ಬೆಂಗಳೂರು, (ಜನವರಿ 28): ಇದೇ ಫೆಬ್ರವರಿ 13, 14ರಂದು ಏರ್ ಶೋ ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪದವಿ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಕಾಲೇಜುಗಳ ತರಗತಿ ರದ್ದುಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಇಂದು (ಜನವರಿ 28) ಆದೇಶ ಹೊರಡಿಸಿದೆ. ಏರ್ ಫೋರ್ಸ್ ಸ್ಟೇಷನ್ ಮತ್ತು ಯಲಹಂಕದ ಸುತ್ತಮುತ್ತಲಿನ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗಲಿದೆ. ಪ್ರಕಟಣೆಯಲ್ಲಿ ಪ್ರತ್ಯೇಕವಾಗಿ ಕಾಲೇಜುಗಳ ಹೆಸರನ್ನು ಸೂಚಿಸಿಲ್ಲ.
ಫೆಬ್ರವರಿ 13 ಮತ್ತು 14ರಂದು ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದೆ. ಈ ಏರ್ ಶೋ ವೀಕ್ಷಿಸಲು ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಗಣ್ಯರು ಆಗಮಿಸುತ್ತಾರೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಸರ್ಕಾರಿ ಪ್ರಥಮ ದರ್ಜೆ, ಖಾಸಗಿ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳ ತರಗತಿಗಳನ್ನು ರದ್ದುಪಡಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಬೆಂಗಳೂರು ಏರ್ ಶೋ ‘ಏರೋ ಇಂಡಿಯಾ 2025’ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಮತ್ತೊಂದೆಡೆ, ಏರ್ ಶೋ ವೇಳೆ ಅತ್ತ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪ್ರಯಾಣಿಕ ವಿಮಾನಗಳ ಹಾರಾಟದಲ್ಲಿ ತುಸು ವ್ಯತ್ಯಯಕ್ಕೂ ಕಾರಣವಾಗಲಿದೆ. ಏರ್ ಶೋ ನಡೆಯುವ ಸಂದರ್ಭಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.
ಇನ್ನು ಅಂತರರಾಷ್ಟ್ರೀಯ ಏರ್ ಶೋ ನಡೆಯುವ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನ ನಿಷೇಧ ಮಾಡಲಾಗುತ್ತೆ. ಅದರಂತೆ, ಈ ಬಾರಿಯೂ ಸಹ ಬೃಹತ್ ಬೆಂಗಳೂರು ಮಹಾನಗರ ಪಾಲೀಕೆ (BBMP) ಯಲಹಂಕ ವಲಯದ ಏರ್‌ಪೋರ್ಸ್ ಸ್ಟೇಷನ್‌ನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ಯಮಗಳನ್ನು 26 ದಿನ ಮುಚ್ಚುವಂತೆ ಆದೇಶ ಹೊರಡಿಸಿದೆ. ಪಾಲಿಕೆ ನಿಮಯ ಉಲ್ಲಂಘನೆ ಮಾಡಿದರೇ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಲೋಹದ ಹಕ್ಕಿಗಳ ಮೈನವಿರೇಳಿಸುವ ಪ್ರದರ್ಶನಕ್ಕೆ ಈಗಾಗಲೇ ಸ್ಥಳೀಯ ವಿಮಾನಗಳು, ಚಾಪರ್ಗಳು ಯಲಹಂಕ ಏರ್ ಬೇಸ್ನಲ್ಲಿ ಬೀಡುಬಿಟ್ಟಿದ್ದರೇ, ವಿದೇಶಗಳಿಂದ ಆಗಮಿಸುವ ಫೈಟರ್ ಜೆಟ್ಗಳು, ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಎಲ್ಲರ ಗಮನ ಸೆಳೆಯುವ ಸೂರ್ಯಕಿರಣ್ ವಿಮಾನಗಳ ತಂಡ ಸೇರಿದಂತೆ ವಿಭಿನ್ನ ಯುದ್ಧ ವಿಮಾನಗಳ ಬರುವಿಕೆಗಾಗಿ ಕೌಂಟ್ ಡೌನ್ ಶುರುವಾಗಿದೆ.