ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನ 19ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನ 19ನೇ ಮಹಡಿಯಿಂದ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶರಣ್ ಎನ್ನುವ 28 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು, (ಏಪ್ರಿಲ್ 08): ಬೆಂಗಳೂರಿನ ಮಾಧವನಗರದಲ್ಲಿರುವ ಪ್ರತಿಷ್ಠಿತ ರೆನೈಸನ್ಸ್ ಹೋಟೆಲ್ (Renaissance hotel) 19ನೇ ಮಹಡಿಯಿಂದ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶರಣ್ ಎನ್ನುವ 28 ವರ್ಷದ ಯುವಕ ಇಂದು (ಏಪ್ರಿಲ್ 08) ಮಧ್ಯಾಹ್ನ 2.30ರ ಸುಮಾರಿಗೆ ಹೋಟೆಲ್ ರೂಮ್ನ ಬಾಲ್ಕನಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ತಮಿಳುನಾಡು ಮೂಲದ ಶರಣ್ , ನಿನ್ನೆ(ಏಪ್ರಿಲ್ 08) ಹೋಟೆಲ್ಗೆ ಬಂದು ಒಂದು ದಿನದ ಮೆಟ್ಟಿಗೆ ಎಂದು ಹೇಳಿ ರೂಮ್ ಪಡೆದುಕೊಂಡಿದ್ದ. ಬಳಿಕ ಇಂದು ಮತ್ತೆರೆಡು ದಿನ ಉಳಿಯುವುದಾಗಿ ಹೇಳಿದ್ದ. ಆದ್ರೆ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆ ಹಲವು ಬಾರಿ ಇದೇ ಹೋಟೆಲ್ ನಲ್ಲಿ ಬಂದು ಉಳಿದುಕೊಂಡಿದ್ದ. ಆದ್ರೆ, ಶರಣ್ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ವಿಭಾಗದ ಡಿಸಿಪಿ ಹೇಳಿದ್ದೇನು?
ಇನ್ನು ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಂದು ಮಧ್ಯಾಹ್ನ ಖಾಸಗಿ ಹೋಟೆಲ್ ನಲ್ಲಿ 2.30ರ ಸುಮಾರಿಗೆ ಘಟನೆ ಬಗ್ಗೆ ಮಾಹಿತಿ ಬಂತು. ವ್ಯಕ್ತಿಯೋರ್ವ 19ನೇ ಫ್ಲೋರ್ ನಿಂದ ಬಿದ್ದು ಮೃತಪಟ್ಟಿದ್ದಾನೆಂದು ತಿಳಿದುಬಂದಿದ್ದು, ಸ್ಥಳಕ್ಕೆ ಹೈಗ್ರೌಂಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿ ಶರಣ್ ಎಂದು ತಿಳಿದು ಬಂದಿದೆ. ತಮಿಳುನಾಡಿನವನು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಆದ್ರೆ, ಯಾಕೆ ಈ ರೀತಿ ಮಾಡಿಕೊಂಡಿದ್ದಾರೆ ಎಂಬುದು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸೋಕೊ ಟೀಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. 6ನೇ ತಾರೀಖು ಹೋಟೆಲ್ ಗೆ ಈತ ಬಂದಿದ್ದ. 7ನೇ ತಾರೀಖು ಹೋಟೆಲ್ ನಿಂದ ಹೊಗಬೇಕಿತ್ತು. ಆದರೇ ತಾನೇ 8ನೇ ತಾರೀಖುವರೆಗೂ ಮುಂದುವರೆಸುತ್ತೇನೆ ಎಂದು ಹೇಳಿದ್ದ. ಆದ್ರೆ, ಇವತ್ತು ಮೃತಪಟ್ಟಿದ್ದು, ಯಾವ ಕಾರಣ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾಧವನಗರದಲ್ಲಿರುವ ಪ್ರತಿಷ್ಠಿತ ರೆನೈಸನ್ಸ್ ಹೋಟೆಲ್ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ರಾಜಕೀಯ ಸಭೆ ಸಮಾರಂಭಗಳು ಸಹ ಈ ಹೋಟೆಲ್ನಲ್ಲಿ ನಡೆಯುತ್ತವೆ. ಹಾಗೇ ವಿವಿಧ ದೊಡ್ಡ ದೊಡ್ಡ ಕಂಪನಿ, ವಿವಿಧ ಸಂಸ್ಥೆಗಳ ಕಾರ್ಯಕ್ರಮಗಳು, ಡಿನ್ನರ್ ಪಾರ್ಟಿ ಈ ಹೋಟೆಲ್ನಲ್ಲಿ ನಡೆಯುತ್ತವೆ. ಇಂತಹ ದೊಡ್ಡ ಐಷಾರಾಮಿ ಹೋಟೆಲ್ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:15 pm, Mon, 8 April 24