುಧಾರಿಸಲು ಲಾಕ್ಡೌನ್ ಘೋಷಣೆ ಮಾಡಿದ್ದು, ವ್ಯಾಪಾರಿಗಳು ಮತ್ತು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಅದರಲ್ಲೂ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರ ಅಳಲು ಹೇಳತೀರದಂತಾಗಿದೆ.
ಬೆಳಗ್ಗೆ 6 ಗಂಟೆಗೆ ನಿಲ್ದಾಣಕ್ಕೆ ಬಂದಿದ್ದೀವಿ ಇನ್ನೂ ಬೋಣಿ ಕೂಡ ಆಗಿಲ್ಲ. ಜೀವನ ನಡೆಸೋದು ತುಂಬನೇ ಕಷ್ಟ ಆಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಹೇಗೊ ಜೀವನ ನಡೆಸುವಷ್ಟು ಕೂಲಿ ಸಿಗುತ್ತಿತ್ತು. ಆದರೆ ಈಗ ಅದು ಕೂಡ ಇಲ್ಲದೆ ಕಷ್ಟ ಆಗಿದೆ. ಮೊದಲನೆ ಅಲೆಯಲ್ಲಿ ರೈಲ್ವೇ ಇಲಾಖೆ, ಡಿಸಿಎಂ (ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್), ಡಿಆರ್ಎಂ (ಡಿವಿಷನ್ ರೈಲ್ವೇ ಮ್ಯಾನೇಜರ್), ಆರ್ಪಿಎಫ್ (ರೈಲ್ವೆ ಪ್ರೊಡಕ್ಷನ್ ಫೋರ್ಸ್) ಇವರೆಲ್ಲರೂ ಫುಡ್ ಕಿಟ್ ಅನ್ನು ನೀಡಿದ್ದರು. ಇದರಿಂದ ತುಂಬಾ ಅನುಕೂಲ ಆಗಿತ್ತು. ಈ ಬಾರಿ ಇನ್ನೂ ಕೂಡ ಯಾರಿಂದಲೂ ಫುಡ್ ಕಿಟ್ ನಮಗೆ ಸಿಕ್ಕಿಲ್ಲ ಎಂದು ಕೂಲಿ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಫುಡ್ ಕಿಟ್ ಕೊಟ್ಟರೆ ನಮಗೆ ಸ್ವಲ್ಪ ಸಹಾಯ ಆಗುತ್ತದೆ . ಇಲ್ಲಿ ಒಟ್ಟು 66 ಜನ ಕೂಲಿ ಕಾರ್ಮಿಕರು ಇದ್ದೀವಿ. ಕೆಲಸ ಮಾಡೋದಕ್ಕೆ ತುಂಬಾ ತೊಂದರೆ ಆಗುತ್ತಿದೆ. ಲಾಕ್ಡೌನ್ ಒಳ್ಳೆಯದೆ. ಆದರೆ ಕೂಲಿ ಕಾರ್ಮಿಕರು ನಾವು ಏನು ಮಾಡೋಣ? ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಿದರೆ ಒಳ್ಳೆದು. ಕೂಲಿ ಕೆಲಸ ಮಾಡಿದ್ರೇನೆ ಜೀವನ. ಬೇರೆ ದಾರಿ ಇಲ್ಲ. ಕೊರೊನಾ ಭಯದ ಮಧ್ಯೆಯೂ ಕೆಲಸ ಮಾಡಲೇಬೇಕು ಎಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:
ವ್ಯಾಪರಕ್ಕೆ ಅವಕಾಶ ಕೊಡದ ಹಿನ್ನೆಲೆ ಬೇಸರ; ಹೂಗಳನ್ನು ಕಸಕ್ಕೆ ಎಸೆದು ಆಕ್ರೋಶ ಹೊರಹಾಕಿದ ವ್ಯಾಪರಸ್ಥರು
ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟಕ್ಕೆ ಅವಕಾಶ; ಮಹಿಳಾ ವ್ಯಾಪಾರಿಗಳಲ್ಲಿ ಹೆಚ್ಚಿದ ಆತಂಕ