ಸ್ಕ್ಯಾನಿಂಗ್ಗೆ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಆನೇಕಲ್ನಲ್ಲೊಬ್ಬ ಕಾಮುಕ ರೇಡಿಯಾಲಜಿಸ್ಟ್
ಸ್ಕ್ಯಾನಿಂಗ್ ನೆಪದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಆನೇಕಲ್ನ ರೇಡಿಯಾಲಜಿಸ್ಟ್ ವಿರುದ್ಧ ಕೇಳಿಬಂದಿದೆ. ಸಂತ್ರಸ್ತೆ ದೂರು ದಾಖಲಿಸಿದ್ದರೂ, ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಮಹಿಳೆಯ ಜೊತೆ ರೇಡಿಯಾಲಜಿಸ್ಟ್ ವಿಕೃತಿ ಮೆರೆದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಂತ್ರಸ್ತ ಮಹಿಳೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು, ನವೆಂಬರ್ 12: ಸ್ಕ್ಯಾನಿಂಗ್ ಸೆಂಟರ್ಗೆ ಬರುವ ಮಹಿಳೆಯರ ಮೇಲೆ ರೇಡಿಯಾಲಜಿಸ್ಟ್ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆರೋಪ ಆನೇಕಲ್ ಪಟ್ಟಣದಲ್ಲಿ ಕೇಳಿಬಂದಿದೆ. ಖಾಸಗಿ ಸ್ಕ್ಯಾನಿಂಗ್ ಸೆಂಟರ್ನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಜಯಕುಮಾರ್ ವಿರುದ್ಧ ಆರೋಪ ಕೇಳಿಬಂದಿದ್ದು, ಸ್ಕ್ಯಾನಿಂಗ್ ನೆಪದಲ್ಲಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಟ್ಟೆ ನೋವಿನ ಕಾರಣ ಪತಿಯೊಂದಿಗೆ ಮಹಿಳೆ ಸ್ಕ್ಯಾನಿಂಗ್ ಸೆಂಟರ್ಗೆ ಹೋಗಿದ್ದಳು. ಈ ವೇಳೆ ಸ್ಕ್ಯಾನಿಂಗ್ ನೆಪದಲ್ಲಿ ರೇಡಿಯಾಲಜಿಸ್ಟ್ ಜಯಕುಮಾರ್ ಮಹಿಳೆ ಖಾಸಗಿ ಅಂಗಗಳಿಗೆ ಕೈ ಹಾಕಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಹಾಕಿರುವ ಆರೋಪಿ, ಈ ವಿಚಾರ ಹೊರಗೆ ಬಾಯ್ಬಿಡದಂತೆ ಮಹಿಳೆಗೆ ಧಮ್ಕಿ ಹಾಕಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಯಿಸೋದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಯ ದೃಶ್ಯವನ್ನು ಸಂತ್ರಸ್ತ ಮಹಿಳೆ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ, ಪೊಲೀಸರು ಆರೋಪಿ ಜಯಕುಮಾರ್ನನ್ನು ಈವರೆಗೆ ಬಂಧಿಸಿಲ್ಲ. ಬದಲಾಗಿ ಠಾಣೆಗೆ ಕರೆಸಿ ಬಿಟ್ಟುಕಳುಹಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ವಿಶೇಷ ಚೇತನ ಯುವತಿ ಅತ್ಯಾಚಾರ ಯತ್ನ: ಕಾಮುಕನಿಗೆ ಸ್ಥಳೀಯರಿಂದ ಬಿತ್ತು ಧರ್ಮದೇಟು
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಪಂಗನಾಮ
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿ ನಂಬಿ ಯುವಕನೋರ್ವ ಹಣ, ಬಂಗಾರ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 2 ತಿಂಗಳ ಹಿಂದೆ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಕವಿಪ್ರಿಯಾ ಎಂಬ ಹೆಸರಿನ ಯುವತಿಯನ್ನ ನವೆಂಬರ್ 1ರಂದು ಇಂದಿರಾನಗರದ ರೆಸ್ಟೋರೆಂಟ್ನಲ್ಲಿ ಯುವಕ ಭೇಟಿಯಾಗಿದ್ದ. ಬಳಿಕ ಇಬ್ಬರೂ ಮದ್ಯಪಾನ ಮಾಡಿದ್ದು, ಪಾರ್ಟಿ ಬಳಿಕ ಯುವಕನನ್ನ ಕವಿಪ್ರಿಯಾ ಒಂದು ಲಾಡ್ಜ್ಗೆ ಕರೆದೊಯ್ದಿದ್ದಳು. ಮಧ್ಯರಾತ್ರಿ ಆಕೆಯೇ ಊಟ ಆರ್ಡರ್ ಮಾಡಿ ತರಿಸಿಕೊಂಡಿದ್ದಳು. ನಂತರ ಕವಿಪ್ರಿಯಾ ಕೊಟ್ಟ ನೀರು ಕುಡಿದ ಯುವಕ ಪ್ರಜ್ಞೆ ತಪ್ಪಿದ್ದ ಎನ್ನಲಾಗಿದ್ದು, ಬೆಳಿಗ್ಗೆ ಎದ್ದು ನೋಡುವಾಗ ಯುವಕನ ಮೈಮೇಲಿದ್ದ ಚಿನ್ನದ ಸರ, ಚಿನ್ನದ ಕೈಬಳೆ ಮತ್ತು 10 ಸಾವಿರ ನಗದು ಕಳವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಇಂದಿರಾನಗರ ಠಾಣೆಗೆ ಯುವಕ ದೂರು ನೀಡಿದ್ದು, ಆರೋಪಿ ಯುವತಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:15 pm, Wed, 12 November 25



