Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೋವಿ ನಿಗಮ ಅವ್ಯವಹಾರ: ನಕಲಿ ಕಂಪನಿಗಳ ಖಾತೆಗೆ ಜಮೆ ಆಯ್ತು ಕೋಟಿ ಕೋಟಿ ಹಣ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವುದು ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ. ಐದು ಖಾಸಗಿ ಕಂಪನಿಗಳಿಗೆ 34 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಪತ್ತೆಯಾಗಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಅನೇಕ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ.

ಭೋವಿ ನಿಗಮ ಅವ್ಯವಹಾರ: ನಕಲಿ ಕಂಪನಿಗಳ ಖಾತೆಗೆ ಜಮೆ ಆಯ್ತು ಕೋಟಿ ಕೋಟಿ ಹಣ
ಭೋವಿ ನಿಗಮ
Follow us
Shivaprasad
| Updated By: ವಿವೇಕ ಬಿರಾದಾರ

Updated on:Nov 27, 2024 | 8:25 AM

ಬೆಂಗಳೂರು, ನವೆಂಬರ್​ 27: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ (Karnataka Bhovi Development Corporation) ಬಹುಕೋಟಿ ಅವ್ಯವಹಾರ ಪ್ರಕರಣದ ತನಿಖೆ ಸಿಐಡಿ ನಡೆಸುತ್ತಿದ್ದು, ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂ. ಹಣ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿದೆ. ಅಪರಾಧ ತನಿಖಾ ಇಲಾಖೆ (CID) ತನಿಖೆ ಎದುರಿಸಿದ್ದ ಜೀವಾ ಅವರ ಖಾತೆ​ಗೆ 7 ಕೋಟಿ 16 ಲಕ್ಷ ರೂ. ಜಮೆಯಾಗಿದೆ.

ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ ಅವರು ತಮ್ಮ ನೆರೆಹೊರೆಯವರು, ಬಾಡಿಗೆದಾರರು ಸಂಬಂಧಿಕರ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದು, ಅವರ ಖಾತೆಗಳಿಗೆ ಹಣ ಜಮೆಯಾಗಿದೆ.

ಇದೇ ಹಗರಣ ಸಂಬಂಧ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ ಅವರು, ಐದು ದಿನಗಳ ಹಿಂದೆ ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ, ಐದು ಕಂಪನಿಗಳಿಗೆ 34.18 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ.

ಇದನ್ನೂ ಓದಿ:ಭೋವಿ ನಿಗಮದ ಅವ್ಯವಹಾರದಲ್ಲಿ ಹೆಸರು ಪ್ರಸ್ತಾಪ: ಆರೋಪ ಹಿಂಪಡೆಯುವಂತೆ ಸಿಎಂಗೆ ಕೋಟ ಶ್ರೀನಿವಾಸ ಪತ್ರ

ಇದರಲ್ಲಿ ಜೀವಾ ಅವರಿಗೆ ಸೇರಿದ್ದು ಎನ್ನಲಾದ ಅನ್ನಿಕಾ ಎಂಟರ್ ಪ್ರೈಸ್ ಕಂಪನಿಗೆ 7.16 ಕೋಟಿ ರೂ. ಹಾಗೂ ಅವರ ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್ ಕಂಪನಿಗೆ 3.79 ಕೋಟಿ ರೂ. ಸೇರಿ ಒಟ್ಟು 10.9 ಕೋಟಿ ರೂ., ನಿಗಮದ ಸಿಬ್ಬಂದಿ ಯಶಸ್ವಿನಿ ಅವರಿಗೆ ಸೇರಿದ್ದ ಎನ್ನಲಾದ ಡ್ರೀಮ್ ಎಂಟರ್ ಪ್ರೈಸಸ್ ಕಂಪನಿಗೆ 8 ಕೋಟಿ 78 ಲಕ್ಷ ರೂ. ಯಶಸ್ವಿನಿ ಸೋದರ ಕಾರ್ತೀಕ್‌ ಗೌಡ ಹೆಸರಿನಲ್ಲಿನ ಆದಿತ್ಯ ಎಂಟರ್ ಪ್ರೈಸಸ್ ಕಂಪನಿಗೆ 4 ಕೋಟಿ 76 ಲಕ್ಷ ಜಮೆಯಾಗಿದೆ.

ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕನ ಆಪ್ತ ಸಿ.ಸಂತೋಷ ಹೆಸರಿನಲ್ಲಿನ ಸೋಮನಾಥೇಶ್ವರ ಎಂಟರ್ ಪ್ರೈಸಸ್ ಕಂಪೆನಿಗೆ ಬರೋಬ್ಬರಿ 9 ಕೋಟಿ 66 ಲಕ್ಷ ರೂ. ಕಾಂತ ಒಡೆಯರ್ ಹೆಸರಿನ ನ್ಯೂ ಡ್ರೀಮ್ ಎಂಟರ್ ಪ್ರೈಸಸ್ ಕಂಪನಿ 11 ಕೋಟಿ 40 ಲಕ್ಷ ರೂ. ಪದ್ಮಾ ಎಂಬಾಕೆ ಬ್ಯಾಂಕ್ ಅಕೌಂಟ್​ಗೆ ನಿಗಮ ಮತ್ತು ಬ್ಯಾಂಕ್ ಪಿಆರ್​​ಒ ಅಭಿಲಾಶ್​ ಅವರಿಗೆ ಸೇರಿದ ಎನ್ನಲಾಗಿರುವ ಕಂಪನಿಗೆ 1 ಕೋಟಿ 26 ಲಕ್ಷ ರೂ. ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಸೋದರಿ ಮಂಗಳ ರಾಮು ಬ್ಯಾಂಕ್ ಅಕೌಂಟ್​ ಗೆ 1 ಕೋಟಿ 48 ಲಕ್ಷ ರೂ. ಸಂದಾಯವಾಗಿದೆ. ಈ ಮೂಲಕ ಬರೊಬ್ಬರಿ 90 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ.

ದನದ ಕೊಟ್ಟಿಗೆಯಲ್ಲಿ ಕಂಪನಿಗಳು

ಬೆಂಗಳೂರು ನಗರದಲ್ಲೇ ಕಾರ್ಯಚಟುವಟಿಕೆ ಹೊಂದಿವೆ ಎಂದು ಬಿಂಬಿಸಿಕೊಂಡಿದ್ದ ಈ ಕಂಪನಿಗಳ ಬೆನ್ನತ್ತಿ ಹೋಗಿದ್ದ ಅಧಿಕಾರಿಗಳು, ಕೆಲ ಕಂಪನಿಗಳ ಕಚೇರಿಗಳು ದನದ ಕೊಟ್ಟಿಗೆಯಲ್ಲಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಬರೊಬ್ಬರಿ 90 ಕೋಟಿಗೂ ಅಧಿಕ ಅವ್ಯವಹಾರ

ಸರ್ಕಾರವು ಭೋವಿ ಸಮುದಾಯದ ಅಭ್ಯುದಯಕ್ಕೆ ರೂಪಿಸಿದ್ದ ಆರ್ಥಿಕ ಯೋಜನೆಗಳಲ್ಲಿ ನಿಗಮದ ಕೆಲ ಅಧಿಕಾರಿಗಳು ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. 2018-2023ರವರೆಗೆ ಐದು ವರ್ಷಗಳಲ್ಲಿ ಸುಮಾರು 90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಗೊತ್ತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:21 am, Wed, 27 November 24