ಪಹಲ್ಗಾಮ್ ಉಗ್ರ ದಾಳಿ: ಶ್ರೀನಗರದಿಂದ 178 ಕನ್ನಡಿಗರು ಬೆಂಗಳೂರಿಗೆ ವಾಪಸ್

ಜಮ್ಮು ಮತ್ತು ಕಾಶ್ಮೀರದ ಉಗ್ರ ದಾಳಿಯ ನಂತರ, ಸುಮಾರು 178 ಕನ್ನಡಿಗರನ್ನು ಕರ್ನಾಟಕ ಸರ್ಕಾರದ ವಿಶೇಷ ಕಾರ್ಯಾಚರಣೆಯ ಮೂಲಕ ಬೆಂಗಳೂರಿಗೆ ಸುರಕ್ಷಿತವಾಗಿ ಕರೆತರಲಾಯಿತು. ಇದೇ ವೇಳೆ, ಕಾಶ್ಮೀರಿಗರ ಆತಿಥ್ಯ ಮತ್ತು ಸರ್ಕಾರದ ಸಹಾಯಕ್ಕೆ ಕನ್ನಡಿಗರು ಕೃತಜ್ಞತೆ ಸಲ್ಲಿಸಿದರು. ಸಚಿವ ಸಂತೋಷ್ ಲಾಡ್ ಅವರು ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.

ಪಹಲ್ಗಾಮ್ ಉಗ್ರ ದಾಳಿ: ಶ್ರೀನಗರದಿಂದ 178 ಕನ್ನಡಿಗರು ಬೆಂಗಳೂರಿಗೆ ವಾಪಸ್
ಶ್ರೀನಗರದಿಂದ 178 ಕನ್ನಡಿಗರು ಬೆಂಗಳೂರಿಗೆ ವಾಪಸ್

Updated on: Apr 24, 2025 | 1:11 PM

ಬೆಂಗಳೂರು, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​​ನಲ್ಲಿ (Pahalgam Attack) ನಡೆದ ಭೀಕರ ಉಗ್ರ ದಾಳಿಯ ನಂತರ ಕಾಶ್ಮೀರದ ವಿವಿಧೆಡೆ ಸಿಲುಕಿದ್ದ ಸುಮಾರು 178 ಮಂದಿ ಕನ್ನಡಿಗರನ್ನು (Karnataka People) ಸುರಕ್ಷಿತವಾಗಿ ಬೆಂಗಳೂರಿಗೆ ಕರೆ ತರಲಾಯಿತು. ಗುರುವಾರ ಮಧ್ಯಾಹ್ನ 12.30 ರ ಸುಮಾರಿಗೆ ಕನ್ನಡಿಗರನ್ನು ಒಳಗೊಂಡ ವಿಮಾನ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಬಂದಿಳಿಯಿತು. ದಾಳಿಯ ಮಾಹಿತಿ ದೊರೆಯುತ್ತಿದ್ದಂತೆಯೇ ಕರ್ನಾಟಕ ಸರ್ಕಾರ ಎರಡು ವಿಶೇಷ ತಂಡಗಳನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿತ್ತು. ಕಾರ್ಮಿಕ ಸಂತೋಷ್ ಅನಿಲ್ ಲಾಡ್ ನೇತೃತ್ವದಲ್ಲಿ ಕನ್ನಡಿಗರನ್ನು ವಾಪಸ್ ಕರೆತರುವ ಕಾರ್ಯಾಚರಣೆ ನಡೆಸಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಸಹ ಕಾಶ್ಮೀರದಲ್ಲಿ ರಕ್ಷಣಾ ತಂಡಕ್ಕೆ ಸಾಥ್ ನೀಡಿದ್ದರು.

ಕಾಶ್ಮೀರಿಗರ, ಸರ್ಕಾರದ ನೆರವಿನ ಬಗ್ಗೆ ಮೆಚ್ಚುಗೆ ಮಾತು

ಬೆಂಗಳೂರಿಗೆ ವಾಪಸಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕನ್ನಡಿಗರು, ಕಾಶ್ಮೀರಿಗರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ಥಳೀಯ ಕಾಶ್ಮೀರಿಗರು ನಮಗೆ ಅತ್ಯುತ್ತಮ ಆತಿಥ್ಯತ್ಯ ನೀಡಿದರು. ಅದೇ ರೀತಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದವು. ಅವರಿಗೆ ಧನ್ಯವಾದಗಳು ಎಂದು ವಾಪಸಾದ ಕನ್ನಡಿಗರು ಹೇಳಿದರು.

ಸಂತೋಷ್ ಲಾಡ್ ಹೇಳಿದ್ದೇನು?

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಸಚಿವ ಸಂತೋಷ್​ ಲಾಡ್​, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕನ್ನಡಿಗರು ಆಘಾತದಲ್ಲಿದ್ದರು. ಯಾವಾಗ ಏನು ಬೇಕಾದರೂ ಆಗಬಹುದೆಂಬ ಭಯ ಅವರಲ್ಲಿತ್ತು. ನಾನೇ 40ಕ್ಕೂ ಹೆಚ್ಚು ಸ್ಥಳಕ್ಕೆ ಭೇಟಿ ನೀಡಿ ಕನ್ನಡಿಗರ ಭೇಟಿಯಾದೆ. ಮಾಧ್ಯಮಗಳು ಪ್ರಸಾರ ಮಾಡಿದ ಸಹಾಯವಾಣಿ ಸಂಖ್ಯೆ ಹಾಗೂ ಮಾಹಿತಿ ಪಡೆದು ಅನೇಕರು ನಮ್ಮನ್ನು ಸಂಪರ್ಕಿಸಿದರು. ಎಲ್ಲರ ಸಹಕಾರದಿಂದ ಕನ್ನಡಿಗರನ್ನು ಕರೆತರುವುದು ಸಾಧ್ಯವಾಯಿತು ಎಂದರು.

ಇದನ್ನೂ ಓದಿ
ಕೇಂದ್ರದ ಜತೆ ನಾವಿದ್ದೇವೆ, ಉಗ್ರರನ್ನು ಸಂಪೂರ್ಣ ಮಟ್ಟ ಹಾಕಿ: ಸಿದ್ದರಾಮಯ್ಯ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಉಗ್ರ ದಾಳಿಗೆ ಇಡೀ ದೇಶವೇ ಶೋಕದಲ್ಲಿರುವಾಗ, ಇನ್ಸ್‌ಪೆಕ್ಟರ್ ಭರ್ಜರಿ ರೋಡ್ ಶೋ
ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಬರುವುದು ಯಾವಾಗ?

ಮಂಗಳವಾರ ಸಂಜೆ ಪಹಲ್ಗಾಮ್​ನಲ್ಲಿ ನಡೆದಿದ್ದ ಭೀಕರ ದಾಳಿಯಲ್ಲಿ 28 ಮಂದಿ ಮೃತಪಟ್ಟಿದ್ದರು. ಅದರಲ್ಲಿ ಕರ್ನಾಟಕದ ಇಬ್ಬರೂ ಸೇರಿದ್ದರು. ಶಿವಮೊಗ್ಗದ ಮಂಜುನಾಥ ಶರ್ಮ ಹಾಗೂ ಬೆಂಗಳೂರಿನ ಭರತ್ ಭೂಷಣ್ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರವನ್ನು ಈಗಲೇ ಹುಟ್ಟೂರಿಗೆ ತರಲಾಗಿದೆ. ಅಂತ್ಯಸಂಸ್ಕಾರವೂ ನೆರವೇರುತ್ತಿದೆ.

ಇದನ್ನೂ ಓದಿ: ಕೇಂದ್ರದ ಜತೆ ನಾವಿದ್ದೇವೆ, ಉಗ್ರರನ್ನು ಸಂಪೂರ್ಣ ಮಟ್ಟ ಹಾಕಿ: ಸಿಎಂ ಸಿದ್ದರಾಮಯ್ಯ

ಏತನ್ಮಧ್ಯೆ, ಕರ್ನಾಟಕದ ಪ್ರವಾಸಿಗರ ಸಾವಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಉಗ್ರರ ನಿರ್ಮೂಲನೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ