ಬೆಂಗಳೂರಿನಲ್ಲಿ ಧುತ್ತನೆ ಎದ್ದ ಮತ್ತೊಂದು ಈದ್ಗಾ ಗೋಡೆ ವಿವಾದ! ಸ್ಥಳೀಯ ಬಿಜೆಪಿ ಶಾಸಕ ಕುಮ್ಮಕ್ಕು?
7 ಎಕರೆ ವಿಸ್ತೀರ್ಣದ ಪಾರ್ಕ್ ಜಾಗದಲ್ಲಿ ಮುಕ್ಕಾಲು ಎಕರೆ ಜಾಗ ಈದ್ಗಾ ಗೋಡೆಗೆ ನಿರ್ಮಾಣ ಮಾಡಿದ್ದಾರೆ. ಸಚಿವ ಸೋಮಣ್ಣ ಅವರೇ ನಗರೋತ್ಥಾನ ಫಂಡ್ ನಲ್ಲಿ ನಿರ್ಮಾಣ ಮಾಡಿದ್ದಾರೆ- ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಭಾಸ್ಕರ್
ಬೆಂಗಳೂರು: ಬೆಂಗಳೂರಿನಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನದ ನಂತರ ಮತ್ತೊಂದು ಈದ್ಗಾ ಗೋಡೆ ವಿವಾದ ಧುತ್ತನೆ ಎದ್ದಿದೆ. ಇದೀಗ ಚಂದ್ರಾಲೇಔಟ್ ಚಂದ್ರಗಿರಿ ಬಿಡಿಎ ಪಾರ್ಕ್ ಜಾಗದಲ್ಲಿ ಈದ್ಗಾ ಗೋಡೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯ ಶಾಸಕರ ಅನುದಾನದಲ್ಲಿ ಪಾರ್ಕ್ ಜಾಗದಲ್ಲಿಯೇ ಅನಧಿಕೃತವಾಗಿ ಈದ್ಗಾ ಗೋಡೆ ನಿರ್ಮಾಣ ಮಾಡಿರುವ ಆರೋಪವಿದೆ (Edga Maidan Wall controversy).
ಈ ಮಧ್ಯೆ, ಬೆಂಗಳೂರಿನ ಗೋವಿಂದರಾಜ ನಗರದಲ್ಲಿ (Govindaraj Nagar) ಈದ್ಗಾ ಗೋಡೆ ತಲೆ ಎತ್ತಿದೆ. ರಾಜ್ಯ ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಶಾಸಕರಿಂದ ಮುಸ್ಲಿಂರ ಓಲೈಕೆ ನಿಟ್ಟಿನಲ್ಲಿ, ಇದು ಚುನಾವಣೆ ಗಿಮ್ಮಿಕ್ ಎಂದು ವಿಶ್ವ ಸನಾತನ ಪರಿಷತ್ ಅರೋಪ ಮಾಡಿದೆ. ರಾಮ-ಸೀತೆ-ಹಿಂದೂತ್ವ-ರಾಮ ಮಂದಿರ ನಿರ್ಮಾಣ ಅಂತಾ ಹೇಳಿಕೆ ನೀಡುವ ಬಿಜೆಪಿ ಶಾಸಕರು ಹಿಂದೂಗಳಿಗೆ ಮಂಕುಬೂದಿ ಎರಚಿ ಇದೀಗ ಚುನಾವಣೆ ಗಿಮ್ಮಿಕ್ ಮಾಡ್ತಿದಾರೆ. ಚುನಾವಣೆ ಬರುತ್ತಿದ್ದಂತೆ ಮುಸ್ಲಿಂ ಬಾಂಧವರ ನೆರವಿಗೆ ಹೋಗ್ತಾರೆ. ಹಿಂದೂ ಮತ್ತು ಮುಸ್ಲಿಮರ ಮದ್ಯೆ ಗಲಾಟೆ ಮಾಡಿಸ್ತಾರೆ, ಯಾರೇ ಸತ್ತರೂ ಅದರ ಲಾಭ ಪಡೆಯುತ್ತಾರೆ. ಸುಮಾರು 30 ಸಾವಿರ ಮುಸ್ಲಿಂ ಮತದಾರರ ಓಲೈಕೆಗೆ ಸ್ಥಳೀಯ ಬಿಜೆಪಿ ಶಾಸಕ ಈ ಹೈಡ್ರಾಮ ನಡೆಸಿದ್ದಾರೆ ಎಂದು ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಎಸ್. ಭಾಸ್ಕರನ್ ಆರೋಪ ಮಾಡಿದ್ದಾರೆ.
ಈ ಗೋಡೆ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ನೆರವಾಗಿದೆ. ನಗರೋತ್ತನ ಅಡಿಯಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚ ಮಾಡಿ ಈದ್ಗಾ ಗೋಡೆ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಬಿಜೆಪಿ ಶಾಸಕ ಕಳೆದ ಶನಿವಾರ ಗುದ್ದಲಿ ಪೂಜೆ ಮಾಡಿಸಿದ್ದಾರೆ. ರಾಜಕೀಯ ಹಿತಾಸಕ್ತಿಗೋಸ್ಕರ ಪಾರ್ಕ್ ಜಾಗದಲ್ಲಿ ಈದ್ಗಾ ಗೋಡೆ ನಿರ್ಮಾಣ ಮಾಡಲಾಗಿದೆ ಅಂತಾ ಹಿಂದೂ ಸಂಘಟನೆಗಳು ಆರೋಪ ಮಾಡಿವೆ. ಅನಧಿಕೃತ ಈದ್ಗಾ ಗೋಡೆ ತೆರವು ಮಾಡಬೇಕು. ಸರ್ಕಾರ ಕೂಡಲೇ ಈದ್ಗಾ ಗೋಡೆ ತೆರವು ಮಾಡಬೇಕು. ಇಲ್ಲವಾದ್ರೆ ಮುಂದಿನ ಅನಾಹುತಕ್ಕೆ ಸರ್ಕಾರವೇ ನೇರ ಕಾರಣವೆಂದು ಹಿಂದೂಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರ್ ಹೇಳುವುದೇನು?
ಸಚಿವ ಸೋಮಣ್ಣ ಅವರೇ ಕುಮ್ಮಕ್ಕು ನೀಡಿ ನಿರ್ಮಾಣ ಮಾಡಿರುವ ಈದ್ಗಾ ಗೋಡೆ ಇದಾಗಿದೆ. 7 ಎಕರೆ ವಿಸ್ತೀರ್ಣದ ಪಾರ್ಕ್ ಜಾಗದಲ್ಲಿ ಮುಕ್ಕಾಲು ಎಕರೆ ಜಾಗ ಈದ್ಗಾ ಗೋಡೆಗೆ ನಿರ್ಮಾಣ ಮಾಡಿದ್ದಾರೆ. ಸಚಿವ ಸೋಮಣ್ಣ ಅವರೇ ನಗರೋತ್ಥಾನ ಫಂಡ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಬಿಜೆಪಿ ಹಿಂದೂಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆದರೀಗ ಮತ್ತೊಂದು ಬಲಿಷ್ಠ ಕಾಂಗ್ರೆಸ್ ಪಕ್ಷವಾಗ್ತಿದೆ. ಎರಡು ವಾರದೊಳಗೆ ಈದ್ಗಾ ಗೋಡೆ ತೆರವು ಮಾಡದೇ ಹೋದರೆ, ಅಧಿಕಾರಿಗಳ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಕರೆದುಕೊಂಡು ಹೋಗ್ತೇವೆ. ಬಿಬಿಎಂಪಿ ಅಧಿಕಾರಿಗಳಿಗೆ ನಾಳೆ ಮನವಿ ಮಾಡ್ತೇವೆ ಎಂದು ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಭಾಸ್ಕರ್ ಹೇಳಿದ್ದಾರೆ.