ಬಂಪರ್ ಬೆಲೆ ನಡುವೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ಕಣ್ಣೀರಾದ ರೈತ ಮಹಿಳೆ
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಟೊಮೆಟೊ ಬೆಳೆ ಏರಿಯಾಗುತ್ತಿದೆ. ಹಲವೆಡೆ ಟೊಮೆಟೊ ಕಳ್ಳತನ ಪ್ರಕರಣಗಳೂ ನಡೆದಿವೆ. ಈ ನಡುವೆ ದುಷ್ಕರ್ಮಿಗಳು ಟೊಮೆಟೊ ಬೆಳೆ ನಾಶ ಮಾಡಲು ಆರಂಭಿಸಿದ್ದಾರೆ.
ಬಾಗಲಕೋಟೆ, ಜುಲೈ 21: ಬೆಲೆ ಏರಿಕೆ ನಡುವೆ ಟೊಮೆಟೊ (Tomato) ಕೃಷಿಯನ್ನು ಕಿಡಿಗೇಡಿಗಳು ನಾಶ ಮಾಡಿರುವ ಘಟನೆ ಬಾಗಲಕೋಟೆ (Bagalkot) ತಾಲೂಕಿನ ನೀಲಾನಗರದ ತಾಂಡಾದಲ್ಲಿ ನಡೆದಿದೆ. ಪ್ರೇಮಾ ದೊಡ್ಡಮನಿ ಎಂಬುವರು ತಮ್ಮ ಜಮೀನಿನಲ್ಲಿ ಟೊಮೆಟೊ ಕೃಷಿ ಮಾಡಿದ್ದರು. ಅದರಂತೆ ಫಸಲು ಕೂಡ ಬಂದಿತ್ತು. ಆದರೆ ಇದನ್ನು ದುಷ್ಕರ್ಮಿಗಳು ಕಿತ್ತು ನಾಶಪಡಿಸಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ಪ್ರೇಮಾ ಅವರು ಕಣ್ಣೀರು ಹಾಕುತ್ತಿದ್ದಾರೆ.
ಟೊಮೆಟೊ ಬೆಳೆಯನ್ನು ಮಗುವಿನಂತೆ ಬೆಳೆಸಿದ್ದೆ. ದಿನಾಲು ಬೆಳಿಗ್ಗೆಯಿಂದ ಸಂಜೆವರೆಗೂ ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಕಳ್ಳತನ ಪ್ರಕರಣ ಹಿನ್ನೆಲೆ ರಾತ್ರಿಯೂ ಟೊಮೆಟೊ ಬೆಳೆಯನ್ನು ಕಾದಿದ್ದೇನೆ. ಆದರೆ ಆಸ್ತಿ ವಿಚಾರವಾಗಿ ಹಳೆ ದ್ವೇಷದಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾವು ಹೊಲದಲ್ಲಿ ಇಲ್ಲದಿದ್ದಾಗ ಜಮೀನಿಗೆ ಬಂದು ಟೊಮೆಟೊ ಗಿಡಗಳನ್ನು ಕಿತ್ತು ನಾಶ ಮಾಡಿದ್ದಾರೆ ಎಂದು ಪ್ರೇಮಾ ದೊಡ್ಡಮನಿ ಆರೋಪಿಸಿದ್ದಾರೆ.
ಇದನ್ನೂ ಓದಿ: Tomato: ತಾಯಿಯ ಆಸೆ ಪೂರೈಸಲು ದುಬೈಯಿಂದ 10 ಕೆಜಿ ಟೊಮೆಟ್ ತಂದ ಮಗಳು! ಟ್ವೀಟ್ ವೈರಲ್
ಇತ್ತೀಚಿನ ದಿನಗಳಲ್ಲಿ ಟೊಮೆಟೊ ಒಳ್ಳೆಯ ಬೆಲೆ ಇದೆ. ಈ ನಡುವೆ ಬೆಳೆ ನಾಶ ಮಾಡಿದ ಇವರು ಉದ್ಧಾರ ಆಗುತ್ತಾರಾ ಎಂದು ಹೇಳಿ ಕಷ್ಟಪಟ್ಟು ಬೆಳೆದ ಟೊಮೆಟೊವನ್ನು ಕೈಯಲ್ಲಿ ಹಿಡಿದು ಟಿವಿ9 ಜೊತೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ಸುಮಾರು ಅರ್ಧ ಎಕರೆಯಷ್ಟು ಟೊಮೆಟೊ ಗಿಡಗಳನ್ನು ಕಿತ್ತು ನಾಶಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಟೊಮೆಟೊ ಲಾಭದಿಂದ ಮಗಳ ನರ್ಸಿಂಗ್ ಕಾಲೇಜಿನ ಒಂದೂವರೆ ಲಕ್ಷ ಶುಲ್ಕ ಕಟ್ಟಬೇಕೆಂದು ಪ್ರೇಮಾ ಅವರು ಯೋಚಿಸುತ್ತಿದ್ದರು. ಇದರ ಜೊತೆಗೆ ಮಗನ ವಿಧ್ಯಾಭ್ಯಾಸಕ್ಕೂ ಹಣ ಹೊಂದಿಸಿಬೇಕೆಂದಿದ್ದರು. ಆದರೆ ಈಗ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೊ ಬೆಳೆಯನ್ನೇ ಕಿತ್ತು ನಾಶ ಮಾಡಿದ ಕ್ರೂರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಮಹಿಳೆ ಪ್ರೇಮಾ ಆಗ್ರಹಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ