ವಿಧಾನಸೌಧ ಭದ್ರತೆ ಹೆಸರಲ್ಲಿ ಉಪ್ಪಾರಪೇಟೆಯಲ್ಲಿ ರೋಲ್ಕಾಲ್; ಎಎಸ್ಐ ಅಮಾನತ್ತು
ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪಾರಪೇಟೆ ಠಾಣೆಗೆ ಶ್ರೀನಿವಾಸ್ ಬರುತ್ತಿದ್ದರು. ಅಲ್ಲದೇ ಅಪರಾಧಗಳಲ್ಲಿ ಭಾಗಿಯಾದವರ ಬಳಿ ಲಂಚ ಸ್ವೀಕರಿಸಿ ಎಫ್ಐಆರ್ ದಾಖಲಿಸದೆ ಹಾಗೆಯೇ ಕಳಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ನಗರದ ಉಪ್ಪಾರಪೇಟೆ ಠಾಣೆಯಿಂದ ವಿಧಾನಸೌಧ (Vidhana Soudha) ಠಾಣೆಗೆ ವರ್ಗಾವಣೆಗೊಂಡು 11 ತಿಂಗಳಾದರೂ ಕೆಲಸಕ್ಕೆ ಹಾಜರಾಗದೆ ರೋಲ್ಕಾಲ್(Roll Call) ಮಾಡುತ್ತಿದ್ದ ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ASI) ಅವರನ್ನು ಅಮಾನತು ಮಾಡಲಾಗಿದೆ. ಉಪ್ಪಾರಪೇಟೆ ಠಾಣೆಯಲ್ಲಿ ಹಿರಿಯ ಅಧಿಕಾರಿಗಳಿಗೆ ತಿಳಿಯದಂತೆ ಅಕ್ರಮ ಕೆಲಸ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಎಎಸ್ಐ ಅಧಿಕಾರಿಯ ಅಧಿಕಾರ ದುರುಪಯೋಗ ಬೆಳಕಿಗೆ ಬಂದಿದ್ದು, ಅಮಾನತ್ತು ಮಾಡಲಾಗಿದೆ.
ಉಪ್ಪಾರಪೇಟೆ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಶ್ರೀನಿವಾಸ್ ಶೆಟ್ಟಿ ಅವರನ್ನು ಕಳೆದ ವರ್ಷದ ಆರಂಭದಲ್ಲಿ ವಿಧಾನಸೌಧ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ವರ್ಗಾವಣೆಯಾಗಿ 11 ತಿಂಗಳುಗಳು ಕಳೆದರೂ, ಶ್ರೀನಿವಾಸ್ ಕೆಲಸಕ್ಕೆ ಹಾಜರಾಗಿಲ್ಲ. ಇನ್ನೂ ಉಪ್ಪಾರಪೇಟೆ ಠಾಣೆಯಲ್ಲಿ ಸರಿಯಾದ ಆದೇಶವಿಲ್ಲದೆ ಇದ್ದರೂ ಕೆಲಸ ಮುಂದುವರೆಸಿದರು ಎಂಬ ಆರೋಪ ಕೂಡ ಕೇಳಿ ಬಂದಿದೆ.
ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪಾರಪೇಟೆ ಠಾಣೆಗೆ ಶ್ರೀನಿವಾಸ್ ಬರುತ್ತಿದ್ದರು. ಅಲ್ಲದೇ ಅಪರಾಧಗಳಲ್ಲಿ ಭಾಗಿಯಾದವರ ಬಳಿ ಲಂಚ ಸ್ವೀಕರಿಸಿ ಎಫ್ಐಆರ್ ದಾಖಲಿಸದೆ ಹಾಗೆಯೇ ಕಳಿಸುತ್ತಿದ್ದರು. ಅಷ್ಟೇ ಅಲ್ಲ ತಮ್ಮ ಕಾನೂನುಬಾಹಿರ ವ್ಯವಹಾರವನ್ನು ನಡೆಸಲು, ಇದೇ ಅಪರಾಧಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಠಾಣೆಯನ್ನು ಅಡ್ಡೆಯಾಗಿ ಬಳಸಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಹಿರಿಯ ಅಧಿಕಾರಿಗಳು ಸೇರಿದಂತೆ ಯಾರೂ ಅವರನ್ನು ಈವರೆಗೆ ಪ್ರಶ್ನಿಸಲಿಲ್ಲ. ಇತ್ಯರ್ಥವಾಗದ ಕೆಲವು ಪ್ರಮುಖ ಪ್ರಕರಣಗಳ ತನಿಖೆಗೆ ಅವರ ಅಗತ್ಯವಿತ್ತು ಎಂದು ಆರೋಪಿಸಿ ಉಪ್ಪಾರಪೇಟೆ ಪೊಲೀಸರು ಶ್ರೀನಿವಾಸ್ ಶೆಟ್ಟಿಯನ್ನು ಉಳಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಬುಧವಾರ ಗಾಂಧಿನಗರದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಅಕ್ರಮವಾಗಿ ಬಾರ್ ನಡೆಸಿರುವುದು ಬೆಳಕಿಗೆ ಬಂದಿದೆ. ಘಟನೆಯ ನಂತರ ಶ್ರೀನಿವಾಸ್ ಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ. ಸದ್ಯ ಈ ಪ್ರಕರಣವು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಕಾರ್ಯ ವೈಖರಿಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ. ಜತೆಗೆ 11 ತಿಂಗಳಿಂದ ಎಎಸ್‌ಐ ಕೆಲಸಕ್ಕೆ ಹಾಜರಾಗದಿದ್ದರೂ ವಿಧಾನಸೌಧ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಹಲವು ಅನುಮಾನಗಳಿಗೆ ದಾರಿ ಮಾಡಿದೆ.
ಇದನ್ನೂ ಓದಿ: Video: ತನ್ನ ಶಾಲೆಯ ಶಿಕ್ಷಕಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಅಧಿಕಾರಿ ಬಳಿ ಹಠ ಮಾಡಿದ 2ನೇ ಕ್ಲಾಸ್ ಹುಡುಗ !
ಮೈಸೂರು: 45ನೇ ಬ್ಯಾಚ್ ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳ ನಿರ್ಗಮನ ಪಥಸಂಚಲನ; ಯಾರೆಲ್ಲಾ ಆಯ್ಕೆಯಾಗಿದ್ದಾರೆ ಗೊತ್ತಾ?
Published On - 3:37 pm, Mon, 14 March 22