
ಬೆಂಗಳೂರು, ಫೆಬ್ರವರಿ 5: ಸಾಮಾನ್ಯವಾಗಿ ಟಿಕೆಟ್ ಪೇಪರ್ ರೋಲ್ಗಳನ್ನು ಪ್ರಯಾಣಿಕರಿಗೆ ಟಿಕೆಟ್ ನೀಡಲು ಬಳಸುತ್ತಾರೆ. ಆದರೆ, ಟಿಕೆಟ್ ನೀಡಲು ಬಳಸುವ ಎಲೆಕ್ಟ್ರಿಕ್ ಬಸ್ನ ಪೇಪರ್ ಟಿಕೆಟ್ ರೋಲ್ ಅನ್ನು ಇಲ್ಲೊಬ್ಬ ವ್ಯಾಪಾರಿ ಹಣ್ಣು ಹಾಗೂ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಬಿಲ್ ಕೊಡಲು ಬಳಸುತ್ತಿದ್ದಾನೆ!
ಬೆಂಗಳೂರಿನ ಯಲಹಂಕದ ಅಟ್ಟೂರು ಲೇಔಟ್ನ ಎಸ್ಆರ್ಎಸ್ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಟಿಕೆಟ್ ರೋಲ್ ಉಪಯೋಗಿಸಿ, ತರಕಾರಿ ಹಾಗೂ ಹಣ್ಣಿನ ರೇಟ್ ಮುದ್ರಿಸಿ ಕೊಟ್ಟಿದ್ದ. ಈ ಬಗ್ಗೆ ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಬಿಎಂಟಿಸಿಗೆ ಮಾಹಿತಿ ನೀಡಿದ್ದರು. ಬಿಎಂಟಿಸಿ ಅಧಿಕಾರಿಗಳು ಅಂಗಡಿಗೆ ಹೋಗಿ ಪರಿಶೀಲಿಸಿದಾಗ ಎರಡು ಟಿಕೆಟ್ ರೋಲ್ ಪತ್ತೆಯಾಗಿದೆ.
ವ್ಯಾಪಾರಿ ಮುರಳಿಕೃಷ್ಣ ಮೇಲೆ ಯಲಹಂಕ ನ್ಯೂ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡರು, ಇದು ಬಿಎಂಟಿಸಿ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳ ನಿರ್ಲಕ್ಷ್ಯ ಎಂದಿದ್ದಾರೆ.
ಈ ಸಂಬಂಧ ಯಲಹಂಕ ಪೋಲಿಸ್ ಸ್ಟೇಷನ್ಗೆ ಬಿಎಂಟಿಸಿ ದೂರು ನೀಡಿದೆ. ಯಲಹಂಕದ ಸುತ್ತಮುತ್ತಲಿನ ಸಾಕಷ್ಟು ಅಂಗಡಿಯಲ್ಲಿ ಬಿಎಂಟಿಸಿ ಟಿಕೆಟ್ ರೋಲ್ನಲ್ಲಿ ತಮ್ಮ ಅಂಗಡಿಯ ಬಿಲ್ ಗಳನ್ನು ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಈ ಹಿಂದೆ ಇನ್ಸೆಂಟಿವ್ಗಾಗಿ ಕಂಡಕ್ಟರ್ಗಳು ಬಿಎಂಟಿಸಿಯ ಶಕ್ತಿ ಯೋಜನೆಯ ಟಿಕೆಟ್ಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಇದೀಗ ಟಿಕೆಟ್ ರೋಲ್ ಅಕ್ರಮ ಬಯಲಾಗಿದೆ.
ಬಿಎಂಟಿಸಿ ಟಿಕೆಟ್ ರೋಲ್ಗಳನ್ನು ಕದ್ದು ಮಾರಾಟ ಮಾಡಿದವರು ಸಿಕ್ಕಿಬಿದ್ದರೆ ಅಮಾನತಾಗುವುದು ಖಚಿತ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: Aero India 2025: ಏರ್ ಶೋಗೆ ಬರುವವರಿಗೆ ಬಿಎಂಟಿಸಿ ಉಚಿತ ಬಸ್ ವ್ಯವಸ್ಥೆ, ಈ ಜಾಗದಲ್ಲಿ ಪಾರ್ಕಿಂಗ್
ಒಟ್ಟಿನಲ್ಲಿ ಕಳೆದ ವಾರವಷ್ಟೇ ಬಿಎಂಟಿಸಿ ಬಸ್ಗಳ ಮೇಲೆ ಜಾಹೀರಾತು ಹಾಕುವ ವಿಚಾರದಲ್ಲಿ ಅಕ್ರಮವೆಸಗಿದ್ದು ಬಯಲಿಗೆ ಬಂದಿತ್ತು. ಇದೀಗ ಪ್ರಯಾಣಿಕರಿಗೆ ನೀಡುವ ಟಿಕೆಟ್ಗೆ ಬೇಕಿರುವ ರೋಲ್ ಅನ್ನು ಮಾರಾಟ ಮಾಡುತ್ತಿರುವುದು ಬಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ