ಬೆಂಗಳೂರಿನಲ್ಲಿ ಟೊಮೆಟೊ ತುಂಬಿದ್ದ ವಾಹನ ಕಳ್ಳತನ ಪ್ರಕರಣ; ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಬಂಧನ

ಟೊಮೆಟೊ ಬೆಲೆ ಶತಕ ದಾಟಿದ ಬಳಿಕ ಟೊಮೆಟೊ ಕಳ್ಳರ ಹಾವಳಿ ಹೆಚ್ಚಾಗಿದೆ. ಅದರಂತೆ ಸುಮಾರು 2 ಸಾವಿರ ಕೆ.ಜಿ ಗೂ ಅಧಿಕ ಟೊಮೆಟೊ ಇದ್ದ ಬೊಲೆರೋ ವಾಹನವನ್ನ ಕಳ್ಳತನ ಮಾಡಿದ್ದ ಆರೋಪಿಗಳನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಟೊಮೆಟೊ ತುಂಬಿದ್ದ ವಾಹನ ಕಳ್ಳತನ ಪ್ರಕರಣ; ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಬಂಧನ
ಟೊಮೆಟೊ ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್​
Updated By: ಕಿರಣ್ ಹನುಮಂತ್​ ಮಾದಾರ್

Updated on: Jul 22, 2023 | 1:54 PM

ಬೆಂಗಳೂರು, ಜು.22: ಕರ್ನಾಟಕದಲ್ಲಿ ಈಗಾಗಲೇ ಟೊಮೆಟೊ(Tomato) ಬೆಲೆ ಶತಕ ದಾಟಿದೆ. ಈ ಹಿನ್ನಲೆ ಟೊಮೆಟೊ ಕಳ್ಳರ ಹಾವಳಿ ಕೂಡ ಹೆಚ್ಚಾಗಿದೆ. ಅದರಂತೆ ಜುಲೈ 8 ರಂದು ಬೆಂಗಳೂರಿನ ಯಲಹಂಕ(Yelahanka) ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಸುಮಾರು 2 ಸಾವಿರ ಕೆ.ಜಿ ಗೂ ಅಧಿಕ ಟೊಮೆಟೊ ಇದ್ದ ಬೊಲೆರೋ ವಾಹನವನ್ನ ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತಮಿಳುನಾಡು ಮೂಲದ ಭಾಸ್ಕರ್, ಸಿಂಧೂಜಾ ಎಂಬ ಆರೋಪಿಗಳನ್ನು ಆರ್​ಎಂಸಿ ಪೊಲೀಸರು(RMC Police) ಬಂಧಿಸಿದ್ದು, ತಲೆಮರೆಸಿಕೊಂಡ ಇನ್ನೂ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಘಟನೆ ವಿವರ

ಜುಲೈ 8 ಶನಿವಾರದಂದು ರೈತರೊಬ್ಬರು ಅಂದಾಜು 3 ಲಕ್ಷ ಮೌಲ್ಯದ ಟೊಮೆಟೊವನ್ನು ಬೊಲೆರೋದಲ್ಲಿ ತುಂಬಿಕೊಂಡು ಹಿರಿಯೂರಿನಿಂದ ಕೋಲಾರಕ್ಕೆ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಮೂವರು ಅಪರಿಚಿತರು ಕಾರಿನಲ್ಲಿ ಬೊಲೆರೋ ವಾಹನವನ್ನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಳಿಕ ಆರ್​ಸಿಎಂ ಯಾರ್ಡ್​ ಠಾಣೆಯ ವ್ಯಾಪ್ತಿಯಲ್ಲಿ ಅಡ್ಡಗಟ್ಟಿ, ನಿಮ್ಮ ವಾಹನದಿಂದ ನಮ್ಮ ಕಾರಿಗೆ ಟಚ್​ ಮಾಡಿದ್ದೀರಿ ಎಂದು ನಾಟಕವಾಡಿ, ರೈತ ಮತ್ತು ಬೊಲೆರೋ ಚಾಲಕನಿಗೆ ಹಲ್ಲೆ ಮಾಡಿ, ಬೊಲೆರೋವನ್ನ ತೆಗೆದುಕೊಂಡು ಎಸ್ಕೇಪ್​ ಆಗಿದ್ದರು. ಈ ಕುರಿತು ರೈತರು ಠಾಣೆಗೆ ದೂರು ದಾಖಲಿಸಿದ್ದರು.

ಇದನ್ನೂ ಓದಿ:ಬಂಪರ್ ಬೆಲೆ ನಡುವೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ಕಣ್ಣೀರಾದ ರೈತ ಮಹಿಳೆ

ಚೆನ್ನೈ ಮಾರುಕಟ್ಟೆಯಲ್ಲಿ ಟೊಮೆಟೊ ಮಾರಿರುವ ಆರೋಪಿಗಳು

ಇನ್ನು ಟೊಮೆಟೊ ತುಂಬಿದ ಬೊಲೆರೋ ಕಳ್ಳತನ ಮಾಡಿದ ಖದೀಮರು, ತಮ್ಮ ನಿವಾಸದಲ್ಲಿ ಕೂತು ಪ್ಲ್ಯಾನ್ ಮಾಡಿ ಬಳಿಕ ಚೆನ್ನೈ ಮಾರುಕಟ್ಟೆಗೆ ಹೋಗಿ ಟೊಮೆಟೊವನ್ನ ಮಾರಾಟ ಮಾಡಿದ್ದಾರೆ. ನಂತರ ಖಾಲಿ ವಾಹನವನ್ನು ತಂದು ನಿಲ್ಲಿಸಿ ಪರಾರಿಯಾಗಿದ್ದರು. ಇದೀಗ ಆರ್​ಎಂಸಿ ಯಾರ್ಡ್​ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಮೂವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Sat, 22 July 23