
ಬೆಂಗಳೂರು, ಜೂ.4: ಟ್ರಾಫಿಕ್, ಕಸದ ಸಮಸ್ಯೆ ಎಂದು ಬೆಂಗಳೂರನ್ನು ಸದಾ ಟೀಕಿಸುವವರ ನಡುವೆ, ಅಮೆರಿಕದ ಪ್ರವಾಸಿಯೊಬ್ಬರು ನಮ್ಮ ಸಿಲಿಕಾನ್ ಸಿಟಿಯ ಜನತೆ, ಸಂಸ್ಕೃತಿ ಮತ್ತು ಆತಿಥ್ಯವನ್ನು ಕೊಂಡಾಡಿ ಬರೆದಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಹೃದಯ ಗೆದ್ದಿದೆ. 5 ತಿಂಗಳ ಕಾಲ ಬೆಂಗಳೂರಿನಲ್ಲಿ ವಾಸವಿದ್ದ ಅಮೆರಿಕದ ಕುಟುಂಬವೊಂದು, “ನಮ್ಮ ಮಕ್ಕಳಿಗೆ ಇಲ್ಲಿಂದ ವಾಪಸ್ ಸ್ವದೇಶಕ್ಕೆ ಹೋಗಲು ಮನಸ್ಸಿಲ್ಲ, ಬೆಂಗಳೂರಿಗೆ ನಮ್ಮ ಕಡೆಯಿಂದ 5 ಸ್ಟಾರ್ ರೇಟಿಂಗ್!” ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.
ರೆಡ್ಡಿಟ್ನಲ್ಲಿ ‘ಥ್ಯಾಂಕ್ಸ್ ಬೆಂಗಳೂರು’ (Thanks Bangalore) ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿರುವ ವಿದೇಶಿ ಪ್ರಜೆ, “ನಾವು ಭಾರತದೊಂದಿಗೆ ಯಾವುದೇ ಪೂರ್ವ ಸಂಪರ್ಕವಿಲ್ಲದ ಅಮೆರಿಕನ್ನರು. ಕೆಲಸದ ನಿಮಿತ್ತ 5 ತಿಂಗಳ ಪ್ರವಾಸಕ್ಕಾಗಿ ಇಲ್ಲಿಗೆ ಬಂದಿದ್ದೆವು. ಬರುವ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಕಸ, ಟ್ರಾಫಿಕ್ ಮತ್ತು ಗಾಳಿಯ ಗುಣಮಟ್ಟದ ಕೊರತೆಯ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಓದಿ ಆತಂಕಗೊಂಡಿದ್ದೆವು. ಆದರೆ ಆ ಎಲ್ಲಾ ನೆಗೆಟಿವ್ ಮಾತುಗಳ ನಡುವೆಯೂ ನಿಮ್ಮದು ನಿಜಕ್ಕೂ ಒಂದು ಅದ್ಭುತವಾದ ನಗರ!” ಎಂದು ಬರೆದುಕೊಂಡಿದ್ದಾರೆ.
Thanks Bangalore
by
u/No-Day-2709 in
bangalore
ಇನ್ನು ಕನ್ನಡಿಗರ ಸೌಮ್ಯ ಸ್ವಭಾವ ಮತ್ತು ಸಹಾಯ ಹಸ್ತವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, “ಇಲ್ಲಿನ ಪ್ರತಿಯೊಬ್ಬರೂ ತುಂಬಾ ದಯಾಳುಗಳು. ನಾವು ಎಲ್ಲೇ ಹೋದರೂ ಸ್ನೇಹಪರ ಜನ ಸಿಗುತ್ತಿದ್ದರು. ಅದರಲ್ಲೂ ವಿಶೇಷವಾಗಿ ನಾವು ಬೆಂಗಳೂರಿನ ಬಸ್‌ಗಳಲ್ಲಿ ದಾರಿ ಹುಡುಕಲಾಗದೆ ಪರದಾಡಿದಾಗಲೆಲ್ಲಾ, ಸ್ಥಳೀಯರೇ ಮುಂದೆ ಬಂದು ನಮಗೆ ದಾರಿ ತೋರಿಸಿ ಸಹಾಯ ಮಾಡಿದರು. ನಮ್ಮ 5 ತಿಂಗಳ ವಾಸ್ತವ್ಯದಲ್ಲಿ ಯಾರೂ ನಮಗೆ ವಂಚಿಸಲು ಪ್ರಯತ್ನಿಸಲಿಲ್ಲ, ಯಾವುದೇ ಅಪಾಯ ಎದುರಾಗಲಿಲ್ಲ (ರಸ್ತೆಗಳ ಟ್ರಾಫಿಕ್ ಹೊರತುಪಡಿಸಿ). ಕೊನೆಯದಾಗಿ ಹೇಳಬೇಕೆಂದರೆ, ನಮಗೆ ಆತಿಥ್ಯ ನೀಡಿದ್ದಕ್ಕೆ ಧನ್ಯವಾದಗಳು, ನಾವು ಖಂಡಿತಾ ಮತ್ತೆ ಬೆಂಗಳೂರಿಗೆ ಬರುತ್ತೇವೆ” ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಸ್ತೆಯೋ ಅಥವಾ ಸಾವಿನ ರನ್-ವೇಯೋ?: ಬೆಂಗಳೂರಿಗರ ಜೀವ ಹಿಂಡುತ್ತಿರುವ ಗುಂಡಿಗಳು; GBA ನಿದ್ರೆಗೆ ಜಾರಿದೆಯೇ?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ನೆಟ್ಟಿಗರು ಭಾವುಕರಾಗಿದ್ದಾರೆ. ಒಬ್ಬ ಬಳಕೆದಾರರು, “ನಮ್ಮ ನಗರದ ಆತಿಥ್ಯ, ಆಹಾರ ಮತ್ತು ಜನರ ಪ್ರೀತಿ ನಿಮಗೆ ಇಷ್ಟವಾಗಿದ್ದಕ್ಕೆ ಸಂತೋಷ, ಮತ್ತೆ ಬನ್ನಿ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಕೆಲವು ನಾಗರಿಕ ಪ್ರಜ್ಞೆಯ ಕೊರತೆ ಮತ್ತು ಮೂಲಸೌಕರ್ಯದ ಸಮಸ್ಯೆಗಳಿದ್ದರೂ, ಮುಕ್ತ ಮನಸ್ಸಿನಿಂದ ಬರುವ ವಿದೇಶಿಗರಿಗೆ ಬೆಂಗಳೂರು ಅತ್ಯಂತ ಸುರಕ್ಷಿತ ಮತ್ತು ಸುಂದರ ನಗರ” ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ