ಬಾಲಕನ ಕಿಡ್ನಾಪ್ ಮಾಡಿ 5 ಲಕ್ಷಕ್ಕೆ ಡಿಮ್ಯಾಂಡ್; ಪೊಲೀಸರಿಗೆ ಹೇಳಿದ್ದಕ್ಕೆ ಕೊಂದ ದುಷ್ಕರ್ಮಿಗಳು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನುಷವಾದ ಘಟನೆ ನಡೆದಿದೆ. ಕೇವಲ 5 ಲಕ್ಷ ರೂ. ಹಣಕ್ಕಾಗಿ ಸಂಜೆ ಟ್ಯೂಷನ್‌ಗೆ ಹೋಗಿದ್ದ ಮಗನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಮಗುವಿನ ತಂದೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ವಿಚಾರ ಕಿಡ್ನಾಪರ್ಸ್‌ಗೆ ಗೊತ್ತಾದ ಕೂಡಲೇ, ಆ ಬಾಲಕನನ್ನು ರಸ್ತೆ ಬಳಿಯೇ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ.

ಬಾಲಕನ ಕಿಡ್ನಾಪ್ ಮಾಡಿ 5 ಲಕ್ಷಕ್ಕೆ ಡಿಮ್ಯಾಂಡ್; ಪೊಲೀಸರಿಗೆ ಹೇಳಿದ್ದಕ್ಕೆ ಕೊಂದ ದುಷ್ಕರ್ಮಿಗಳು
Nishchit
Updated By: ರಮೇಶ್ ಬಿ. ಜವಳಗೇರಾ

Updated on: Jul 31, 2025 | 11:11 PM

ಬೆಂಗಳೂರು (ಜು.31): ಟ್ಯೂಷನ್‌ಗೆ ತೆರಳಿದ್ದ 12 ವರ್ಷದ ಬಾಲಕನನ್ನು 5 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿ ಕೊಲೆ (kidnapped And Murdered) ಮಾಡಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.  ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ಕಿಡ್ನಾಪರ್‌ಗಳು ಬಾಲಕನನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಅರಕೆರೆ ಶಾಂತಿನಿಕೇತನ ಲೇಔಟ್​ನಿಂದ ನಿಶ್ಚಿತ್​ನನ್ನು (12) ಅಪಹರಿಸಲಾಗಿದ್ದು, ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದ್ರೆ, ಬಾಲಕನ ತಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಅಪಹರಣಕಾರರು ಬಾಲಕನನ್ನು ಕೊಂದು ಬಳಿಕ ಸುಟ್ಟು ಹಾಕಿದ್ದಾರೆ.

ಅರಕೆರೆ ಪ್ರದೇಶದ ಶಾಂತಿನಿಕೇತನ ಬಡಾವಣೆಯಲ್ಲಿ ನೆಲೆಸಿರುವ ಕಾಲೇಜು ಪ್ರೊಫೆಸರ್ ಕುಟುಂಬದ 7 ತರಗತಿಯ ವಿದ್ಯಾರ್ಥಿ ನಿಶ್ಚಿತ್  ಎಂಬಾತನು ನಿನ್ನೆ (ಜುಲೈ 30) ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅಪಹರಿಸಿದ್ದಾರೆ. ನಿಶ್ಚಿತ್ ಕಿಡ್ನಾಪ್ ಆಗುತ್ತಿದ್ದಂತೆ, ಕೆಲವೇ ಹೊತ್ತಿನಲ್ಲಿ ಪೋಷಕರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಿದೆ. ಆಗ ಕಿಡ್ನಾಪರ್ಸ್ ನಿಮಗೆ ನಿಮ್ಮ ಮಗ ಬೇಕಿದ್ದರೆ ಕೂಡಲೇ 5 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬರುವಂತೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಪೊಲೀಸರಿಗೆ ಮಾಹಿತಿ ನೀಡದಂತೆಯೂ ಬೆದರಿಕೆ ಹಾಕಿದ್ದಾರೆ. ಆದರೆ, ಕಾಲೇಜು ಪ್ರೊಫೆಸರ್ ತನ್ನ ಮಗನನ್ನು ಉಳಿಸಿಕೊಡುವಂತೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆಯೇ ಹುಳಿಮಾವು ಪೊಲೀಸರು ಸಿಸಿಟಿವಿ ಫುಟೇಜ್, ಮೊಬೈಲ್ ಲೊಕೇಶನ್ ಟ್ಯ್ರಾಕಿಂಗ್ ಮೂಲಕ ತನಿಖೆಗೆ ಚುರುಕುಗೊಳಿಸಿದ್ದರು. ಬಾಲಕನನ್ನು ಹುಡುಕುವುದಕ್ಕೆ, ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಇತ್ತ ಬಾಲಕನ ಪೋಷಕರು 5 ಲಕ್ಷ ರೂ. ಹಣವನ್ನು ಸಿದ್ಧಪಡಿಸಿ ಕಿಡ್ನಾಪರ್ಸ್‌ಗೆ ಕೊಟ್ಟು ಮಗನನ್ನು ಕರೆದುಕೊಂಡು ಬರಲು ಸಿದ್ಧವಾಗಿದ್ದರು. ಕಿಡ್ನಾಪ್ ಮಾಡಿದ್ದ ಬಗ್ಗೆ ದೂರು ಕೊಟ್ಟ ವಿಚಾರ ಅಪಹರಣಕಾರರಿಗೆತಿಳಿದ ಕೂಡಲೇ ಸಿಕ್ಕಿಬೀಳುವ ಭಯದಿಂದ ಬಾಲಕನನ್ನು ಕೈಕಟ್ಟಿ ಥಳಿಸಿ ಕೊಲೆ ಮಾಡಿದ್ದಾರೆ. ಬಳಿಕ ರಸ್ತೆ ಬದಿಯ ಕಲ್ಲು ಬಂಡೆಯ ಮೇಲೆ ಅಲ್ಪಸ್ವಲ್ಪ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ.

ಪೊಲೀಸರು ಕಿಡ್ನಾಪರ್ಸ್‌ಗಳ ಫೋನ್ ಟ್ರೇಸ್ ಮಾಡುತ್ತಾ ಲೊಕೇಷನ್ ಗೆ ಹೋದ ವೇಳೆ ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ನಿಶ್ಚಿತ್‌ನ ಶವ ಪತ್ತೆಯಾಗಿದೆ. ಬಾಲಕನ ಮೇಲೆ ಬರ್ಬರ ಹಲ್ಲೆ ನಡೆಸಿದ ಪರಿಣಾಮವಾಗಿ ಆತ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ, ಆತನ ದೇಹಕ್ಕೆ ಬೆಂಕಿ ಹಚ್ಚಿದ್ದು, ಅರೆಬರೆ ಬೆಂದು ಹೋಗಿದೆ.

ಘಟನೆ ತಿಳಿದು ಸ್ಥಳಕ್ಕೆ ಇಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್, ಹಾಗೂ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಪತ್ತೆಯಾದ ಸ್ಥಳದಲ್ಲಿ ಕ್ರೋರವಾಗಿ ಕೊಲೆ ಮಾಡಿದ ಗುರುತು ಪತ್ತೆಯಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ