ವಾಹನ ಸವಾರರೇ ಗಮನಿಸಿ: ಇಂದು ಬೆಂಗಳೂರಿನ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ
ಕೇಂದ್ರ ಗೃಹ ಸಚಿವ ಇಂದು ಬೆಂಗಳೂರಿನಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರಮುಖ ರಸ್ತೆ ಮಾರ್ಗಗಳಲ್ಲಿ ವಿವಿಧ ವಾಹನಗಳನ್ನು ನಿರ್ಬಂಧಿಸಲಾಗಿದೆ.
ಬೆಂಗಳೂರು(ಮಾ.24): ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಇಂದು(ಮಾ.24) ನಗರದ ಕೊಮ್ಮಘಟ್ಟಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ(traffic restrictions). ಹೀಗಾಗಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ವಾಹನ ಸವಾರರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು(Bengaluru Traffic Police) ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಇಂದು(ಶುಕ್ರವಾರ) ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಕೆಲ ಮಾರ್ಗಗಳಲ್ಲಿ ಎಲ್ಲ ಮಾದರಿ ಸರಕು ಸಾಗಣೆ ವಾಹಗಳ ಸಂಚಾರ ನಿರ್ಬಂಧಿಸಲಾಗಿದೆ. ಯಾವ ರಸ್ತೆಗಳಲ್ಲಿ ನಿರ್ಬಂಧ? ಪರ್ಯಾಯ ಮಾರ್ಗಗಳು ಯಾವು? ಎನ್ನುವುದು ಈ ಕೆಳಗಿನಂತಿದೆ.
ಇದನ್ನೂ ಓದಿ: Nandi Hills: ಮುದ್ದೇನಹಳ್ಳಿಗೆ ಮೋದಿ ಭೇಟಿ ಹಿನ್ನೆಲೆ; ನಂದಿಗಿರಿಧಾಮಕ್ಕೆ ಪ್ರವೇಶ ನಿರ್ಬಂಧ
ಎಲ್ಲಿ ನಿರ್ಬಂಧ?
ಟೌನ್‌ಹಾಲ್ ಕಡೆಯಿಂದ ಎನ್.ಆರ್.ರಸ್ತೆಯ ಮಾರ್ಗವಾಗಿ ಮೈಸೂರು ರಸ್ತೆ ಕಡೆಗೆ, ನಾಯಂಡಹಳ್ಳಿ ಜಂಕ್ಷನ್‌ನಿಂದ ಬೆಂಗಳೂರು ನಗರದ ಒಳಭಾಗ ಮತ್ತು ಹೊರಭಾಗಕ್ಕೆ ಸಂಚರಿಸುವ ಸರಕು ಸಾಗಣೆ ವಾಹನಗಳು, ಕುಂಬಳಗೋಡು ಕಡೆಯಿಂದ ಕೆಂಗೇರಿ ಕಡೆಗೆ ಸಂಚರಿಸುವ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
ಟೌನ್‌ಹಾಲ್ ಜಂಕ್ಷನ್‌ನಿಂದ ಎನ್.ಆರ್.ರಸ್ತೆಯ ಮಾರ್ಗವಾಗಿ ಮೈಸೂರು ರಸ್ತೆಗೆ ಸಂಚರಿಸುವ ವಾಹನಗಳು ಲಾಲ್‌ಬಾಗ್ ರಸ್ತೆಯ ಮೂಲಕ ಸಂಚರಿಸಬಹುದು. ನಾಯಂಡಹಳ್ಳಿ ಜಂಕ್ಷನ್‌ನಿಂದ ಬೆಂಗಳೂರು ನಗರದ ಒಳ ಮತ್ತು ಹೊರಭಾಗಕ್ಕೆ ಸಂಚರಿಸುವವರು ನಾಗರಭಾವಿ-ಸುಮ್ಮನಹಳ್ಳಿ ರಿಂಗ್ ರಸ್ತೆಯ ಮಾರ್ಗವಾಗಿ ಸಂಚರಿಸಬಹುದು. ಕುಂಬಳಗೋಡು ಕಡೆಯಿಂದ ಕೆಂಗೇರಿ ಕಡೆಗೆ ಸಂಚರಿಸುವವರು ನೈಸ್ ರಸ್ತೆಯ ಮೂಲಕ ಸಂಚರಿಸಬಹುದು.
ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ, ಎನ್.ಆರ್.ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್‌ಕೋರ್ಸ್ ರಸ್ತೆ, ಕೆಂಗೇರಿಯಿಂದ ಕೊಮ್ಮಘಟ್ಟರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:35 am, Fri, 24 March 23