ಡೆಂಗ್ಯೂ ಜತೆಗೆ ಬೆಂಗಳೂರಿಗೆ ಜಿಕಾ ವೈರಸ್, ಮಂಕಿಪಾಕ್ಸ್ ಭೀತಿ: ವೈದ್ಯರು ನೀಡಿರುವ ಎಚ್ಚರಿಕೆಗಳೇನು? ಇಲ್ಲಿದೆ ವಿವರ

| Updated By: Ganapathi Sharma

Updated on: Aug 19, 2024 | 9:18 AM

ಕರ್ನಾಟಕದಲ್ಲಿ ಕಳೆದ ಒಂದು ತಿಂಗಳ ಹಿಂದೆ ಡೇಂಗ್ಯೂ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಆಸ್ಪತ್ರೆಗಳೆಲ್ಲವೂ ಹೌಸ್ ಪುಲ್ ಆಗಿದ್ದವು. ಈಗ ಕೊಂಚ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಜಿಕಾ ಹಾಗೂ ಮಂಕಿಪಾಕ್ಸ್ ಆತಂಕ ಶುರುವಾಗಿದೆ.

ಡೆಂಗ್ಯೂ ಜತೆಗೆ ಬೆಂಗಳೂರಿಗೆ ಜಿಕಾ ವೈರಸ್, ಮಂಕಿಪಾಕ್ಸ್ ಭೀತಿ: ವೈದ್ಯರು ನೀಡಿರುವ ಎಚ್ಚರಿಕೆಗಳೇನು? ಇಲ್ಲಿದೆ ವಿವರ
ಬೆಂಗಳೂರಿಗೆ ಜಿಕಾ ವೈರಸ್, ಮಂಕಿಪಾಕ್ಸ್ ಭೀತಿ
Follow us on

ಬೆಂಗಳೂರು, ಆಗಸ್ಟ್ 19: ರಾಜಧಾನಿ ಬೆಂಗಳೂರಿಗೆ ಈ ವರ್ಷ ಒಂದಲ್ಲ ಒಂದು ವೈರಸ್​​ಗಳ ಹಾವಳಿ ಜೋರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಡೆಂಗ್ಯೂ ಜ್ವರ ವಿಪರೀತ ಹರಡಿತ್ತು. ಈಗ ಕಳೆದ ಕೆಲ ದಿನಗಳಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಡೆಂಗ್ಯೂ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿಲ್ಲ. ಈಮಧ್ಯೆ ಈಗ ರಾಜ್ಯಕ್ಕೆ ಮತ್ತೆರಡು ಹೊಸ ವೈರಸ್ ಆತಂಕ ಕಂಡು ಬಂದಿದೆ. ಬೆಂಗಳೂರಿನ ಹೊರಭಾಗದಲ್ಲಿರುವ ಜಿಗಣಿ ಇಂಡಸ್ಟ್ರೀಯಲ್ ಏರಿಯಾಲ್ಲಿ ಕಳೆದ ವಾರ ಐದು ಹೊಸ ಜಿಕಾ ಪ್ರಕರಣಗಳು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯ ಆತಂಕ ಹೆಚ್ಚಿಸಿದೆ.

ಜಿಕಾ ವೈರಸ್ ಸೋಂಕಿನ ಲಕ್ಷಣಗಳೇನು?

  • ಜ್ವರ, ಚರ್ಮದ ದದ್ದು, ಕಾಂಜಂಕ್ಟಿವಿಟಿಸ್
  • ತಲೆ ನೋವು ಹಾಗೂ ಕಣ್ಣು ಕೆಂಪಾಗುವುದು
  • ಸ್ನಾಯು ಮತ್ತು ಕೀಲು ನೋವು
  • ಅಸ್ವಸ್ಥತೆ ಅಥವಾ ತಲೆನೋವು
  • ಈ ಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳವರೆಗೆ ಇರುತ್ತದೆ
  • ಡೆಂಗ್ಯೂ ಜ್ವರದ ಲಕ್ಷಣಗಳ ಸಾಮ್ಯತೆ ಇರುತ್ತೆ

ಕೆಲವು ದಿನಗಳ ಹಿಂದೆಯಷ್ಟೇ ನೆರೆಯ ಕೇರಳದಲ್ಲಿ ಜಿಕಾ ವೈರಸ್ ಆತಂಕ ಮೂಡಿಸಿತ್ತು. ಇದೇ ವೈರಸ್ ಈಗ​ ರಾಜ್ಯದಲ್ಲಿ ಸೊಳ್ಳೆಗಳಲ್ಲಿ ಪತ್ತೆಯಾಗಿದೆ. ಜಿಗಣಿಯಲ್ಲಿ ಪತ್ತೆಯಾಗಿರುವ ಡೆಡ್ಲಿ ವೈರಸ್​​​ ಈಗ ರಾಜ್ಯದಲ್ಲೂ ಆತಂಕ ಹೆಚ್ಚಿಸಿದ್ದು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ಆರಂಭದಲ್ಲಿಯೇ ಜಿಕಾ ಹರಡದಂತೆ ಬ್ರೇಕ್ ಹಾಕಲು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮುನ್ನೆಚ್ಚರಿಕೆ ವಹಿಸಲು ಗರ್ಭಿಣಿಯರಿಗೆ ಆರೋಗ್ಯ ಇಲಾಖೆ ಸೂಚನೆ

ರಾಜ್ಯದಲ್ಲಿ ಜೀಕಾ ವೈರಸ್ ಪತ್ತೆ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜನ ಸಮಾನ್ಯರಿಗೆ, ಜಿಕಾ ಲಕ್ಷಣಗಳಾದ ಕಣ್ಣು ಕೆಂಪಾಗುವುದು, ತಲೆನೋವು ಮೈಕೈ ನೋವು ಜ್ವರ ಇಂತಹ ಲಕ್ಷಣ ಕಂಡುಬಂದರೆ ವೈದ್ಯರನ್ನ ಸಂಪರ್ಕಿಸಲು ಸೂಚನೆ ನೀಡಿದೆ. ಅದರಲ್ಲೂ ಗರ್ಬಿಣಿ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು. ಸಮಸ್ಯೆ ಕಂಡುಬಂದರೆ ಕೂಡಲೇ ಕ್ಲಿನಿಕ್​​ನಲ್ಲಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಜಿಕಾ ವೈರಸ್ ಸೋಂಕು ಪತ್ತೆಯಾದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗೂಂಡುರಾವ್ ಮಾಹಿತಿ ನೀಡಿದ್ದಾರೆ.

ಒಂದೊಂದೇ ದೇಶಕ್ಕೆ ಲಗ್ಗೆ ಇಡುತ್ತಿದೆ ಮಂಕಿಪಾಕ್ಸ್

ಕಳೆದ ಎರಡು ವರ್ಷದ ಹಿಂದೆ, ಅಂದರೆ ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ಆತಂಕ ಸೃಷ್ಟಿಸಿದ್ದ ಮಂಕಿಪಾಕ್ಸ್ ಈಗ ಮತ್ತೆ ವಿದೇಶದಲ್ಲಿ ಆತಂಕ ಮೂಡಿಸಿದೆ. ಜಗತ್ತಿನ 116 ದೇಶಗಳಲ್ಲಿ ಹಬ್ಬಿರುವ ಮಂಕಿಪಾಕ್ಸ್​ಗೆ ಕಾಂಗೋದಲ್ಲಿ 500 ಜನರು ಬಲಿಯಾಗಿದ್ದು, ಒಟ್ಟು 14 ಸಾವಿರ ಜನರಲ್ಲಿ ಮಂಕಿಪಾಕ್ಸ್ ಕಂಡುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೆಲ್ತ್ ಎಮರ್ಜೆನ್ಸಿ ಘೋಷಣೆ ಬೆನ್ನಲ್ಲೇ ಭಾನುವಾರ ಕೇಂದ್ರ ಆರೋಗ್ಯ ಇಲಾಖೆ ಸಭೆ ಮಾಡಿ ರಾಜ್ಯಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ. ಈ ಬೆನ್ನಲೆ ಇಂದು ಆರೋಗ್ಯ ಇಲಾಖೆ ಸಭೆಗೆ ಮುಂದಾಗಿದೆ.

ಮಂಕಿಪಾಕ್ಸ್​​ಗೆ ನಿರ್ದಿಷ್ಟ ಲಸಿಕೆಯಾಗಲಿ, ಚಿಕಿತ್ಸೆಯಾಗಲಿ ಇಲ್ಲ. ಹೀಗಾಗಿ ಆರಂಭದಲ್ಲಿಯೇ ಮಂಕಿಪಾಕ್ಸ್ ನಿಯಂತ್ರಿಸದೆ ಹೊದರೆ ಆತಂಕ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಕಿಪಾಕ್ಸ್ ಲಕ್ಷಣಗಳು ಏನು?

  • ದೇಹದ ಮೇಲೆ ಗುಳ್ಳೆ ತರದ ರಾಶ್​​ಗಳು
  • ಮೈ ಮೇಲೆ ಗುಳ್ಳೆಗಳ ಜತೆ ಜ್ವರದ ಲಕ್ಷಣಗಳು
  • ತೀವ್ರವಾದ ತಲೆ ನೋವು, ಬೆನ್ನು ನೋವು ಸ್ನಾಯು ನೋವು
  • 2 ವಾರದಿಂದ 4 ವಾರಗಳ ಕಾಲ ಬಾಧಿಸುವ ಸೋಂಕು
  • ಶೀತ, ಜ್ವರ, ಸ್ನಾಯು ದೌರ್ಬಲ್ಯ,
  • ಊತ, ಚರ್ಮದ ಮೇಲೆ ಗುಳ್ಳೆ ಬಳಲಿಕೆ
  • ಅಂಗೈಗಳು, ಪಾದಗಳು ದೇಹದ ಮೇಲೆ ವ್ಯಾಪಕವಾದ ದದ್ದು/ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಮಂಕಿಪಾಕ್ಸ್ ವೈರಸ್​ಗೆ ಚಿಕಿತ್ಸೆ ಏನು?

ಮಂಕಿಪಾಕ್ಸ್ ವೈರಸ್‌ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ, ಸ್ಮಾಲ್‌ಪಾಕ್ಸ್‌ಗೆ ಬಳಸುವ ಲಸಿಕೆಯನ್ನೇ ಬಳಕೆ ಮಾಡಲಾಗುತ್ತದೆ. ಇದು ಶೇ 85ರಷ್ಟು ರಕ್ಷಣೆ ನೀಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಐವರಲ್ಲಿ ಝೀಕಾ ವೈರಸ್ ಪತ್ತೆ​​​, ಗರ್ಭಿಣಿಯರೇ ಎಚ್ಚರ!

ಜಿಕಾ ಹಾಗೂ ಮಂಕಿಪಾಕ್ಸ್ ಸದ್ಯ ಎಲ್ಲಡೆ ಆತಂಕ ಸೃಷ್ಟಿ ಮಾಡಿವೆ. ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದ ಕಾರಣ ಕೊಂಚ ಆತಂಕ ಹೆಚ್ಚಿಸಿವೆ. ಸದ್ಯ ಭಾರತದಲ್ಲಿ ಹೆಚ್ಚಾಗಿ ಪ್ರಕರಣ ಕಾಣಿಸಿಲ್ಲ. ಆದರೆ ಇದು ಭಾರತಕ್ಕೆ ಕಾಲಿಡದಂತೆ ಎಚ್ಚರಿಕೆ ವಹಿಸಬೇಕಿದೆ. ಕೊಂಚ ಯಾಮಾರಿದರೂ ಮಂಕಿಪಾಕ್ಸ್ ಭಾರತದಲ್ಲಿ ಅಪಾಯ ತಂದಿಡುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 am, Mon, 19 August 24