
ಬೆಂಗಳೂರು, ಮಾರ್ಚ್ 29: ಬಿಬಿಎಂಪಿ (BBMP) ಕಸದ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಥಣಿಸಂದ್ರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬೈಕ್ನಲ್ಲಿ ತೆರಳುತ್ತಿದ್ದ 10 ವರ್ಷದ ಐಮಾನ್ ಮೃತ ಬಾಲಕ. ಬಾಲಕನ ಮೃತಪಟ್ಟಿದ್ದನ್ನು ಕಂಡು ರೊಚ್ಚಿಗೆದ್ದ ಸಾರ್ವಜನಿಕರು ಬಿಬಿಎಂಪಿ ಕಸದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಚಾಲಕ ಲಾರಿಯಿಂದ ಕೆಳಗಿಳಿದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಪಘಾತದಲ್ಲಿ ಐವಾನ್ ತಂದೆಗೆ ಗಾಯವಾಗಿದ್ದು, ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಎಂನ ಆರೋಪ ಕೇಳಿಬಂದಿದೆ. ಶಾಲಾ ದಾಖಲಾತಿ ಬಗ್ಗೆ ವಿಚಾರಿಸಲು ತಂದೆ ಮತ್ತು ಮಗ ಮನೆಯಿಂದ ಹೊರಟಿದ್ದರು ಎಂದು ತಿಳಿದುಬಂದಿದೆ.
ಬಾಗಲಕೋಟೆ: ಮುಧೋಳ ತಾಲೂಕಿನ ಮುಗಳಕೋಡ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ. ಸರ್ಕಾರಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ಬಸ್ನಲ್ಲಿದ್ದ 15 ಜನರಿಗೆ ಗಂಭೀರ ಗಾಯವಾಗಿದೆ. ಶಂಕರೆಪ್ಪ ಲಕ್ಷ್ಮೇಶ್ವರ (55), ಶ್ರೀದೇವಿ ಲಕ್ಷ್ಮೇಶ್ವರ (50) ಮೃತ ದುರ್ದೈವಿಗಳು. ಮೃತ ದಂಪತಿ ಮುಧೋಳ ತಾಲೂಕಿನ ಮುಗಳಖೋಡ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮುಧೋಳ ತಾಲೂಕು ಆಸ್ಪತ್ರೆಗೆ ದಾಖಲಿಸಾಲಗಿದೆ. ಕೆಎಸ್ಆರ್ಟಿಸಿ ಬಸ್ ಚಿಕ್ಕೋಡಿಯಿಂದ ಮುಧೋಳ ಮಾರ್ಗವಾಗಿ ತೆರಳುತ್ತಿತ್ತು. ಸ್ಥಳಕ್ಕೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಮುಧೋಳ ಸಿಪಿಐ ಭೇಟಿ ನೀಡಿ ಮಾಹಿತಿ ಪಡೆದರು. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು-ಚಿಕ್ಕೋಡಿ ಬಸ್ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿದೆ. ಇಬ್ಬರು ಮೃತ ಪಟ್ಟಿದ್ದಾರೆ, ಬಸ್ನಳಿದ್ದ 20 ಜನರಿಗೆ ಗಾಯವಾಗಿದೆ. ಸರ್ಕಾರ ಕೂಡಲೇ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಗಾಯಾಳುಗಳಿಗೂ ಪರಿಹಾರ ಕೊಡಬೇಕು ಜೊತೆಗೆ ಚಿಕಿತ್ಸೆ ವೆಚ್ಚ ಭರಿಸಬೇಕು. ಮೃತರ ಆತ್ಮಹತ್ಯೆ ಚಿರಶಾಂತಿ ದೊರೆಯಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಇದನ್ನೂ ಓದಿ: ಟಿಟಿ ವಾಹನ ಪಲ್ಟಿಯಾಗಿ ಮೂವರು ದುರ್ಮರಣ
ದಾವಣಗೆರೆ: ಚನ್ನಗಿರಿ ತಾಲೂಕಿನ ಗುಳ್ಳೇಹಳ್ಳಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅರ್ಜುನ್ ನಾಯ್ಕ (25), ಹರೀಶ್ ನಾಯ್ಕ (30) ಮೃತ ದುರ್ದೈವಿಗಳು. ಮೃತರು ಚಿಕ್ಕಮಗಳೂರಿನ ಕೊಟ್ಟಿಗೆಹಾಳದಿಂದ ದಾವಣಗೆರೆ ಕಡೆ ಹೊರಟಿದ್ದರು. ತಡರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನ ಚಾಲಕನಿಗೆ ಹುಡುಕಾಟ ನಡೆದಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ