ಬೆಂಗಳೂರಿನಲ್ಲಿ ಅಮಿತ್ ಶಾ: ರಸ್ತೆಗಳಿಗೆ ಬಿಜೆಪಿ ಬಾವುಟ ಸಿಂಗಾರ, ಸಾರ್ವಜನಿಕರಿಗೆ ಟ್ರಾಫಿಕ್ ಜಾಂ ಬಿಸಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 03, 2022 | 8:53 AM

ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಯಾಗಿದೆ. ಬೆಂಗಳೂರು ನಿವಾಸಿಗಳಿಗೆ ಇಂದು ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಅಮಿತ್ ಶಾ: ರಸ್ತೆಗಳಿಗೆ ಬಿಜೆಪಿ ಬಾವುಟ ಸಿಂಗಾರ, ಸಾರ್ವಜನಿಕರಿಗೆ ಟ್ರಾಫಿಕ್ ಜಾಂ ಬಿಸಿ
ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us on

ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಯಾಗಿದೆ. ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್ ಸೇರಿದಂತೆ ಅಮಿತ್ ಶಾ ಸಂಚರಿಸುವ ಮತ್ತು ಅವರ ಕಾರ್ಯಕ್ರಮಗಳು ಇರುವ ಸ್ಥಳಗಳಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ರೇಸ್​ಕೋರ್ಸ್ ರಸ್ತೆಯ ಎರಡೂ ಬದಿಗಳಲ್ಲಿ ಬಿಜೆಪಿ ಬಾವುಟ, ತೋರಣಗಳು ರಾರಾಜಿಸುತ್ತಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಅಮಿತ್ ಶಾ ಭಾಗವಹಿಸುವ ಕಾರ್ಯಕ್ರಮಗಳು ನಡೆಯುವಾಗ ರಸ್ತೆಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಇರುತ್ತದೆ. ಇದರಿಂದಾಗಿ ಬೆಂಗಳೂರಿಗರಿಗೆ ತಟ್ಟಲಿದೆ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ.

ಕಾರ್ಯಕ್ರಮ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳನ್ನು ಗುರುತಿಸಿರುವ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು 1000ಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಟ್ರಾಫಿಕ್ ವಿಭಾಗದಿಂದ 30 ಪಿಎಸ್ಐ, 20 ಇನ್​ಸ್ಪೆಕ್ಟರ್​ಗಳು, 5 ಎಸಿಪಿ, 300ಕ್ಕೂ ಹೆಚ್ಚು ಹೆಡ್ ಕಾನ್​ಸ್ಟೆಬಲ್​, 200 ಎಎಸ್ಐಗಳು, 400ಕ್ಕೂ ಹೆಚ್ಚು ಪಿಸಿಗಳನ್ನು ನೇಮಿಸಲಾಗಿದೆ. ಭದ್ರತೆಗಾಗಿ ನಗರದಾದ್ಯಂತ ಲಾ ಅಂಡ್ ಆರ್ಡರ್​ನ 1,500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. 5 ಡಿಸಿಪಿಗಳು, 50 ಇನ್​ಸ್ಪೆಕ್ಟರ್​ಗಳು, 10 ಎಸಿಪಿಗಳು, 500 ಹೆಡ್ ಕಾನ್​ಸ್ಟೆಬಲ್, 300 ಎಎಸ್ಐ, 700ಕ್ಕೂ ಹೆಚ್ಚು ಪಿಸಿಗಳನ್ನು ನೇಮಿಸಲಾಗಿದೆ. 5 ಕೆಎಸ್ಆರ್​ಪಿ ತುಕಡಿ, 4 ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಬಸವ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಹೂವಿನಿಂದ ಅಲಂಕಾರ ಮಾಡಲಾಗಿದೆ. ಬಸವೇಶ್ವರ ಪ್ರತಿಮೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಲಾರ್ಪಣೆ ಮಾಡಲಿದ್ದಾರೆ.

ಇಂದು ಏನೆಲ್ಲಾ ಕಾರ್ಯಕ್ರಮ?
ಬೆಂಗಳೂರಿನ ತಾಜ್​ ವೆಸ್ಟ್​ಎಂಡ್​ ಹೋಟೆಲ್​ನಲ್ಲಿರುವ ಅಮಿತ್ ಶಾ ಬೆಳಗ್ಗೆ 10ಕ್ಕೆ ಚಾಲುಕ್ಯ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ಮಾಲಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಆರ್​ಬಿಐ ಎದುರು ನೃಪತುಂಗ ವಿವಿಗೆ ಗುದ್ದಲಿಪೂಜೆ ನೆರವೇರಿಸಿ, ವರ್ಚುವಲ್​ ಮೂಲಕ ಬಳ್ಳಾರಿಯ ಫೊರೆನ್ಸಿಕ್​ ಲ್ಯಾಬ್​ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಡಿಆರ್​ಸಿ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12-1.15ರವರೆಗೆ NATGRID ಕ್ಯಾಂಪಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಭೋಜನ ಕೂಟ. ಸಂಜೆ 4 ಗಂಟೆಗೆ ಬಿಜೆಪಿ ರಾಜ್ಯ ಘಟಕದ ಕೋರ್​ ಕಮಿಟಿ ಸದಸ್ಯರ ಜತೆ ತಾಜ್​ ವೆಸ್ಟೆಂಡ್​ ಹೋಟೆಲ್​ನಲ್ಲಿ ಸಭೆ. ಸಂಜೆ 5.30ಕ್ಕೆ ಖೇಲೋ ಇಂಡಿಯಾ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾತ್ರಿ 8.15ಕ್ಕೆ ಎಚ್​ಎಎಲ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ: ಇಂದು ಬೆಂಗಳೂರಿನಲ್ಲಿ ಅಮಿತ್ ಶಾ ಮಹತ್ವದ ಸಭೆ

ಇದನ್ನೂ ಓದಿ: ಕನ್ನಡ ಬಿಡಿ ಎಂದು ಅಮಿತ್ ಶಾ ಎಲ್ಲಿಯೂ ಹೇಳಿಲ್ಲ; ಸಿದ್ದರಾಮಯ್ಯ ಮಾತಿಗೆ ಸಿ ಟಿ ರವಿ ತಿರುಗೇಟು

Published On - 8:53 am, Tue, 3 May 22