ಮಿಲಿಟರಿ ಡ್ರೆಸ್ ಧರಿಸಿ ಕೋಟಿ ಕೋಟಿ ವಂಚನೆ ಮಾಡಿದ ಅಸ್ಸಾಂ ಮೂಲದ ನಯವಂಚಕಿ ಬೆಂಗಳೂರಿನಲ್ಲಿ ಅರೆಸ್ಟ್
DRDO ಕಮಾಂಡರ್ ಎಂದು ಹೇಳಿಕೊಂಡು 5 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ ಅಸ್ಸಾಂ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಮಿಲಿಟರಿ ಡ್ರೆಸ್ ಹಾಕಿಕೊಂಡು DRDO ಕಮಾಂಡರ್ ಎಂದು ಹೇಳಿಕೊಂಡು 5 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ ಅಸ್ಸಾಂ ಮೂಲದ ದರ್ಶನಾ ಭಾರದ್ವಾಜ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸರು ಸದ್ಯ ಬಂಧಿತ ದರ್ಶನಾ ಭಾರದ್ವಾಜ್ ತೀವ್ರ ವಿಚಾರಣೆ ನಡೆಸಿದ್ದಾರೆ.
ಆರೋಪಿ ದರ್ಶನಾಳ ಮೇಲೆ ನಗರದ ಮೂರು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ಸೇನೆ ಹೆಸರಿನಲ್ಲಿ DRDO ಕಮಾಂಡರ್ ಅಂತೇಳಿಕೊಂಡು ಐದು ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಅನೇಕ ಸಂಗತಿಗಳು ಬಯಲಾಗುತ್ತಿವೆ. ದರ್ಶನಾಳಿಗೆ ನಗರದ ಬಿಲ್ಡರ್ಗಳೇ ಮೈನ್ ಟಾರ್ಗೆಟ್. ಸೇನೆಯ ಕಟ್ಟಡ ನಿರ್ಮಾಣ ಹಾಗೂ ಮೈಂಟೆನೆನ್ಸ್ ಟೆಂಡರ್ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದಳು. DRDO ವೆಬ್ ಸೈಟ್ ನಲ್ಲಿರೋ ಟೆಂಡರ್ ತೋರಿಸಿ 40 ಕೋಟಿ, 20 ಕೋಟಿ, 10 ಕೋಟಿ ಯಾವ ಟೆಂಡರ್ ಬೇಕು ಅದನ್ನ ಮಾಡಿಸ್ತೀನಿ ಅಂತಿದ್ಳು. ಸುಮಾರು 66 ಕೋಟಿ ಪ್ರಾಜೆಕ್ಟ್ ಕೊಡಿಸುವುದಾಗಿ ಮೂವರು ಬಿಲ್ಡರ್ಗಳಿಗೆ ವಂಚನೆ ಮಾಡಿದ್ದಾಳೆ. ಸುಮಾರು 5 ಕೋಟಿಗೂ ಅಧಿಕ ಹಣವನ್ನು ಪಡೆದು ವಂಚಿಸಿದ್ದಾಳೆ.
ಇದನ್ನೂ ಓದಿ: ಬಾಗಲಕೋಟೆ: ಅಕ್ಕನ ಮನೆಗೆ ನುಗ್ಗಿ ಬಾಮೈದನ ಅಟ್ಟಹಾಸ; ಕಲ್ಲಿನಿಂದಲೇ ಜಜ್ಜಿ ಇಬ್ಬರ ಕೊಲೆ
ಬೈಯಪ್ಪನಹಳ್ಳಿ, ಮಹದೇವಪುರ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿ ಈ ಬಗ್ಗೆ ಪ್ರತ್ಯೇಕ ಕೇಸ್ಗಳು ದಾಖಲಾಗಿವೆ. ಮಿಲಿಟರಿ ಡ್ರೆಸ್ ಹಾಕೊಂಡು ಮಿಲಿಟರಿ ಕ್ಯಾಂಪಸ್ ನಲ್ಲೇ ಈಕೆ ಡೀಲ್ ಮಾಡುತ್ತಿದ್ದಳು. ಡ್ರೆಸ್ ಹಾಕ್ಕೊಂಡು ಸೆಕ್ಯುರಿಟಿ ಹತ್ತಿರ ಹೋಗಿ ನಾನು ಕಮಾಂಡರ್ ಅಂತೇಳುತ್ತಿದ್ದಳು. ಆಯಾಸ ಅಗ್ತಾ ಇದೆ ಸ್ವಲ್ಪ ಟೈಂ ಕೂತು ಹೋಗ್ತೀನಿ ಅಂತ ಐಡಿ ಕಾರ್ಡ್ ತೋರಿಸ್ತಾ ಇದ್ಳು. ಮಿಲಿಟರಿ ಕ್ಯಾಂಪಸ್ ಭದ್ರಾತ ಸಿಬ್ಬಂದಿ ನಿಜವಾದ ಅಧಿಕಾರಿ ಅಂತ ಒಳಗೆ ಬಿಡ್ತಾ ಇದ್ರು. ಹೀಗೆ ಒಳಗೆ ಹೋಗಿದ್ದೇ ತಡ ಬಿಲ್ಡರ್ಗಳನ್ನ ಕರೆಸಿಕೊಂಡು ನಂಬಿಸಿ ವಂಚಿಸುತ್ತಿದ್ದಳು.
ಸೇನಾ ಕಟ್ಟಡ ನಿರ್ಮಾಣದ ಟೆಂಡರ್ ಕೊಡಿಸುವುದಾಗಿ ಹೇಳಿ ವಂಚನೆ
ಮಿಲಿಟರಿ ಕಟ್ಟಡ ನಿರ್ಮಾಣದ ಟೆಂಡರ್ ಕೊಡಿಸೋದಾಗಿ ಆರೋಪಿ ದರ್ಶನಾ ಡೀಲ್ ಮಾಡುತ್ತಿದ್ದಳು. ಬೈಯಪ್ಪನಹಳ್ಳಿ ಬಿಲ್ಡರ್ ನಿಂದ ಅಡ್ವಾನ್ಸ್ ಡೆಪಾಸಿಟ್ ಎಂದು ಹೇಳಿ 1.16 ಕೋಟಿ ಹಣ ಪಡೆದಿದ್ದಳು. ಹಣ ಪಡೆಯೋ ವೇಳೆ ನಕಲಿ ದಾಖಲಾತಿ ತೋರಿಸಿ ಸಹಿ ಪಡೆದಿದ್ದಳು. ಇದಾದ ಬಳಿಕ ಕೆಲಸ ಅಲರ್ಟ್ ಆಗಿರುವುದಾಗಿ ನಕಲಿ ದಾಖಲಾತಿಯೂ ತೋರಿಸಿದ್ದಳು. ಒಮ್ಮೆ ಹಣ ಪಡೆದ ಬಳಿಕ ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡ್ತಾ ಇದ್ಳು. ಟೆಂಡರ್ ಆಗಿದೆ ಬಿಡುಗಡೆ ಮಾಡಲು ಮತ್ತೆ 40 ಲಕ್ಷ ಹಣ ಡಿಮ್ಯಾಂಡ್ ಮಾಡುತ್ತಿದ್ದಳು. ಈ ವೇಳೆ ಅನುಮಾನಗೊಂಡ ಉದ್ಯಮಿ, ಮಹಿಳೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆಗ ಮಹಿಳೆ ದರ್ಶನಾ ಭಾರದ್ವಾಜ್ ಯಾವುದೇ ಡಿಆರ್ಡಿಓ ಸಿಬ್ಬಂದಿ ಅಲ್ಲ ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ದೂರಿನನ್ವಯ ದರ್ಶನಾ ಭಾರಧ್ವಾಜ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಬಂಧಿಸಿ ವಿಚಾರಣೆ ಮಾಡಿದಾಗ ಆಕೆಯ ಮೇಲೆ ಮತ್ತೆರಡು ಕೇಸ್ ಇರೋದು ಬಯಲಾಗಿದೆ.
ಹೆಚ್ಎಸ್ಆರ್ ಹಾಗೂ ಮಹದೇವಪುರ ಪೊಲೀಸರು ಈಗಾಗಲೇ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದು ಒಂದು ರೂಪಾಯಿ ಕೂಡ ರಿಕವರಿ ಮಾಡಲಾಗಿಲ್ಲ. ಅಸ್ಸಾಂನಲ್ಲಿ ಬೇರೆಯವರ ಮೂಲಕ ಹಲವು ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾಗಿ ತಿಳಿದು ಬಂದಿದೆ. ಸದ್ಯ ಎಲ್ಲಾ ಆಯಾಮದಲ್ಲೂ ರಿಕವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ