ರಸ್ತೆಗುಂಡಿ ತಪ್ಪಿಸಲು ಹೋಗಿ ಆನೇಕಲ್ ಬಳಿ ಕೆರೆಗೆ ಬಿದ್ದ ಲಾರಿ: ಮುಂದಾಗಿದ್ದು ದುರಂತ
ಆನೇಕಲ್‌ನ ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಕೆರೆಗೆ ಬಿದ್ದ ಅಘಾತಕಾರಿ ಘಟನೆ ನಡೆದಿದೆ. ಕಿರಿದಾದ, ಹೊಂಡಗಳಿಂದ ಕೂಡಿದ ರಸ್ತೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಬಸ್ ಅಪಘಾತ ಸಂಭವಿಸಿತ್ತು. ಹೀಗಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಆನೇಕಲ್, ನವೆಂಬರ್ 25: ರಸ್ತೆ ಗುಂಡಿ ತಪ್ಪಿಸಲು ಹೋದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಕೆರೆಗೆ ಬಿದ್ಧ ಘಟನೆ ಆನೇಕಲ್‌ನ ಅತ್ತಿಬೆಲೆ-ಸರ್ಜಾಪುರ ಮುಖ್ಯರಸ್ತೆಯ ಬಿದರಗುಪ್ಪೆ ಬಳಿ ನಡೆದಿದೆ. ಘಟನೆಯಲ್ಲಿ ಕಲಬುರಗಿ ಮೂಲದ ಲಾರಿ ಚಾಲಕ ಮಹೇಶ್ (37) ಸಾವನ್ನಪ್ಪಿದ್ದಾರೆ. ಕ್ರೇನ್ ಸಹಾಯದಿಂದ ಲಾರಿ ಮತ್ತು ಚಾಲಕನ ಮೃತ ದೇಹವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ.
ಜಲ್ಲಿ ತುಂಬಿಕೊಂಡು ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ 12 ಚಕ್ರದ ಲಾರಿ ತೆರಳುತ್ತಿರುವ ವೇಳೆ ಚಾಲಕ ಮಹೇಶ್ ರಸ್ತೆಗುಂಡಿ ತಪ್ಪಿಸಲು ಹೋಗಿದ್ದಾರೆ. ಈ ವೇಳೆ ಲಾರಿ ನಿಯಂತ್ರಣ ಕಳೆದುಕೊಂಡಿದ್ದು, ಚಾಲಕನ ಸಮೇತವಾಗಿ ರಸ್ತೆ ಪಕ್ಕದ ಕೆರೆಗೆ ಉರುಳಿದೆ. ಕೆರೆ ಏರಿಮೇಲಿರುವ ರಸ್ತೆ ಬಹಳ ಕಿರಿದಾಗಿರುವ ಜೊತೆಗೆ, ರಸ್ತೆಯ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. RNS ಕಂಪನಿಗೆ ರಸ್ತೆ ಅಭಿವೃದ್ಧಿಯ ಟೆಂಡರ್ ನೀಡಲಾಗಿದ್ದು, ಕಂಪನಿ ಕೆರೆ ಏರಿ ಮೇಲಿನ ರಸ್ತೆ ವಿಸ್ತರಣೆ ಮಾಡದೆ ಹಾಗೇ ಬಿಟ್ಟಿದೆ. ಜೊತೆಗೆ ಇರುವ ಕಿರಿದಾದ ರಸ್ತೆಯೂ ಹೊಂಡಗಳಿಂದ ಕೂಡಿದೆ ಎಂದು ಸ್ಥಳೀಯರು ದೂರಿದ್ದಾರೆ. ಎರಡು ಕ್ರೇನ್ಗಳನ್ನ ಬಳಸಿ ಕೆರೆಯಲ್ಲಿ ಮುಳುಗಿದ್ದ ಲಾರಿ ಮತ್ತು ಚಾಲಕನ ಮೃತ ದೇಹ ಹೊರಕ್ಕೆ ತೆಗೆಯಲಾಗಿದೆ. SDRF, ಅಗ್ನಿಶಾಮಕ ತಂಡ, ಪೊಲೀಸರ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮೃತ ದೇಹವನ್ನ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ತಲ್ವಾರ್ ದಾಳಿ ಮಾಡಿ ಓಡ್ತಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದಿದ್ಹೇಗೆ ನೋಡಿ! ಇಲ್ಲಿದೆ ವಿಡಿಯೋ
ಕಳೆದ ವರ್ಷ ನಡೆದಿತ್ತು ಬಸ್ ಅಪಘಾತ
ಅತ್ತಿಬೆಲೆ-ಸರ್ಜಾಪುರ ಮುಖ್ಯರಸ್ತೆಯ ಬಿದರಗುಪ್ಪೆಯ ಕೆರೆ ಏರಿ ಬಳಿ ಕಿರಿದಾದ ರಸ್ತೆಯಿಂದಾಗಿ ಅಪಘಾತಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಕಳೆದ ಒಂದು ವರ್ಷದ ಹಿಂದೆಯೂ ಇಲ್ಲಿ ಅಪಘಾತ ನಡೆದಿತ್ತು. ಕೆರೆಯ ಏರಿಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದು, 18 ಜನ ಓಂಶಕ್ತಿ ಮಾಲಾಧಾರಿಗಳು ಗಾಯಗೊಂಡಿದ್ದರು. ಆದರೆ ಯಾವುದೇ ಪ್ರಾಣಹಾನಿ ಆಗಿರಲಿಲ್ಲ. ಈಗ ಮತ್ತೊಂದು ಅಂತಹುದೇ ಅವಘಡ ಸಂಭವಿಸಿದ್ದು ಓರ್ವನ ಸಾವಾಗಿದೆ ಎಂಬುದು ಸ್ಥಳೀಯರ ಮಾತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



