ಬೆಂಗಳೂರು, ನವೆಂಬರ್ 27: ಬೋವಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದ ಜೀವಾ ಎನ್ನುವ ವಕೀಲೆಯ ಆತ್ಮಹತ್ಯೆ ಘಟನೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡತೊಡಗಿದೆ. ಎಸ್ ಜೀವಾ ಆತ್ಮಹತ್ಯಾ ಪ್ರಕರಣದ ತನಿಖೆಯ ಯಾವ ಹಂತದಲ್ಲಿದೆ ಎನ್ನುವ ವಿವರವನ್ನು ಒದಗಿಸುವಂತೆ ಪ್ರಾಸಿಕ್ಯೂಶನ್ಗೆ ಹೈಕೋರ್ಟ್ ಆದೇಶಿಸಿದೆ. ಇದೇ ವೇಳೆ, ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮತ್ತು ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆನ್ನಲಾದ ಡಿವೈಎಸ್ಪಿ ಕನಕಲಕ್ಷ್ಮೀ ಅವರನ್ನು ಬಂಧಿಸಬೇಕು ಎಂದು ರಾಜ್ಯ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ.
ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹೈಕೋರ್ಟ್ನಲ್ಲಿ ಶನಿವಾರ ಅರ್ಜಿ ಹಾಕಿದ್ದೇವೆ. ಅದಾದ ಕೂಡಲೇ ಆಯುಕ್ತರು ಈ ಪ್ರಕರಣದ ತನಿಖೆ ನಡೆಸಲು ಸಿಸಿಬಿಗೆ ವಹಿಸಿದ್ದಾರೆ. ಸಿಸಿಬಿಯವರು ಯಾವುದೇ ತನಿಖೆ ಮಾಡದೇ ಸುಮ್ಮನಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಹೆದರುತ್ತಿದ್ದಾರೆ. ಇಲ್ಲಿ ನ್ಯಾಯ ಸಿಗುತ್ತದಾ ಎನ್ನುವುದೇ ಪ್ರಶ್ನೆ ಎಂದು ವಿವೇಕ್ ಸುಬ್ಬಾರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭೋವಿ ನಿಗಮ ಅವ್ಯವಹಾರ: ನಕಲಿ ಕಂಪನಿಗಳ ಖಾತೆಗೆ ಜಮೆ ಆಯ್ತು ಕೋಟಿ ಕೋಟಿ ಹಣ
ಭೋವಿ ನಿಗಮದ ಹಗರಣ ತನಿಖೆ ಅಲ್ಲ, ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಾತ್ರ ಸಿಬಿಐಗೆ ಕೊಡಿ ಎಂಬುದು ತಮ್ಮ ಆಗ್ರಹ ಎಂದು ಹೇಳಿದ ವಕೀಲರ ಸಂಘದ ಅಧ್ಯಕ್ಷರು, ಡಿವೈಎಸ್ಪಿ ಕನಕಲಕ್ಷ್ಮೀ ಬಂಧನವಾಗಬೇಕೆಂದೂ ಒತ್ತಾಯಿಸಿದ್ದಾರೆ.
ಭೋವಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ವಕೀಲೆ ಜೀವಾ ಹಾಗು ಇತರರನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಜೀವಾಳಿಗೆ ಡಿವೈಎಸ್ಪಿ ಕನಕಲಕ್ಷ್ಮೀ ಸಾಕಷ್ಟು ಟಾರ್ಚರ್ ನೀಡಿರುವ ಆರೋಪ ಇದೆ. ಜೀವಾಳ ಬಟ್ಟೆ ಬಿಚ್ಚಿ ಹಲ್ಲೆ ಮಾಡಲಾಗಿದೆ. ಜೀವಾ ಬರೆದಿರುವ 13 ಪುಟಗಳ ಡೆತ್ನೋಟ್ನಲ್ಲಿ ಕನಕಲಕ್ಷ್ಮೀ ಹೆಸರನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕನಕಲಕ್ಷ್ಮೀ ಈ ಹಿಂದೆ ತುಮಕೂರಿನಲ್ಲಿ ಇದ್ದಾಗಲೂ ಹಲ್ಲೆಯ ಆರೋಪ ಹೊಂದಿದ್ದರು. ಅವರನ್ನು ಕೂಡಲೇ ಬಂಧಿಸಬೇಕು ಎಂದು ವಿವೇಕ್ ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ.
ಕನಕಲಕ್ಷ್ಮೀ ಮೇಡಂ ಅವರು ಪ್ರತೀ ದಿನ ನಮ್ಮನ್ನು ಕರೆಸಿ ಸಂಜೆವರೆಗೂ ಟಾರ್ಚರ್ ಕೊಡುತ್ತಿದ್ದರು. ಪ್ರಕರಣ ಸಂಬಂಧ ಏನನ್ನೂ ವಿಚಾರಿಸುತ್ತಿರಲಿಲ್ಲ. ವೈಯಕ್ತಿಕ ವಿಚಾರವನ್ನು ಕೆದಕುತ್ತದ್ದರು. ತಂದೆ ತಾಯಿ ಇಲ್ಲದಿದ್ದರೆ ಹೇಗೆ ಬದುಕುತ್ತೀರಾ ಎನ್ನುತ್ತಿದ್ದರು. 25 ಲಕ್ಷ ರೂ ಲಂಚದ ಹಣ ಕೇಳಿದ್ದರು ಎಂದು ಜೀವಾ ಸಹೋದರೆ ಸಂಗೀತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಭಕ್ತರಿಗಾಗಿ ಹುಬ್ಬಳ್ಳಿ-ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ
ಇನ್ನು ಜೀವಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ನಿನ್ನೆ ಮಂಗಳವಾರ ಕೈಗೆತ್ತಿಕೊಂಡಿತು. ತನಿಖೆಯಲ್ಲಿನ ಲೋಪಗಳ ಬಗ್ಗೆ ಕೋರ್ಟ್ ಬೇಸರ ವ್ಯಕ್ತಪಡಿಸಿದ್ದು, ಸಿಬಿಐಗೆ ತನಿಖೆ ವಹಿಸಬೇಕೋ ಬೇಡವೋ ಎನ್ನುವ ನಿರ್ಧಾರವನ್ನು ಶುಕ್ರವಾರ ತಿಳಿಸುವುದಾಗಿ ತೀರ್ಪನ್ನು ಕಾಯ್ದಿರಿಸಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ