ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ವಿರುದ್ಧವೇ FIR: ಆನೇಕಲ್ ಪೊಲೀಸರ ನಡೆಗೆ ಆಕ್ರೋಶ
ಬೆಂಗಳೂರಿನ ಆನೇಕಲ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ವಿರುದ್ಧವೇ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಕ್ಷ್ಯಗಳಿಲ್ಲದಿದ್ದರೂ ಸಂತ್ರಸ್ತೆ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ನಡೆಗೆ ಸಾರ್ವಜನಿಕರು ಮತ್ತು ಸಂತ್ರಸ್ತೆ ಕಿಡಿ ಕಾರಿದ್ದಾರೆ. ಮೇಲಧಿಕಾರಿಗಳು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಬೇಕು ಮತ್ತು ತನಿಖಾಧಿಕಾರಿಯನ್ನು ಬದಲಾಯಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಆನೇಕಲ್, ಡಿಸೆಂಬರ್ 07: ಲೈಂಗಿಕ ದೌರ್ಜನ್ಯಕ್ಕೊಳಗಾಗಿ ದೂರು ನೀಡಲು ಬಂದ ಸಂತ್ರಸ್ತೆ ವಿರುದ್ಧವೇ ಪೊಲೀಸರು ಎಫ್‌ಐಆರ್ ದಾಖಲು ಮಾಡಿರುವ ಬೆಂಗಳೂರಿನ ಆನೇಕಲ್ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತೆ ದೂರನ್ನು ದಿಕ್ಕು ತಪ್ಪಿಸಲು ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಣದಾಸೆಗೆ ಪೊಲೀಸರು ಆರೋಪಿ ಜೊತೆ ಶಾಮೀಲಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದರೆ, ನ್ಯಾಯ ದೊರಕಿಸಿ ಕೊಡಿ ಎಂದು ಸಂತ್ರಸ್ತ ಮಹಿಳೆ ಅಂಗಲಾಚಿ ಬೇಡಿಕೊಂಡಿದ್ದಾರೆ.
ಹೊಟ್ಟೆ ನೋವೆಂದು ಸ್ಕ್ಯಾನಿಂಗ್ಗೆ ಮಹಿಳೆ ಬಂದಿದ್ದ ವೇಳೆ ರೇಡಿಯಾಲಜಿಸ್ಟ್ ಜಯಕುಮಾರ್ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿತ್ತು. ಲೈಂಗಿಕ ದೌರ್ಜನ್ಯವೆಸಗಿರುವ ವಿಡಿಯೋ ಸಾಕ್ಷಿ ಕೂಡ ಇದ್ದು, ಠಾಣೆಗೆ ಬಂದ ಆರೋಪಿ ಬಂಧಿಸದೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಬಳಿಕ ಕರವೇ ಮತ್ತು ಸಾರ್ವಜನಿಕರ ಹೋರಾಟ ನಡೆಸಿದ ಪರಿಣಾಮ ಆರೋಪಿ ಬಂಧಿಸಲಾಗಿತ್ತು. ಆದರೆ ಈಗ ಆರೋಪಿ ಪತ್ನಿ ದೂರು ಆಧರಿಸಿ ಪೊಲೀಸರು ಸಂತ್ರಸ್ತೆಯ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿದ ರೆಡಿಯಾಲಜಿಸ್ಟ್
ಘಟನೆ ನಡೆದು 20 ದಿನಗಳ ಬಳಿಕ ಸುಳ್ಳು ದೂರು ನೀಡಿದ ಆರೋಪವನ್ನು ಆರೋಪಿ ಪತ್ನಿ ಮಾಡಿದ್ದು, ಸಂತ್ರಸ್ತೆ ಹನಿಟ್ರ್ಯಾಪ್ ಮತ್ತು ಹಣ ವಸೂಲಿ ಮಾಡಲು ಬಂದಿದ್ದರೆಂದು ದೂರಲಾಗಿದೆ. ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ಸಂತ್ರಸ್ತೆ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಬಲಾಢ್ಯರು ಮತ್ತು ಹಣದಾಸೆಗೆ ಪೊಲೀಸರು ಆರೋಪಿಗಳ ಜೊತೆಗೆ ಶಾಮೀಲಾಗಿದ್ದಾರೆ. ಹೀಗಾಗಿ ಮೇಲಧಿಕಾರಿಗಳು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಬೇಕು ಮತ್ತು ತನಿಖಾಧಿಕಾರಿ ತಿಪ್ಪೆಸ್ವಾಮಿಯನ್ನು ಬದಲಾಯಿಸಬೇಕೆಂದು ಒತ್ತಾಯಿಸಲಾಗಿದೆ. ಜೊತೆಗೆ ಸಂತ್ರಸ್ತೆ ವಿರುದ್ಧ ದಾಖಲಾದ FIR ರದ್ದು ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಹೊಟ್ಟೆ ನೋವಿನ ಕಾರಣ ಪತಿಯೊಂದಿಗೆ ಮಹಿಳೆ ಸ್ಕ್ಯಾನಿಂಗ್ ಸೆಂಟರ್ಗೆ ಬಂದಿದ್ದರು. ಈ ವೇಳೆ ಸ್ಕ್ಯಾನಿಂಗ್ ನೆಪದಲ್ಲಿ ರೇಡಿಯಾಲಜಿಸ್ಟ್ ಜಯಕುಮಾರ್ ಆಕೆಯ ಖಾಸಗಿ ಅಂಗಗಳಿಗೆ ಕೈ ಹಾಕಿದ್ದ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಹಾಕಿದ್ದು, ಈ ವಿಚಾರ ಹೊರಗೆ ಬಾಯ್ಬಿಡದಂತೆ ಧಮ್ಕಿ ಹಾಕಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಯಿಸೋದಾಗಿ ಬೆದರಿಕೆ ಹಾಕಿದ್ದ ಎಂಬ ಆರೋಪ ಆರಂಭದಲ್ಲಿ ಕೇಳಿಬಂದಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



