ಕ್ರಿಸ್ಮಸ್ಗೆ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜನೆ: ವಿಭಿನ್ನ ಶೈಲಿಯ ಕೇಕ್ ಸವಿದು ಎಂಜಾಯ್ ಮಾಡಿ
ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಅದಕ್ಕೂ ಮೊದಲೇ ಸಿಲಿಕಾನ್ ಸಿಟಿಯಲ್ಲಿ ಹಬ್ಬದ ಸೊಬಗು ಜೋರಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಅದ್ದೂರಿಯ ಕೇಕ್ ಶೋ ಆಯೋಜನೆ ಮಾಡಲಾಗಿದೆ. ಇಂದಿನಿಂದ ಜನವರಿ 01ರ ವರೆಗೂ ಕೇಕ್ ಶೋ ನಡೆಯಲಿದೆ. ಈ ಕೇಕ್ ಶೋಗೆ ಭೇಟಿ ನೀಡಿ ವಿಶೇಷ ರೀತಿಯ, ವಿಶೇಷ ವಿನ್ಯಾಸದ ಕೇಕ್ಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕೇಕ್ ಸವಿದು ಎಂಜಾಯ್ ಮಾಡಿ.
ಬೆಂಗಳೂರು, ಡಿ.16: ಸಿಲಿಕಾನ್ ಸಿಟಿಯಲ್ಲಿ ಕ್ರಿಸ್ಮಸ್ (Christmas) ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿದ್ದು, ಹಬ್ಬಕ್ಕೆ ಬೇಕಾದ ತಯಾರಿಗಳು ವಿಜೃಂಭಣೆಯಿಂದ ಸಾಗುತ್ತಿದೆ. ಹಬ್ಬದ ಸೊಬಗು ನಗರದಲ್ಲಿ ಜೋರಾಗಿದೆ. ಈ ಮಧ್ಯೆ ಕ್ರಿಸ್ಮಸ್ ಸಲುವಾಗಿ ಕೇಕ್ ಶೋ (Cake Show) ಆಯೋಜನೆ ಮಾಡಿದ್ದು, ಇಂದಿನಿಂದ ಶುರುವಾಗಿ ಜನವರಿ 01ರ ವರೆಗೂ ನಡೆಯಲಿದೆ. ಈ ಕೇಕ್ ಶೋಗೆ ಭೇಟಿ ನೀಡಿ ವಿಶೇಷ ರೀತಿಯ, ವಿಶೇಷ ವಿನ್ಯಾಸದ ಕೇಕ್ಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕೇಕ್ ಸವಿದು ಎಂಜಾಯ್ ಮಾಡಿ.
ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ಕೇಕ್ ಶೋ ಇಂದಿನಿಂದ ಜನವರಿ 1ರ ವರೆಗೆ ಯುಬಿ ಸಿಟಿ ಸಮೀಪದ ಸೇಂಟ್ ಜೋಸೆಫ್ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿದೆ. ಈ ಕೇಕ್ ಶೋ ಥಿಂಕ್ ಲೋಕಲ್- ಆಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ಕೇಕ್ ಗಳ ವಿನ್ಯಾಸ ಮಾಡಲಾಗಿದೆ. ಇನ್ನು ಈ ಕ್ರಿಸ್ಮಸ್ ಸಲುವಾಗಿಯೇ ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಸಿ ಪ್ರದರ್ಶನಕ್ಕೆ ಇರಿಸಲಾಗಿದ್ದು, 3ಡಿ ಸಕ್ಕರೆ-ಕೇಕ್ ರಚನೆಗೆ ಹೆಚ್ಚು ಒತ್ತು ನೀಡಲಾಗಿದೆ. ಸುಮಾರು 16 ಮಂದಿಯ ತಂಡದಿಂದ 23 ಪ್ರಕಾರದ ಕೇಕ್ ತಯಾರಿಸಲಾಗಿದೆ. ಈ ಕೇಕ್ ಶೋ ಸಲುವಾಗಿಯೇ ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್-ಸಕ್ಕರೆ ಬಳಕೆ ಮಾಡಲಾಗಿದೆ.
ಇದನ್ನೂ ಓದಿ: ಗರುಡ ಮಾಲ್ನಲ್ಲಿ ಮೆಡಿವಲ್ ಆರ್ಟ್ ಶೋ, ಕ್ರಿಸ್ ಸಂತೆ; ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ರಾಧಿಕಾ ನಾರಾಯಣ್
ಇನ್ನು, ಕೇಕ್ ಪ್ರದರ್ಶನದಲ್ಲಿ ಸಂಸತ್ತಿನ ಸೊಬಗು, ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ, ದಿ ನೇಕೆಡ್ ರೆಡ್ ವೆಲ್ವೆೆಟ್, ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ, ಡಾಲ್ ಕೇಕ್, ಫ್ರೀ ಶಕ್ತಿ ಸ್ಕೀಮ್, ಒಂಟೆ, ಕ್ರಿಸ್‌ಮಸ್ ಟ್ರೀ, ಕ್ರಿಸ್ಮಸ್ ಕೇಕ್ಗಳನ್ನ ಕೇಕ್ ಶೋನಲ್ಲಿ ಇರಿಸಲಾಗಿದೆ. ಇನ್ನು ಕೇಕ್ ಗಳು ಕರಗದಿರಲು ದಿನದ 24 ಗಂಟೆಗಳ ಕಾಲ ವಿದ್ಯುತ್ ದೀಪಗಳು ಬೆಳಗಲಿದ್ದು, ಸಕ್ಕರೆ ಲೇಪನವು ಕರಗದಂತೆ ಎಚ್ಚರಿಕೆ ವಹಿಸಲಾಗಿದೆ. ದೀಪದಿಂದ ಬರುವ ಬಿಸಿಗೆ ಸಕ್ಕರೆ ಗಟ್ಟಿಯಾಗುತ್ತದೆ. ಇನ್ನು ಶೋ ಪ್ರತಿ ದಿನ ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಕುಟುಂಬ ಸಮೇತವಾಗಿ ಹೋಗಿ ಕೇಕ್ ಶೋ ಎಂಜಾಯ್ ಮಾಡಬಹುದಾಗಿದೆ.
ಒಟ್ನಲ್ಲಿ, ಸಿಲಿಕಾನ್ ಸಿಟಿಯಲ್ಲಿ ಕ್ರಿಸ್ಮಸ್ ಹಬ್ಬದ ಸೊಬಗು ಜೋರಾಗಿದ್ದು, ವಿಕೆಂಡ್ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆಗಳಿವೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ