ಬಾಗಲಕೋಟೆ: ಅಕ್ಕನ ಮನೆಗೆ ನುಗ್ಗಿ ಬಾಮೈದನ ಅಟ್ಟಹಾಸ; ಕಲ್ಲಿನಿಂದಲೇ ಜಜ್ಜಿ ಇಬ್ಬರ ಕೊಲೆ
ಜಿಲ್ಲೆಯ ಬನಹಟ್ಟಿ ನಗರದ ಶನಿವಾರಪೇಟೆಯಲ್ಲಿ ಸುಂದರವಾಗಿದ್ದ ಸಂಸಾರದಲ್ಲಿ ನಿನ್ನೆ(ಮಾ.13) ಕೊಲೆಯಾಗಿತ್ತು. ಸಾವನ್ನಪ್ಪಿದ ಮನೆ ಒಡೆಯನ ಆಸ್ತಿ, ಕಲಹಕ್ಕೆ ನಾಂದಿಯಾಗಿತ್ತು. ಹೀಗೆ ಭೂಮಿಗಾಗಿ ನಡೆದ ಆ ಬಡಿದಾಟದಲ್ಲಿ ನಿನ್ನೆ ಇಬ್ಬರು ಹೆಣವಾಗಿದ್ದಾರೆ.
ಬಾಗಲಕೋಟೆ: ರಕ್ತ ನೀರಿನಂತೆ ಹರಿದಿದೆ. ಮನೆ ಮುಂದೆಯೇ ನೆತ್ತರ ಓಕುಳಿಯಾಗಿದೆ. ಅಲ್ಲಿನ ಘನಘೋರ ಕಂಡು ಊರವರೆಲ್ಲಾ ಬೆದರಿ ನಿಂತಿದ್ದರು. ಸ್ಪಾಟ್‌ಗೆ ಬಂದಿದ್ದ ಪೊಲೀಸರು ಸಂಜೆ ಹೊತ್ತಲ್ಲೇ ಬೆವತು ಹೋಗಿದ್ರು. ಹೌದು ಮನೆಗೆ ಬರಬೇಡ ಎಂದ ಬಾವನ ಸಹೋದರಿಯರನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬನಹಟ್ಟಿ ನಗರದ ಶನಿವಾರಪೇಟೆಯಲ್ಲಿ ನಿನ್ನೆ(ಮಾ.13) ನಡೆದಿದೆ. ಕಾಡಪ್ಪ ಭುಜಂಗ ಎಂಬುವವನೇ ಕೊಲೆ ಮಾಡಿರುವ ಆರೋಪಿ, ಬೋರವ್ವ ಮಿರ್ಜಿ (40), ಯಲ್ಲವ್ವ ಪೂಜಾರ (48) ಮೃತರು. ಬಾಮೈದನ ಅಟ್ಟಹಾಸಕ್ಕೆ ಮಹಿಳೆಯರಿಬ್ಬರು ಹೆಣವಾಗಿದ್ದಾರೆ. ಹೌದು ಬೆಳಗಿನಿಂದ ಸಂಜೆವರೆಗೂ ರಣರಣ ಬಿಸಿಲು, ಸಂಜೆಯಾಗುತ್ತಿದ್ದಂತೆ ಸ್ವಲ್ಪ ತಣ್ಣನೆ ಗಾಳಿ ಬೀಸಿತ್ತು. ಹೀಗೆ ತಂಪಿನ ವಾತಾವರಣದಲ್ಲಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಶಾಂತವಾಗಿತ್ತು. ಆದರೆ ಅದೇ ಹೊತ್ತಲ್ಲೇ ನುಗ್ಗಿದ್ದ ಹಂತಕ ರಕ್ತದ ಕೋಡಿ ಹರಿಸಿದ್ದಾನೆ.
ಅಂದಹಾಗೆ ಬನಹಟ್ಟಿಯ ಲಕ್ಷ್ಮೀನಗರ ನಿವಾಸಿ ಕಾಡಪ್ಪ ಭುಜಂಗ ಎಂಬಾತ ತನ್ನ ಸಹೋದರಿ ಬಂದವ್ವಳನ್ನ ಇದೇ ಊರಿನ ಶನಿವಾರ ಪೇಟೆಯಲ್ಲಿ ವಾಸವಾಗಿರುವ ಮಿರ್ಜಿ ಫ್ಯಾಮಿಲಿಗೆ ಕೊಟ್ಟು ಮದುವೆ ಮಾಡಿದ್ದ. ಇನ್ನು ಕಾಡಪ್ಪನ ಸಹೋದರಿಯ ಗಂಡ ಸಾವಿನ ಮನೆ ಸೇರಿದ್ದ. ವಿಷ್ಯ ಅಂದರೆ ಕಾಡಪ್ಪನ ಭಾವ ಸಾವಿನ ಮನೆ ಸೇರುತ್ತಿದ್ದಂತೆ ಆಸ್ತಿ ಕಲಹ ಶುರುವಾಗಿತ್ತು. ಎಲ್ಲಾ ಆಸ್ತಿ ನನಗೇ ಸೇರಬೇಕು ಎಂದು ಬಂದವ್ವ ಅಂದುಕೊಂಡಿದ್ರೆ, ಆಕೆಯ ಗಂಡನ ಸಹೋದರಿಯರು ಇದಕ್ಕೆ ಅಡ್ಡಿಯಾಗಿದ್ರು. ಒಂದು ವರ್ಷದಿಂದಲೂ ಹೀಗೆ ಜಗಳ ನಡೆದಿತ್ತು. ಆದರೆ ನಿನ್ನೆ ಸಂಜೆ ಮಾತ್ರ ತನ್ನ ಸಹೋದರಿಯ ಮನೆಗೆ ಬಂದಿದ್ದ ಕಾಡಪ್ಪ ಮತ್ತೆ ಆಸ್ತಿ ಜಗಳ ತೆಗೆದಿದ್ದ. ಈ ವೇಳೆ ಮನೆಯಲ್ಲಿದ್ದ ಬೋರವ್ವ ಹಾಗೂ ಯಲ್ಲವ್ವ, ನಮ್ಮ ಮನೆಗೆ ನೀನು ಬರಬೇಡ ಅಂದಿದ್ದಾರೆ ಅಷ್ಟೇ. ಅಷ್ಟಕ್ಕೆ ಕಾಡಪ್ಪ ಇಬ್ಬರನ್ನು ಕಲ್ಲಿನಿಂದಲೇ ಜಜ್ಜಿ ಕೊಲೆ ಮಾಡಿದ್ದ.
ಇದನ್ನೂ ಓದಿ:ಕಲಬುರಗಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ, ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆ; ಕೊಲೆ ಎಂದು ಆರೋಪಿಸಿದ ತಾಯಿ
ಇನ್ನು ಬಂದವ್ವನ ನಾದಿನಿಯಾದ ಯಲ್ಲವ್ವನ ಗಂಡ ಕೂಡ ತೀರಿಕೊಂಡಿದ್ದ. ಹೀಗಾಗಿ ಆಕೆ ತವರು ಮನೆ ಸೇರಿದ್ದಳು. ಇನ್ನು ಬೋರವ್ವನಿಗೆ ಮದುವೆ ಆಗಿರಲಿಲ್ಲ. ಹೀಗಾಗಿ ಅವರು ಕೂಡ ಈ ಆಸ್ತಿಯಲ್ಲಿ ನಮಗೂ ಪಾಲು ಬೇಕು ಅಂದಿದ್ರು. ಆದರೆ ಬಂದವ್ವ ಮಾತ್ರ ನಾದಿನಿಯರಿಗೆ ಆಸ್ತಿಪಾಲು ಕೊಡಲು ಒಪ್ಪಿರಲಿಲ್ಲ. ಬಂದವ್ವನಿಗೆ ಸಹೋದರ ಕಾಡಪ್ಪ ಬೆಂಬಲವಾಗಿ ನಿಂತಿದ್ದ. ಆದರೆ ನಿನ್ನೆ ಇಬ್ಬರ ಹೆಣ ಉರುಳಿಸಿದ್ದಾನೆ. ಈ ಡಬಲ್ ಮರ್ಡರ್ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಬನಹಟ್ಟಿ ಪೊಲೀಸರು ಹಂತಕ ಕಾಡಪ್ಪನನ್ನ ಅರೆಸ್ಟ್ ಮಾಡಿದ್ದಾರೆ. ಈ ಮರ್ಡರ್‌ಗೆ ಅಸಲಿ ಕಾರಣ ಏನು ಅನ್ನೋದ್ರ ತನಿಖೆಗೆ ಇಳಿದಿದ್ದಾರೆ.
ವರದಿ: ರವಿ ಮೂಕಿ ಟಿವಿ9 ಬಾಗಲಕೋಟೆ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ